Advertisement

ಜನರಿಲ್ಲದೆ ಸೊರಗಿದೆ ವಸ್ತು ಸಂಗ್ರಹಾಲಯ!

09:26 PM Mar 08, 2020 | Lakshmi GovindaRaj |

ಯಳಂದೂರು: ಹಲವಾರು ಐತಿಹಾಸಿಕ ದಾಖಲೆಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ ಚಾಮರಾಜನಗರ ಜಿಲ್ಲೆಯ ಪುಟ್ಟ ತಾಲೂಕು, ಪುಟ್ಟ ಪಟ್ಟಣ ಯಳಂದೂರು. ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಸಂಸ ಸಾಹಿತ್ಯದ ಮೇರು ಪರ್ವತಗಳು. ಪೂರ್ವ ಘಟ್ಟಗಳಲ್ಲಿ ನೆಲಸಿರುವ ಬಿಳಿಗಿರಿರಂಗ, ಬಿದ್ದಾಂಜನೇಯ ಆರಾಧ್ಯ ದೇವರುಗಳು, ವಿಶ್ವಪ್ರಸಿದ್ಧ ಬಳೇಮಂಟಪ ಇಲ್ಲಿನ ಕಲಾ ನೈಪುಣ್ಯಕ್ಕೆ ಮತ್ತೂಂದು ಉದಾಹರಣೆ.

Advertisement

ಹೀಗೆ ವಿಶಿಷ್ಟವಾಗಿರುವ ಪಟ್ಟಣದಲ್ಲಿರುವ ಜಹಗೀರಾರ್‌ ಬಂಗಲೆ ಎಂದು ಕರೆಯಿಸಿಕೊಳ್ಳಯತ್ತಿದ್ದ ಬಂಗಲೆಯನ್ನು 2014ರಲ್ಲಿ ಜಿಲ್ಲೆಯಲ್ಲೇ ಪ್ರಥಮ ವಸ್ತು ಸಂಗ್ರಹಾಲಯ ಮಾಡಲು ಇದರ ನವೀಕರಣವನ್ನು ಕೋಟ್ಯಂತ ರೂಪಾಯಿ ವೆಚ್ಚದಲ್ಲಿ ನಡೆಸಿ, ಉದ್ಘಾಟಿಸಲಾಗಿದೆ. ಇದಕ್ಕೆ ದಿವಾನ್‌ ಪೂರ್ಣಯ್ಯ ವಸ್ತು ಸಂಗ್ರಹಾಲಯ ಎಂದು ನಾಮಕರಣವನ್ನೂ ಮಾಡಲಾಗಿದೆ. ಆದರೆ, ಇದರ ನಿರ್ವಹಣೆಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೋತಿದೆ. ಹೀಗಾಗಿ ಜನರಿಲ್ಲದೆ ವಸ್ತು ಸಂಗ್ರಹಾಲಯ ಸೊರಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಮೇ 18 ವಿಶ್ವ ವಸ್ತು ಸಂಗ್ರಹಾಲಯ ದಿನವಾಗಿ ಆಚರಣೆ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸಂಗ್ರಹಾಲಯವನ್ನು ವಿಶಿಷ್ಟವಾಗಿ ರೂಪಿಸುವಲ್ಲಿ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರೊಳಗೆ ಹೋದರೆ ಮೈಸೂರು ಮಹಾರಾಜರ ಕಾಲದ ಪೋಟೋ ಗ್ಯಾಲರಿ, ಬಂಗಲೆ ನವೀಕರಣದ ಚಿತ್ರಗಳನ್ನು ಹೊರತುಪಡಿಸಿದರೆ ಇನ್ನೂ ಏನನ್ನೂ ನೋಡಲು ಸಾಧ್ಯವಿಲ್ಲ. ಮೌಲ್ಯಯುವ ಶಿಲ್ಪಗಳು, ಮೂರ್ತಿಗಳು, ಶಾಸನಗಳು, ಪ್ರಾಚೀನ ಕಾಲದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಲ್ಲ.

ನಿರ್ವಹಣೆಗೆ 4 ಮಂದಿ ನೇಮಕ: ದಿವಾನ್‌ಪೂರ್ಣಯ್ಯ ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡು ಐದು ವರ್ಷ ಕಳೆದಿದೆ. ಆದರೆ, ಇನ್ನೂ ಅಭಿವೃದ್ಧಿ ಕಂಡಿಲ್ಲ. ಸಂಗ್ರಹಾಲಯದ ನಿರ್ವಹಣೆಗಾಗಿ ನಾಲ್ಕು ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿದ್ದರೂ, ಯೋಜನೆ ರೂಪಿಸಿ ಪ್ರವಾಸಿಗಳನ್ನು ಆಕರ್ಷಿಸಲು ಪ್ರಾಚ್ಯ ವಸ್ತು ಇಲಾಖೆ ವಿಫ‌ಲವಾಗಿದೆ.

ಸೂಚನೆ ನೀಡಿದರೂ ಪಾಲಿಸಿಲ್ಲ: ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ಪರಿಶ್ರಮದ ಫ‌ಲವಾಗಿ ಇದನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಲಾಗಿದೆ. ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅಪರೂಪದ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿ, ಇಲ್ಲಿ ಇಡಬೇಕು ಎಂದು ಸೂಚನೆ ನೀಡಿದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಪಟ್ಟಣದ ಭೂಲಕ್ಷ್ಮೀ ವರಹಾಸ್ವಾಮಿ ದೇಗುಲದಲ್ಲಿ ನೂರಾರು ವರ್ಷಗಳ ಹಿಂದಿನ ತೀರ್ಥಂಕರರ ಶಿಲಾ ಶಾಸನಗಳನ್ನು ಸಂಗ್ರಹಿಸಿ, ಇಲ್ಲೇ ಇಡಲಾಗಿದೆ.

Advertisement

ವಸ್ತು ಸಂಗ್ರಹಾಲಯಕ್ಕೆ ವಿಶೇಷ ಅನುದಾನ ಬಂದಿಲ್ಲ. ಸಂಗ್ರಹಾಲಯಕ್ಕೆ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ. ಹಳೆಯ ಶಿಲ್ಪಗಳನ್ನು ಸಂಗ್ರಹಿಸುವಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅನಾಥವಾಗಿ ಬಿದ್ದಿರುವ ಅಮೂಲ್ಯ ಶಿಲ್ಪಗಳ ಶೋಧವನ್ನು ನಡೆಸಲಾಗಿದೆ. ಶಿಲ್ಪಗಳ ಸಂಗ್ರಹ ಮಾಡಿ ಇದನ್ನು ಮತ್ತಷ್ಟು ಆಕರ್ಷಕಗೊಳಿಸುವ ಕೆಲಸಕ್ಕೆ ಇಲಾಖೆ ನಾಂದಿ ಹಾಡಿದೆ. ಮುಂದಿನ ದಿನಗಳಲ್ಲಿ ಸಂಗ್ರಹಾಲಯಕ್ಕೆ ಮತ್ತಷ್ಟು ಮೆರಗು ತರುವ ಕೆಲಸವನ್ನು ಮಾಡಲಾಗುವುದು.
-ನವೀನ್‌ಕುಮಾರ, ಕ್ಯೂರೇಟರ್‌, ಪ್ರಾಚ್ಯ ವಸ್ತು ಇಲಾಖೆ, ಮೈಸೂರು

ದಿವಾನ್‌ಪೂರ್ಣಯ್ಯ ವಸ್ತು ಸಂಗ್ರಹಾಲಯದ ಆವರಣವು ಆಟೋ ನಿಲ್ದಾಣವಾಗಿ ಮಾರ್ಪಟ್ಟಿದೆ. ಇದರ ಮುಂಭಾದವಿರುವ ಗೌರೇಶ್ವರ ದೇಗುಲ, ಬಳೇಮಂಟಪವೂ ಒಳಗೊಂಡಂತೆ ಉದ್ಯಾನವನ ನಿರ್ಮಾಣ ಮಾಡಬೇಕೆಂಬ ಬಯಕೆ ಕನಸಾಗಿಯೇ ಉಳಿದಿದೆ.
-ಮಹೇಶ್‌, ಸೋಮನಾಯಕ, ಯಳಂದೂರು

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next