ಅತ್ತಕಡೆಯಿಂದ ನೀನು, “ಯಾರು?’ ಎಂದೆ. ಬರೀ ನನ್ನ “ಹಲೋ’ ಎನ್ನುವ ಧ್ವನಿ ಕೇಳಿಯೇ ಗುರುತಿಸುತ್ತಿದ್ದವಳು ಇಂದು ಅಮಾಯಕಿಯ ಹಾಗೆ ಯಾರು ಎಂದು ಕೇಳುತ್ತಿದ್ದಾಳಲ್ಲ ಎನಿಸಿತು. ಆದರೂ ಮುಂದುವರಿದು “ನಾನು’ ಎಂದೆ. ಅಷ್ಟರಲ್ಲಿ ಫೋನ್ ಕಟ್ ಆಯ್ತು.
ನೆನಪುಗಳು, ನಿರಂತರ ನುಗ್ಗಿ ಬರುವ ನದಿಯಿದ್ದ ಹಾಗೆ. ಮರೆತೆನೆಂದರೂ ಮರೆಯಲಾಗದು. ನೆನಪಾದರೆ ಎದೆ ಗೂಡೊಳಗಿನ ಬೆಚ್ಚಗಿನ ಭಾವಗಳೆಲ್ಲ ಕಣ್ಣ ತುದಿಗೇ ಬಂದು ಕೆನ್ನೆ ಒದ್ದೆಯಾಗುತ್ತೆ. ಹಾಗೆಲ್ಲ ನಾನು ಅಷ್ಟು ಸುಲಭಕ್ಕೆ ಕರಗಿ ಹೋಗುವವನಲ್ಲ. ಒಮ್ಮೆ ಮಾಡಿದ ಗಟ್ಟಿ ನಿರ್ಧಾರ ಮುರಿದ ಉದಾಹರಣೆಗಳೇ ಇಲ್ಲ. ಆದರೂ ನಾನಂದು ಹಾಗೇಕೆ ಮಾಡಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವತ್ತು ಮಾತ್ರ, ಗಟ್ಟಿ ಗುಂಡಿಗೆಯೂ ನನ್ನೊಳಗಿನ ಬೆಣ್ಣೆಯಂಥ ಮನಸ ಕಂಡು ಮುಸಿ ಮುಸಿ ನಕ್ಕಿರಬೇಕು. ನಿನ್ನ ನನ್ನ ನಡುವೆ ಸಂಬಂಧ ಹಳಸಿ, ಪ್ರೀತಿ ಗೋಪುರ ಕುಸಿದು ಬಿದ್ದು ಅದ್ಯಾವ ಕಾಲವಾಗಿತ್ತೋ? ನಾನೂ ಕೂಡ ನಿನ್ನ ಭಾವದೋಲೆಗಳಿಗೆ ಬೆಂಕಿಯಿಕ್ಕಿ, ಮನದ ಮೂಲೆಯಲ್ಲಿ ಕುಳಿತ ನಿನ್ನ ನೆನಪುಗಳ ಕಸ ಗುಡಿಸಿ ಹಸನು ಮಾಡಿದ್ದೆ. ಜೀವಕ್ಕಿಂತ ಹೆಚ್ಚು ಇಷ್ಟಪಟ್ಟವಳು ಹೀಗೆ ವಿನಾಕಾರಣ ಬದುಕಿನ ಯಾವುದೋ ತಿರುವಿನಲ್ಲಿ ಮೋರೆ ತಿರುಗಿಸಿ ಬಿರಬಿರನೆ ನಡೆದುಬಿಡುತ್ತಾಳೆ ಎಂಬುದನ್ನು ಕಲ್ಪಿಸಿಕೊಂಡಿರಲೂ ಇಲ್ಲ. ಆದರೆ ವಾಸ್ತವ ಅಣಕಿಸುತ್ತಿತ್ತು. ಅಂದೇ ಗಟ್ಟಿ ಮನಸು ಮಾಡಿ ನಿನ್ನನ್ನು ಮರೆಯಲೇಬೇಕು ಅಂತ ನಿರ್ಧರಿಸಿದ್ದು.
ಅಂದು ಹೊಚ್ಚ ಹೊಸ ವರ್ಷ ಕಣ್ಣರಳಿಸಿ ಕಿಲಕಿಲನೆ ನಕ್ಕಿತ್ತು. ಎದುರಿಗೆ ಸಿಕ್ಕ ಸಿಕ್ಕವರೆಲ್ಲ ಶುಭಾಶಯ ಕೋರುವವರೇ. ಮೊಬೈಲ್ ಇನ್‌ಬಾಕ್ಸ್‌ಗೆ ಬಂದು ಬೀಳುವ ಮೆಸೇಜುಗಳು, ವಾಟ್ಸಾಪ್‌ನಲ್ಲಿ ಇಣುಕುವ ಪ್ರೀತಿಬೆರೆತ ಕಾವ್ಯದ ಸಾಲುಗಳು. ಫೇಸ್‌ಬುಕ್ ವಾಲ್‌ಗೆ ಹರಿದು ಬರುವ ಪ್ರೀತಿಯಲಿ ಅದ್ದಿ ತೆಗೆದ ಗ್ರೀಟಿಂಗ್ಸ್‌ಗಳು ನನ್ನನ್ನು ಕಳೆದ ಪ್ರೀತಿಯ ಭಾವತೀರಯಾನಕ್ಕೆ ಕರೆದೊಯ್ದಿದ್ದವು. ಹೃದಯದಲ್ಲಿ ನಿರೀಕ್ಷೆ ಗರಿಗೆದರಿ ಹಕ್ಕಿಯಂತೆ ರೆಕ್ಕೆ ಫಡಫಡಿಸಿತ್ತು. ಕುಂದಿದ ಕಣ್ಣೊಳಗೂ ಕನಸ ಬಯಕೆ. ಮೊದಲ ಪ್ರೀತಿಯ ನೆನಪು ಅಷ್ಟು ಸುಲಭಕ್ಕೆ ಕಡಿದುಕೊಳ್ಳಲಾದೀತೇ? ಅವಳಿಗೂ ಕೂಡ ನಿನ್ನ ನೆನಪು ಕಾಡುತ್ತಿರಬೇಕು. ಅವನೇ ಬಂದು ಮಾತನಾಡಿಸಲಿ ಎಂಬ ಹಠವಿರಬೇಕು. ಕ್ಷಮಿಸಿ ಬಿಡು ಎನ್ನುವುದನ್ನೇ ಕೇಳಲು ಹಾತೊರೆಯುತ್ತಿರಬೇಕು. ಸುಮ್ಮನೇ ನಿನ್ನಷ್ಟಕ್ಕೆ ನೀನೇ ಅವಳ ಬಗ್ಗೆ ಅಪಾರ್ಥ ಮಾಡಿಕೊಂಡು ಕೂತಿರಬೇಡ. ಅವಳೆಂದೂ ನಿನ್ನವಳೇ ಎಂದು ಒಳಮನಸ್ಸು ನೂರೆಂಟು ಸಲ ನಿನ್ನನ್ನೇ ಧೇನಿಸುವಂತೆ ಮಾಡಿ, ನಾನು ಮಾಡಿಕೊಂಡ ಗಟ್ಟಿ ನಿರ್ಧಾರ ಮುರಿಯುವಂತೆ ಮಾಡಿತು. ಹೇಗಿದ್ದರೂ ಇಂದು ಹೊಸ ವರ್ಷ, ಕಳೆದ ಕಹಿ ನೆನಪುಗಳನ್ನೆಲ್ಲ ಕರಗಿಸಿ, ಒಡೆದ ಮನಗಳನ್ನು ಒಂದುಗೂಡಿಸುವ ಸಂಕಲ್ಪ ಮಾಡಿಯೇ ಬಿಡೋಣ ಎಂದುಕೊಂಡು, ಶುಭಾಶಯ ತಿಳಿಸುವ ನೆಪದಲ್ಲಿ ನಿನಗೆ ಕರೆ ಮಾಡಿದೆ.
ಅತ್ತಕಡೆಯಿಂದ ನೀನು, “ಯಾರು’ ಎಂದೆ. ಬರೀ ನನ್ನ “ಹಲೋ’ ಎನ್ನುವ ಧ್ವನಿ ಕೇಳಿಯೇ ಗುರುತಿಸುತ್ತಿದ್ದವಳು ಇಂದು ಅಮಾಯಕಿಯ ಹಾಗೆ ಯಾರು ಎಂದು ಕೇಳುತ್ತಿದ್ದಾಳಲ್ಲ ಎನಿಸಿತು. ಆದರೂ ಮುಂದುವರಿದು “ನಾನು’ ಎಂದೆ. ಅಷ್ಟರಲ್ಲಿ ಫೋನ್ ಕಟ್ ಆಯ್ತು. ಭ್ರಮನಿರಸನಗೊಳ್ಳದೆ ಮತ್ತೂಮ್ಮೆ ಕರೆ ಮಾಡಿದೆ, ರಿಂಗಾಯಿತೇ ಹೊರತು ನೀನು ರೀಸಿವ್ ಮಾಡಲಿಲ್ಲ. ಹೊಸ ವರ್ಷದ ಮೊದಲ ದಿನದಂದೇ ಪ್ರೀತಿಸಿದ ಜೀವವೊಂದು ಆತ್ಮಾಭಿಮಾನಕ್ಕೆ ಪೆಟ್ಟು ಕೊಟ್ಟು ಗಹಗಹಿಸಿ ನಕ್ಕಿತ್ತು. ಇನ್ನಿಲ್ಲದ ನಿರೀಕ್ಷೆಗಳೊಂದಿಗೆ ಕಳೆದ ಪ್ರೀತಿ, ನಿನ್ನ ಒಲವು ಬೆರೆತ ಮಾತುಗಳು, ದೊಡ್ಡ ನಗೆಯ ಧ್ವನಿ, ಕಳೆದು ಹೋದ ಕನಸುಗಳು ಸಿಕ್ಕೇ ಸಿಗುತ್ತವೆ ಎಂದುಕೊಂಡ ನನಗೆ ನಿರಾಸೆಯ ವಿನಹ ಬೇರೇನೂ ದಕ್ಕಲಿಲ್ಲ.
ಈಗ ಮತ್ತೆ ಒಂದು ವರ್ಷ ತಣ್ಣಗೇ ನೀನಿಲ್ಲದೆ ಉರುಳಿ ಹೋಗಿದೆ. ಎದೆಯ ಭಿತ್ತಿಯಲ್ಲಿ ನಿನ್ನ ಅಸ್ಪಷ್ಟ ಚಿತ್ರ ಮೂಡಿ ಮರೆಯಾದಾಗಲೆಲ್ಲ ಕಣ್ಣೊಳಗೆ ಸಣ್ಣಗೆ ಸುಳಿದಿರುಗುವ ಚಕ್ರತೀರ್ಥ. ಯಾವುದೋ ತಿರುವಿನಲ್ಲಿ ನೀನು ಸಿಕ್ಕು, ನನ್ನ ನೋಡಿ ದೊಡ್ಡ ನಗೆ ನಕ್ಕು ಗೇಲಿ ಮಾಡಿದಾಗಲೆಲ್ಲ, ಮನಸಿನ ಕೆನ್ನೆ ಹಿಂಡಿ, ನಗುವಿನ ನೆತ್ತಿ ನೇವರಿಸಿ ಗಟ್ಟಿಯಾಗುವ ಹಠ ತೊಡುತ್ತೇನೆ.
ನಾಗೇಶ್ ಜೆ. ನಾಯಕ