Advertisement

ಅನುಮೋದನೆ ಇಲ್ಲದೇ 9 ಕೋಟಿ ರೂ. ಪಾವತಿ!

12:08 PM Jan 12, 2017 | Team Udayavani |

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರ ಅನುಮೋದನೆ ಪಡೆಯದೆ ನಿಯಮ ಬಾಹಿರವಾಗಿ 9 ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವುದು ಬಹಿರಂಗಗೊಂಡಿದೆ.

Advertisement

ದಕ್ಷಿಣ ವಲಯ ಜಂಟಿ ಆಯುಕ್ತರ ಕಚೇರಿಗೆ ಬುಧವಾರ ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿದ ಅಧ್ಯಕ್ಷೆ ನೇತ್ರಾ ನಾರಾಯಣ್‌ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲಿಸಿದಾಗ ನಿಯಮ ಬಾಹಿರವಾಗಿ ಸಹಾಯಕ ಹಣಕಾಸು ನಿಯಂತ್ರಕರು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವುದು ಪತ್ತೆಯಾಗಿದೆ.

ಎರಡು ತಿಂಗಳ ಅವಧಿಯಲ್ಲಿ ಜಂಟಿ ಆಯುಕ್ತರ ಅನುಮೋದನೆ ಪಡೆಯದೆ ಪಾಲಿಕೆಗೆ ಸೇರಿದ ಹಲವು ಬ್ಯಾಂಕ್‌ ಖಾತೆಗಳಲ್ಲಿದ್ದ 9 ಕೋಟಿ ರೂ. ಮೊತ್ತವನ್ನು ಕಸ ವಿಲೇವಾರಿ ಗುತ್ತಿಗೆದಾರರು, ರಸ್ತೆ ಗುಂಡಿ ಮುಚ್ಚುವ ಗುತ್ತಿಗೆದಾರರಿಗೆ ಪಾವತಿಸಲಾಗಿದೆ.

ಹೀಗೆ ಹಣ ಪಾವತಿ ಮಾಡುವ ಮುನ್ನ ಕಡತಗಳಿಗೆ ಜಂಟಿ ಆಯುಕ್ತರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಮುಖ್ಯ ಇಂಜಿನಿಯರ್‌ ಮೂಲಕ ಅನುಮೋದನೆ ಪಡೆಯಬೇಕಿತ್ತು. ಆದರೆ, ಸಹಾಯಕ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಅವರು ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಹಣ ಬಿಡುಗಡೆ ಬಳಿಕವೂ ಜಂಟಿ ಆಯುಕ್ತರ ಸಹಿ ಕಡತಗಳಲ್ಲಿ ದಾಖಲಾಗಿಲ್ಲ ಎಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೇತ್ರಾ ನಾರಾಯಣ್‌, ದಕ್ಷಿಣ ವಲಯದಲ್ಲಿ ಹಲವು ಗುತ್ತಿಗೆದಾರರಿಗೆ ನಿಯಮ ಬಾಹಿರವಾಗಿ ಹಣ ಬಿಡುಗಡೆ ಮಾಡಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದರು.

Advertisement

ಕಾಮಗಾರಿ ಆಗದಿದ್ದರೂ ಹಣ: ಇದೇ ವೇಳೆ ಚಿಕ್ಕಪೇಟೆ ಉಪವಿಭಾಗ ಕಚೇರಿಗೆ ಭೇಟಿ ನೀಡಿದ ಸಮಿತಿ ಸದಸ್ಯರು, ಅಲ್ಲಿನ ಕಚೇರಿಯನ್ನು ತುರ್ತು ಅನುದಾನದಡಿ 10 ಲಕ್ಷ ರೂ. ವೆಚ್ಚ ಮಾಡಿ ದುರಸ್ತಿಗೊಳಿಸಿರುವ ಕಡತ ಪರಿಶೀಲನೆ ನಡೆಸಿದರು. ಹಣ ಖರ್ಚು ಮಾಡಲಾಗಿದೆಯೇ ಹೊರತು ಕಟ್ಟಡ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಕೇವಲ ವಿಭಾಗದ ಇಂಜಿನಿಯರ್‌ ಕಚೇರಿ ಮಾತ್ರ ನವೀಕರಿಸಲಾಗಿದೆ. ಇದೂ ಸಹ ಕಾನೂನು ಬಾಹಿರವಾಗಿದ್ದು, ಕ್ರಮಕ್ಕೆ ಆದೇಶಿಸಲಾಗುವುದು ಎಂದು ನೇತ್ರಾ ನಾರಾಯಣ್‌ ಹೇಳಿದರು.

ದಕ್ಷಿಣ ವಲಯದಲ್ಲಿ ಹಲವು ಗುತ್ತಿಗೆದಾರರಿಗೆ ನಿಯಮ ಬಾಹಿರವಾಗಿ ಹಣ ಬಿಡುಗಡೆ ಮಾಡಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ಜತೆಗೆ ಇತರೆ ಕಡತಗಳನ್ನೂ ಪರಿಶೀಲನೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡತಗಳ ಪರಿಶೀಲನೆ ಬಳಿಕ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು.
-ನೇತ್ರಾ ನಾರಾಯಣ್‌, ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next