ಭೂಮಿಯ ಮೇಲೆ ಮನುಷ್ಯ ಆರೋಗ್ಯಕರವಾಗಿ ಜೀವನ ನಡೆಸಲು ಅತೀ ಮುಖ್ಯವಾಗಿ ಬೇಕಾಗಿರುವ ಗಾಳಿ, ನೀರು, ಬೆಳಕು ಎಲ್ಲವೂ ಪ್ರಕೃತಿ ಮಾತೆಯ ವರದಾನ. ಪ್ರಕೃತಿ ಇಲ್ಲದೆ ಮಾನವನ ಬದುಕೇ ಇಲ್ಲ. ಈ ಎಲ್ಲ ಸಂಗತಿಗಳನ್ನು ನಾವು ತಿಳಿದಿದ್ದರೂ ಪ್ರಕೃತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಇದರರ್ಥ ಮುಂದೆ ನಮ್ಮನ್ನು ನಾವು ಉಳಿಸಿಕೊಳ್ಳಲು ಆಗದಂತಹ ಪರಿಸ್ಥಿತಿಗೆ ಬರುತ್ತೇವೆ ಎಂದು.
ಇತ್ತೀಚೆಗೆ ಅನೇಕ ಪ್ರಕೃತಿ ವಿಕೋಪಗಳು ನಮ್ಮ ಕೆಣ್ಣೆದುರೇ ನಡೆಯುತ್ತಿ¤ದೆ. ಇದಕ್ಕೆಲ್ಲ ಕಾರಣ ನಾವೇ… ಬುದ್ಧಿವಂತ ಮನುಜರು. ಬೇಸಗೆಯ ಪ್ರಾರಂಭದಲ್ಲೇ ನೀರಿಗಾಗಿ ಪರದಾಟ, ಮಳೆಗಾಲ ಪ್ರಾರಂಭವಾಗುತ್ತಲೇ ಭೂಕುಸಿತ, ಪ್ರವಾಹಗಳು. ಇನ್ನು ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಹಾನಿಗೊಳ್ಳುತ್ತಿರುವ ಸೂರ್ಯನ ನೇರಳಾತೀತ ಕಿರಣಗಳನ್ನು ತಡೆದು ಜೀವ ಸಂಕುಲವನ್ನು ರಕ್ಷಿಸುತ್ತಿರುವ ಓಝೋನ್ ಪದರ, ಹೀಗೆ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಏನು ಎಂದು ಯೋಚಿಸಿದರೆ ನಮ್ಮ ಕಣ್ಣ ಎದುರು ಕಾಣುವುದು ಪರಿಸರ ನಾಶ.
ನಮ್ಮ ಹಿರಿಯರು ಹೇಳುತ್ತಿದ್ದ ಕಾಲ, ಗತಿಗಳು ಈಗಿಲ್ಲ, ಎಲ್ಲವೂ ಬದಲಾಗಿದೆ. ಹವಾಮಾನ ವೈಪರೀತ್ಯದಿಂದ ವ್ಯತಿರಿಕ್ತ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಎಲ್ಲವೂ ನಮ್ಮಿಂದಲೇ, ನಾವೇ ಮಾಡಿಕೊಂಡಿರುವುದು. ಇಂದು ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತವಾದ ಪದವಾಗಿ ಬಿಂಬಿತವಾಗುತ್ತಿದೆ. ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಕಡಿಯುತ್ತಿರುವ ಮರ-ಗಿಡಗಳು ಮತ್ತೂಂದೆಡೆ ಕೇವಲ ಛಾಯಾಚಿತ್ರಕ್ಕಾಗಿ ಗಿಡ ನೆಟ್ಟು ಮತ್ತೆ ಅದರತ್ತ ಹೋಗದ ನಾವುಗಳು.
ಹೀಗಿರುವಾಗ ಹೇಗೆ ತಾನೆ ಪ್ರಕೃತಿ ಬೆಳೆಯಲು ಸಾಧ್ಯ. ಒಬ್ಬ ಮನುಷ್ಯನಿಗೆ ಆಮ್ಲಜನಕಯುಕ್ತ ಶುದ್ಧ ಗಾಳಿ ದೊರಕಬೇಕಾದರೆ ತಲಾ ಒಬ್ಬರಿಗೆ ಏಳು ಮರ ಗಿಡಗಳು ಬೇಕು ಎಂದು ಹೇಳಲಾಗುತ್ತದೆ. ಇದಂತೂ ನಗರ ಪ್ರದೇಶಗಳಲ್ಲಿ ಅಸಾಧ್ಯವೇ ಸರಿ. ಇನ್ನು ಮುಂದಿನ ಜನಾಂಗದ ಜೀವನ ಮಟ್ಟ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
ಈ ಕುರಿತಂತೆ ಪ್ರತಿಯೊಬ್ಬರು ಜಾಗೃತಗೊಳ್ಳುವ ಅವಶ್ಯಕತೆ ಇದೆ. ಇಲಾಖೆಯೂ ಆರ್ಥಿಕ ಲಾಭದ ಉದ್ದೇಶಕ್ಕೆ ಗಿಡಗಳನ್ನು ನೆಟ್ಟು ಬೆಳೆಸದೆ ವಾಸ್ತವವಾಗಿ ಸಮಾಜವನ್ನು ನೋಡಬೇಕು. ಹಸುರಿದ್ದರೆ ಉಸಿರು ಎನ್ನುವುದು ಸರ್ವಕಾಲಕ್ಕೂ ಸತ್ಯ. ಈ ನಿಟ್ಟಿನಲ್ಲಿ ನಮ್ಮ ಮನುಕುಲವನ್ನು ಉಳಿಸಿಕೊಳ್ಳವಲ್ಲಿ ನಾವೆಲ್ಲರೂ ಕಟಿಬದ್ಧರಾಗೋಣ.
-ಲತಾ ಚೆಂಡೆಡ್ಕ ಪಿ.
ವಿವೇಕಾನಂದ ಕಾಲೇಜು ಪುತ್ತೂರು