ಒಂದು ದೊಡ್ಡ ಕಾಡು. ಅಲ್ಲಿ ನರಿ ದಂಪತಿಗಳು ವಾಸವಾಗಿದ್ದವು. ಅವುಗಳಿಗೆ ಒಂದು ಪುಟಾಣಿ ನರಿ ಮರಿ ಇತ್ತು. ಪುಟಾಣಿ ನರಿ ತುಂಬಾ ತರಲೆಯದು. ಯಾವಾಗಲೂ ಕೂಡ ಕಾಡಿನ ಇತರೆ ಪ್ರಾಣಿಗಳಿಂದ ಹೆತ್ತ ನರಿಗಳಿಗೆ ದೂರುಗಳು ಬರುತ್ತಿದ್ದವು. ಪ್ರಾಣಿಗಳ ಮಧ್ಯೆ ಜಗಳ ಹಚ್ಚುವುದು, ಬೇರೆ ಬೇರೆ ಪ್ರಾಣಿಗಳ ಮರಿಗಳಿಗೆ ಗೋಳೊ ಹೊಯ್ದುಕೊಳ್ಳುವುದು, ಪಕ್ಷಿಗಳ ಮೊಟ್ಟೆಗಳನ್ನು ಕದ್ದು ಬಚ್ಚಿಡುವುದು, ಕಾಡು ಕೋಳಿಗಳನ್ನು ಅಟ್ಟಿಸಿಕೊಂಡು ಹೋಗಿ ಹಿಂಸಿಸುವುದು ಹೀಗೆಲ್ಲಾ ಮಾಡುತ್ತಿತ್ತು. ತಂದೆ ತಾಯಿ ನರಿಗಳು ಮರಿ ನರಿಯನ್ನು ಕೂರಿಸಿಕೊಂಡು ಬುದ್ಧಿ ಹೇಳಿದರೂ ಪುಟಾಣಿ ನರಿ ತರ್ಲೆ ಬುದ್ಧಿ ಬಿಡಲಿಲ್ಲ. ತಂದೆ ತಾಯಿಗೆ ಅದೇ ಚಿಂತೆಯಾಯ್ತು.
ಒಂದು ದಿನ ತಾಯಿ ನರಿಯು ಪುಟಾಣಿಯನ್ನು ಕರೆದು ತೋಳದ ಮನೆಯಲ್ಲಿ ಒಂದಿಷ್ಟು ಮಾಂಸದ ತುಣುಕುಗಳನ್ನು ಎರವಲಾಗಿ ತೆಗೆದುಕೊಂಡು ಬಾ ಅಂತ ಹೇಳಿ ಕಳಿಸಿತು. ಹೇಳಿದ್ದೇ ತಡ ಪುಟಾಣಿ ಓಡಿ ಹೋಯಿತು. ತೋಳದ ಹತ್ತಿರ ಇದರ ತರ್ಲೆ ನಡೆಯುತ್ತಿರಲಿಲ್ಲ. ತೋಳ ಕೊಟ್ಟ ಮಾಂಸದ ತುಣುಕುಗಳನ್ನು ತೆಗೆದುಕೊಂಡು ಮನೆಯ ದಾರಿ ಹಿಡಿಯಿತು. ದಾರಿಯಲ್ಲಿ ನಡೆಯುವಾಗ ಏನಾದರೂ ತರ್ಲೆ ಮಾಡಬೇಕು ಎಂದು ಯೋಚಿಸಿತು. ಏನಾದರೂ ಬೇರೆ ಉಪಾಯ ಮಾಡಿ ಮಾಡಬೇಕು. ಮಾಡಿದ್ದು ನಾನೇ ಅಂತ ಯಾರಿಗೂ ಗೊತ್ತಾಗಬಾರದು ಹಾಗೆ ಮಾಡಬೇಕು ಅಂತ ಯೋಚಿಸಿತು.
ಆಗ ಅದಕ್ಕೆ ಮರದ ಮೇಲೊಂದು ಗೂಡು ಕಾಣಿಸಿತು. ಅದರಲ್ಲಿ ಇನ್ನೂ ಹಾರಲು ಬಾರದ ಪುಟ್ಟ ಮರಿಗಳಿದ್ದವು. ಗೂಡಿಗೆ ತೊಂದರೆ ಕೊಡಬೇಕು ಅಂತ ಯೋಚಿಸಿ ಮರವೇರಿತು. ಮರದ ಮೇಲಿದ್ದ ಬಳ್ಳಿಯನ್ನು ಕಿತ್ತುಕೊಂಡು ಅದರ ತುದಿಗೆ ಒಂದು ಕಲ್ಲನ್ನು ಕಟ್ಟಿ ಗೂಡಿಗೆ ಬಂದು ಬಂದು ಬಡಿಯುವಂತೆ ಒಂದು ರೆಂಬೆಯನ್ನು ನೋಡಿ ಅದಕ್ಕೆ ಕಟ್ಟಿತು. ತಾನು ಅದೇ ರೆಂಬೆಯ ಹಿಂಭಾಗಕ್ಕೆ ಬಂದು ಕಲ್ಲು ಕಟ್ಟಿದ ಬಳ್ಳಿಯನ್ನು ಜೋರಾಗಿ ತೂಗುವಂತೆ ತಳ್ಳಿತು. ಗೂಡಿಗೆ ಬಡಿದ ಕಲ್ಲು ಅಷ್ಟೇ ವೇಗದಲ್ಲಿ ವಾಪಸ್ಸು ಬಂದು ನರಿಯ ಕಣ್ಣಿಗೆ ಬಡಿಯಿತು. ಪುಟಾಣಿ ನರಿಯು ಗಲಿಬಿಲಿಗೊಂಡು ಅಯ್ಯೋ… ಅಂತ ಕೂಗಾಡಿತು. ಕಣ್ಣಿಗೆ ಏಟು ಬಿದ್ದ ನೋವಿಗೆ ಮರದಿಂದ ಜೋರಾಗಿ ನೆಲಕ್ಕೆ ಬಿತ್ತು.
ಪುಟಾಣಿಯ ಒಂದು ಕಾಲು ಮುರಿದು ಹೋಯಿತು. ತೋಳ ಕೊಟ್ಟ ಮಾಂಸ ಕೂಡ ಮಣ್ಣು ಪಾಲಾಯಿತು. ಪುಟಾಣಿ ನರಿಯು ಅಳುತ್ತಾ ಮನೆ ಕಡೆ ಹೊರಟಿತು. ಅಳುತ್ತಾ ಬಂದ ನರಿಯನ್ನು ನೋಡಿದ ಅದರ ತಂದೆ ತಾಯಿ ಯಾಕೆ? ಏನಾಯ್ತು? ಅಂತ ಕೇಳಿದವು. ಆಗ ಪುಟಾಣಿಯೂ ನಡೆದ ವಿಚಾರವನ್ನೆಲ್ಲಾ ಹೇಳಿತು.ಆಗ ತಂದೆ ನರಿ… ‘ಹೌದು ಮಗು, ನಾವು ಬೇರೆಯವರಿಗೆ ಕೆಟ್ಟದ್ದನ್ನು ಮಾಡಲು ಹೊರಟಾಗ ಅದು ನಮಗೆ ಕೆಟ್ಟದಾಗತ್ತದೆ.. ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದು ಆಗುತ್ತದೆ.. ಅದ್ದರಿಂದ ಯಾವತ್ತೂ ಒಳ್ಳೆಯದಾರಿಯಲ್ಲಿಯೇ ಸಾಗಬೇಕು’ ಎಂದಿತು. ಪುಟಾಣಿಗೆ ತಾನು ಇಷ್ಟು ದಿನದಿಂದ ಮಾಡಿದ್ದ ತರ್ಲೆ ಗಳನ್ನು ನೆನಪಿಸಿಕೊಂಡು ದುಃಖ ಪಟ್ಟಿತು… ಮತ್ತು ಇನ್ನೆಂದೂ ಹೀಗೆ ಮಾಡುವುದಿಲ್ಲವೆಂದು ಹೇಳಿತು. ತಂದೆ ತಾಯಿ ನರಿಗಳು ಖುಷಿಪಟ್ಟವು.
ಸದಾಶಿವ್ ಸೊರಟೂರು.