ಮಧುಗಿರಿ: ಮೈಸೂರು ಸಂಸ್ಥಾನದ ಅರಸ ಶ್ರೀ ಜಯಚಾಮರಾಜೇಂದ್ರ ಒಡೆಯರ್ ನಾಡಿನ ಸಾಮಾಜಿಕ ನ್ಯಾಯದ ಹರಿಕಾರರಾಗಿ ರಾಜಪ್ರಭುತ್ವದಲ್ಲೇ ಚರಿತ್ರೆ ಸೃಷ್ಟಿಸಿದ್ದರು ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡಭವನದಲ್ಲಿ ತಾಲೂಕು ಕಸಾಪದಿಂದ ನಡೆದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿ, ದೇಶದ ಇತಿಹಾಸದಲ್ಲಿ 550 ರಾಜರಿದ್ದು, ಇಬ್ಬರು ರಾಜರಷ್ಟೇ ಸಾಮಾಜಿಕ ಕಳಕಳಿ ಹೊಂದಿದ್ದರು. ಪ್ರಜೆಗಳಂತೆಯೇ ಬದುಕಿ ಅವರಿಗಾಗಿ ಹಲವು ಯೋಜನೆ ಜಾರಿಗೆ ತಂದರು. ಅವರಲ್ಲಿ ಜಯಚಾಮರಾಜೇಂದ್ರ ಒಡೆಯರ್, ಮಹಾರಾಷ್ಟ್ರದ ಶಾಹು ಮಹಾರಾಜರು.
ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲೇ ಸ್ವತಂತ್ರ ಸಂಗ್ರಾಮ ಮೈಸೂರಲ್ಲಿ ಬೇಡ. ಇಲ್ಲಿ ಪ್ರಜೆಗಳಿಗೆ ಸೂಕ್ತ ನ್ಯಾಯ ಸಿಗುತ್ತಿದೆ ಎಂದು ಗಾಂಧೀಜಿ ಪ್ರಶಂಸಿಸಿದ್ದರು. ಮಹಿಳೆ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ಧ ಹಲವು ಕಾನೂನು ಜಾರಿಗೆ ತಂದರು. ಅಸ್ಪೃಶ್ಯರಿಗೆ ಕಡ್ಡಾಯ ಶಿಕ್ಷಣ, ದೇವದಾಸಿ ಪದ್ಧತಿ ನಿಷೇಧ, ಬಾಲ್ಯ ವಿವಾಹ ನಿಷೇಧ, ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ಇನ್ನಿತರೆ ಮಹತ್ವದ ಯೋಜನೆ ಜಾರಿಗೊಳಿಸಿದ್ದರು.
ಅಸ್ಪೃಶ್ಯರಿಗೆ ಶಾಲೆ ತೆರೆದು ಸಂಸ್ಕೃತ ಪಾಠ ಕಲಿಯಲು ಅವಕಾಶ ನೀಡಿದ್ದರು. ಇದರೊಂದಿಗೆ ಕನ್ನಡ ಸಾಹಿತ್ಯ, ಕಲೆ, ನಾಟಕ ಹಾಗೂ ನುಡಿ ವಿಚಾರವಾಗಿ ಹಲವಾರು ಯೋಜನೆ ನೀಡಿದ್ದರು ಎಂದು ಸ್ಮರಿಸಿದರು. ಅರಮನೆಯ ಒಡವೆಯೊಂದಿಗೆ ಪತ್ನಿಯ ಒಡವೆ ಮಾರಿ ಕೆ.ಆರ್.ಎಸ್. ಜಲಾಶಯ ನಿರ್ಮಿಸಿ ನಾಡಿನ ರೈತರಿಗೆ ವಿದ್ಯುತ್ ಹಾಗೂ ಕುಡಿಯುವ, ಕೃಷಿಗೆ ನೀರು ನೀಡಿದ ಮಹಾತ್ಮ. ಇಂದು ಇವರ ಜನ್ಮ ಶತಮಾನೋತ್ಸವ ತಾಲೂಕು ಕಸಾಪದಿಂದ ಆಚರಿಸುತ್ತಿರುವುದು ಸಾರ್ಥಕ.
ಮಧುಗಿರಿಯಲ್ಲಿಯೂ ಕನ್ನಡ ಭವನ ನಿರ್ಮಾಣವಾಗಲು 50 ಲಕ್ಷ ರೂ. ಅನುದಾನ ಶಾಸಕರೊಡಗೂಡಿ ನೀಡಲು ಪ್ರಯತ್ನಿಸುತ್ತೇನೆ. ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಶ್ರಮ ಭವನ ನಿರ್ಮಾಣಕ್ಕೆ ಕಾರಣ ಎಂದರು. ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಕನ್ನಡಭವನ ನಿರ್ಮಾಣಕ್ಕೆ 2 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಡಿಸಿಸಿ ಬ್ಯಾಂಕಿನಿಂದ ಕೆ.ಎನ್.ರಾಜಣ್ಣ 50 ಲಕ್ಷ ರೂ. ನೀಡಿದ್ದು, ಶಾಸಕ ವೀರಭದ್ರಯ್ಯ 10 ಲಕ್ಷ ನೀಡಿಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಉಪನ್ಯಾಸಕ ಪ್ರೊ.ಕಾಮರಾಜು ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಮುನೀಂದ್ರ ಕುಮಾರ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಡಾ.ನಾಗಲಿಂಗಾಚಾರ್, ಕಸಾಪ ಸಂಚಾಲಕ ಲಕ್ಷ್ಮೀನರಸಯ್ಯ, ಕಾರ್ಯದರ್ಶಿ ನರಸೇಗೌಡ, ಮಾಜಿ ಅಧ್ಯಕ್ಷರಾದ ಪ.ವಿ.ಸುಬ್ರಹ್ಮಣ್ಯ, ಕೃಷ್ಣಪ್ಪ, ರಂಗಕರ್ಮಿ ಎಂ.ಎನ್.ನರಸಿಂಹಮೂರ್ತಿ, ನೂರಾರು ಅಭಿಮಾನಿಗಳು ಇದ್ದರು.