ರಾಯಚೂರು: ಸಮೀಪದ ಮನ್ಸಲಾಪುರ ಮರ್ಚೆಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಮಾಟ ಮಾಡಿಸಿದ್ದು ಪ್ರಯಾಣಿಕರು ಆತಂಕದಲ್ಲೇ ಓಡಾಡುವಂತಾಗಿದೆ.
ಮರ್ಚೆಡ್ ರಾಯಚೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆ ಬಳಿ ಭಾನುವಾರ ರಾತ್ರಿ ಈ ಕೃತ್ಯ ಎಸಗಲಾಗಿದೆ. ಮೂರು ರಸ್ತೆಗಳು ಸೇರುವುದರಿಂದ ಮಾಡಿರಬಹುದು.
ನಾಲ್ಕು ಮಡಕೆಗಳಿಗೆ ಕರಿ ಬಟ್ಟೆ ಸುತ್ತಲಾಗಿದ್ದು ಅದರ ಪಕ್ಕ ನಾಲ್ಕು ಮಣ್ಣಿನ ಗೊಂಬೆಗಳನ್ನು ಮಾಡಲಾಗಿದೆ. ಅವುಗಳಿಗೆ ಟಾಚನ್ ಪಿನ್ ಗಳನ್ನು ಚುಚ್ಚಲಾಗಿದೆ. ಅದರ ಜತೆಗೆ ನಿಂಬೆಹಣ್ಣು, ಕವಡೆ, ಈರುಳ್ಳಿ ಮೊಟ್ಟೆಗಳನ್ನು ಇಡಲಾಗಿದೆ. ಹತ್ತಾರು ದೀಪಗಳನ್ನು ಹೊತ್ತಿಸಲಾಗಿದೆ. ಇದು ಭಾನಾಮತಿ ಇರಬಹುದು ಎಂದು ದಾರಿಹೋಕರು ಶಂಕಿಸುತ್ತಿದ್ದಾರೆ.
ಇದು ಮುಖ್ಯರಸ್ತೆಯಾಗಿದ್ದರಿಂದ ನಿತ್ಯ ನೂರಾರು ಜನ ಓಡಾಡುತ್ತಾರೆ. ಇದನ್ನು ಕಂಡು ಅವರಿಗೆ ಭಯಭೀತರಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇದೇ ಗ್ರಾಮ ಸಮೀಪದ ಬೈಪಾಸ್ ರಸ್ತೆಯಲ್ಲೂ ಭಾರೀ ಪ್ರಮಾಣದ ಮಾಟ ಮಾಡಿಸಲಾಗಿತ್ತು. ಪದೇಪದೆ ಇಂಥ ಘಟನೆ ಮರುಕಳಿಸುತ್ತಿದ್ದರು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.