Advertisement

ಫೆಡರೇಷನ್‌ ಇಲ್ಲದಿದ್ದರೆ ನೌಕರರಿಗೆ ನ್ಯಾಯ ಸಿಗದು

09:35 PM Dec 18, 2019 | Lakshmi GovindaRaj |

ಮೈಸೂರು: ನೌಕರರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಒಗ್ಗಟಿನಿಂದ ಹೋರಾಟ ನಡೆಸಲು ಯೂನಿಯನ್‌ ಬಹಳ ಮುಖ್ಯವಾಗಿದ್ದು, ಯೂನಿಯನ್‌ನಿಂದಾಗಿ ಕೆಎಸ್‌ಆರ್‌ಟಿಸಿ ನೌಕರರ ಅನೇಕ ಸಮಸ್ಯೆಗಳು ಬಗೆಹರಿದಿವೆ ಎಂದು ಸ್ಟಾಫ್ ಆ್ಯಂಡ್‌ ವರ್ಕರ್ ಫೆಡರೇಷನ್‌ ಉಪಾಧ್ಯಕ್ಷ ಕೊಟ್ರೇಶ್‌ ಹೇಳಿದರು. ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್‌ ವರ್ಕರ್ ಯೂನಿಯನ್‌ ಹಾಗೂ ಮೈಸೂರು ನಗರ, ಗ್ರಾಮಾಂತರ ಮತ್ತು ಚಾಮರಾಜನಗರ ವಿಭಾಗಗಳ ವತಿಯಿಂದ ಬನ್ನಿಮಂಟಪದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಮತ್ತು ಸಮ್ಮೇಳನದಲ್ಲಿ ಅವರು ಮಾತನಾಡಿದರು.

Advertisement

ನೌಕರರು ಒಗ್ಗಟಾಗಿದ್ದರೆ, ಯಾರು ಏನು ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲ ಪ್ರತಿಯೊಬ್ಬರು ಯೂನಿಯನ್‌ ಬೆಳವಣಿಗೆಗೆ ಸಹಕರಿಸಬೇಕು. ಆದರೆ, ಇದರ ಅರಿವಿರದ ಹೊಸದಾಗಿ ಸೇರ್ಪಡೆಗೊಂಡ ನೌಕರರು ಇದನ್ನು ಕಡೆಗಣಿಸುವುದು ಸರಿಯಲ್ಲ ಎಂದರು. ಈ ಹಿಂದೆ ನೌಕರರು ಸಮಸ್ಯೆಗಳನ್ನು ಬಗೆಹರಿಸುವಂತೆ ನಡೆಸಿದ ಹೋರಾಟಗಳಲ್ಲಿ ಜೈಲಿಗೆ ಹೋಗಿದ್ದಾರೆ, ಲಾಠಿ ಏಟು ತಿಂದಿದ್ದಾರೆ. ಈ ಎಲ್ಲದರ ನೋವಿನ ಫ‌ಲವೇ ಇಂದು ಅನೇಕ ಸಮಸ್ಯೆಗಳು ಬಗೆಹರಿದಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಪದಾಧಿಕಾರಿಗಳ ನೇಮಕ: ಗ್ರಾಮಾಂತರ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್‌.ಕೆ.ಬಂಡಿ ಮಾತನಾಡಿ, ಕೆಎಸ್‌ಆರ್‌ಟಿಸಿ ಫೆಡರೇಷನ್‌ ಹಲವು ವಷಗಳಿಂದ ಶ್ರಮವಹಿಸಿ ಉತ್ತಮ ಕಾರ್ಯದಿಂದ ಸಂಸ್ಥೆಯ ಕಾರ್ಮಿಕರಿಗೆ ನೆರಳಾಗಿ ನಿಂತಿದೆ. ಫೆಡರೇಷನ್‌ ಇಲ್ಲದಿದ್ದರೆ ಕಾರ್ಮಿಕರ ನೋವುಗಳಿಗೆ ನ್ಯಾಯ ಸಿಗುತ್ತಿರಲಿಲ್ಲ. ಅದಕ್ಕಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಪೆಢರೇಷನ್‌ ಪದಾಧಿಕಾರಿಗಳ ನೇಮಕ ಮಾಡಬೇಕು. ಇದರಿಂದ ಉತ್ತಮ ಹೋರಾಟ ಕಾರ್ಮಿಕರಿಗೆ ಸಿಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ್‌, ಖಜಾಂಚಿ ಎಚ್‌.ಚಂದ್ರೇಗೌಡ, ಬಿ.ಎಸ್‌.ಸುರೇಶ್‌, ಎಚ್‌.ವಿ.ಅನಂತ ಸುಬ್ಬರಾವ್‌ ಹಾಗೂ ಸಂಘಟನೆಗೆ ಶ್ರಮಿಸಿದ ನಿವೃತ್ತ ಮುಖಂಡರಿಗೆ ಸನ್ಮಾನ ಮಾಡಲಾಯಿತು.‌ ಈ ಸಂದರ್ಭದಲ್ಲಿ ಸ್ಟಾಫ್ ಆ್ಯಂಡ್‌ ವರ್ಕರ್‌ ಫೆಡರೇಷನ್‌ ಜಂಟಿ ಕಾರ್ಯದರ್ಶಿ ಟಿ.ಎಲ್‌.ರಾಜಗೋಪಾಲ, ಉಪಾಧ್ಯಕ್ಷ ಸಂಪತ್‌, ಹಿರಿಯ ಉಪಾಧ್ಯಕ್ಷ ರವೀಂದ್ರ ಕುಮಾರ್‌, ಚಾಮರಾಜನಗರ ವಿಭಾಗದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಸಾರಿಗೆ ವಿಭಾಗದ ಪ್ರಧಾನ ಕಾರ್ಯದರ್ಶಿ ಮಧುಸೂದನ ಇತರರಿದ್ದರು.

ನಿವೃತ್ತಿ ಬಳಿಕವೇ ಭವಿಷ್ಯ ನಿಧಿ ಬಳಸಿ: ಕೆಎಸ್‌ಆರ್‌ಟಿಸಿ ಕಾರ್ಮಿಕರಿಗೆ ಮೂಲ ವೇತನದಲ್ಲಿ ಹಣ ಕಡಿತ ಮಾಡಿ ಭವಿಷ್ಯ ನಿಧಿ ರೂಪಿಸಲಾಗಿದ್ದು, ಇಂದು ಉತ್ತಮ ಬಡ್ಡಿ ಸಹಾ ಭವಿಷ್ಯ ನಿಧಿಗೆ ಸಿಗುತ್ತಿದೆ. ಯಾರು ಕೂಡ ಕರ್ತವ್ಯದಲ್ಲಿರುವಾಗಲೇ ಈ ಹಣವನ್ನು ತೆಗೆದುಕೊಳ್ಳಬೇಡಿ. ಇದನ್ನು ನಿವೃತ್ತಿ ನಂತರ ತೆಗೆದುಕೊಂಡು ಉತ್ತಮ ಕಾರ್ಯಗಳಿಗೆ ಉಪಯೋಗಿಸಿ ಎಂದು ಸ್ಟಾಫ್ ಆ್ಯಂಡ್‌ ವರ್ಕರ್ ಫೆಡರೇಷನ್‌ ಖಜಾಂಚಿ ಎಚ್‌.ಚಂದ್ರೇಗೌಡ ಸಲಹೆ ನೀಡಿದರು. ಇಂದು ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ ಫೋನ್‌ ಮೂಲಕವೇ ತಮ್ಮ ಭವಿಷ್ಯ ನಿಧಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಭವಿಷ್ಯ ನಿಧಿ ಹಣವನ್ನು ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಉಪಯೋಗ ಮಾಡಿಕೊಂಡು ಉತ್ತಮ ಜೀವನ ಸಾಗಿಸುವಂತೆ ಕಿವಿಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next