ರಾಂಚಿ : “ಛತ್ತೀಸ್‌ಗಢ ಗೃಹ ಸಚಿವ ರಾಮಸೇವಕ್ ಪೈಕ್ರಾ ಅವರ ಸೋದರ ಸಂಬಂಧಿ ಶಮೋಧ್ ಪೈಕ್ರಾ ಅವರು 2014ರಲ್ಲಿ ನಾವು ಜತೆಯಾಗಿ ಶಿಕ್ಷಣ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಮಹಿಳೆಯೊಬ್ಬರು ದೂರಿದ್ದಾರೆ.
“ನಾವು ಜತೆಯಾಗಿ ಕಲಿಯುತ್ತಿದ್ದ ದಿನಗಳಲ್ಲಿ ಪರಸ್ಪರ ನಿಕಟರಾಗಿದ್ದಾಗ ಶಮೋಧ್ ನನ್ನ ಸಖ್ಯ ಬೆಳೆಸಿಕೊಂಡು, ನನ್ನ ಮೇಲೆ ಅತ್ಯಾಚಾರ ಎಸಗಿದ’ ಎಂದು ಈಗ ಎರಡೂವರೆ ವರ್ಷದ ಮಗುವಿನ ತಾಯಿಯಾಗಿರುವ ಮಹಿಳೆ ಆರೋಪಿಸಿದ್ದಾರೆ.
“ಶಮೋಧ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ದೇಹ ಸುಖ ಪಡೆದು ನನ್ನನ್ನು ವಂಚಿಸಿದ. ನಾನು ಗರ್ಭಿಣಿ ಎಂದು ತಿಳಿದಾಕ್ಷಣ ಆತ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ. ಆತ ನನಗೆ ಗರ್ಭಪಾತ ಮಾಡಿಸುವ ಉದ್ದೇಶದಲ್ಲಿ, ಡಿಎನ್‌ಎ ಪರೀಕ್ಷಿಸುವ ಸುಳ್ಳು ನೆಪ ಹೇಳಿ, ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ’ ಎಂದು ಮಹಿಳೆಯು ಪೊಲೀಸರಲ್ಲಿ ದಾಖಲಿಸಿರುವ ದೂರಿನಲ್ಲಿ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
“ಆದರೆ ನಾನು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಪಡೆದೇ ತೀರಲು ನಿರ್ಧರಿಸಿದೆ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಸೂರಜ್‌ಪುರ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ಜಿ ಜೈಸ್ವಾಲ್ ಹೇಳಿದ್ದಾರೆ.