ಜಮೈಕ: ವೆಸ್ಟ್ ಇಂಡೀಸ್ ಕ್ರಿಕೆಟಿಗ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಭಾರತದ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವೈಯಕ್ತಿಕ ಸಂದೇಶ ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.
“ನಾನು 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನರುಚ್ಚರಿಸುವ ವೈಯಕ್ತಿಕ ಸಂದೇಶದೊಂದಿಗೆ ನಾನಿಂದು ಎಚ್ಚರಗೊಂಡೆ. ಯೂನಿವರ್ಸ್ ಬಾಸ್ ಮತ್ತು ನಫ್ ಕಡೆಯಿಂದ ಪ್ರೀತಿಯ ಅಭಿನಂದನೆಗಳು” ಎಂದು ಗೇಲ್ ಟ್ವೀಟ್ ಮಾಡಿದ್ದಾರೆ.
ಎಡಗೈ ಆರಂಭಿಕ ಬ್ಯಾಟರ್ ಗೇಲ್, ಮುಖ್ಯವಾಗಿ ಅವರ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೊಂದಿಗೆ ನಿಕಟ ಸಂಬಂಧದಿಂದಾಗಿ ಭಾರತದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
ಇದನ್ನೂ ಓದಿ:ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ
ಹಲವು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಪ್ರಮುಖ ಭಾಗವಾಗಿದ್ದ ಕ್ರಿಸ್ಟೋಫರ್ ಹೆನ್ರಿ ಗೇಲ್ ನಂತರ ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದರು. ಈ ಬಾರಿಯ ಐಪಿಎಲ್ ಗೆ ಗೇಲ್ ತಮ್ಮ ಹೆಸರು ನಮೂದಿಸಿಲ್ಲ.
ಗೇಲ್ ಅವರು 103 ಟೆಸ್ಟ್, 301 ಏಕದಿನ ಮತ್ತು 79 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಲು 42 ವರ್ಷದ ಗೇಲ್ ಇನ್ನೂ ಮುಂದಾಗಿಲ್ಲ.