Advertisement

ಸವಾಲುಗಳು ಇಲ್ಲದೆ, ಸಮ್ಮೇಳನ ನಡೆಯದು

10:16 AM Feb 07, 2020 | mahesh |

ಕಲ್ಯಾಣ ಕರ್ನಾಟಕದ ನಾಡು ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನವೆಂಬ ಕನ್ನಡದ ಹಬ್ಬದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಈ ಸಾರ್ಥಕತೆಯ ಹಿಂದಿರುವ ಶಕ್ತಿ, ಕನ್ನಡ ಸಾಹಿತ್ಯ ಪರಿಷತ್ತು. ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ ಇದು 4ನೇ ಸಮ್ಮೇಳನ ಸಂಘಟನೆಯ ಅನುಭವ. ಈ ಕುರಿತು ಒಂದು ಪುಟ್ಟ ಮಾತುಕತೆ…

Advertisement

*ಗಡಿನಾಡಿನಲ್ಲಿ ಸಮ್ಮೇಳನಗಳನ್ನು ಸಂಘಟಿಸುವಾಗ ಎದುರಾಗುವ ಪ್ರಮುಖ ಸವಾಲುಗಳೇನು?
– ಎಲ್ಲಾ ಕಡೆಗಳಲ್ಲಿ ಇರುವಂಥ ಸಮಸ್ಯೆಗಳು ಇಲ್ಲಿಯೂ ಇದ್ದವು. ಅದರಲ್ಲೂ ಗಡಿನಾಡಿನಲ್ಲಿ ಸಮ್ಮೇಳನವನ್ನು ಸಂಘಟಿಸುವಾಗ ಪ್ರಮುಖವಾಗಿ ಅಲ್ಲಿನ ಸ್ಥಿತಿ- ಗತಿ, ಕನ್ನಡ ಮಾಧ್ಯಮ ಜತೆಗೆ ಅಲ್ಲಿನ ಉದ್ಯೋಗದ ಬಗ್ಗೆ ಸವಾಲುಗಳು ಎದುರಾಗುತ್ತವೆ. ಗಡಿನಾಡಿನ ಹಲವು ಸಮಸ್ಯೆಗಳ ಬಗ್ಗೆ 85ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಬೆಳಕು ಚೆಲ್ಲಲಿದೆ.

* ಪ್ರತಿ ಬಾರಿ ಸಮ್ಮೇಳನ ಎದುರಾದಾಗಲೂ ಎಡ- ಬಲ ಎನ್ನುವ ಪಂಥಗಳ ವೈಚಾರಿಕ ಸಂಘರ್ಷಗಳು ಇದ್ದಿದ್ದೇ. ಅವರನ್ನು ಒಂದು ಮಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಳುವ ನಿಲುವೇನು?
– ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ವೇಳೆ, ಇದುವರೆಗೂ ಯಾವುದೇ ರೀತಿಯ ವಿಚಾರ ಸಂಘರ್ಷಗಳು ನಡೆದಿಲ್ಲ ಜತೆಗೆ ವೈಚಾರಿಕ ಸಂಘರ್ಷಗಳೂ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಒಬ್ಬರಿಗೆ ಸೇರಿದ್ದಲ್ಲ. ಅದು ಸಮಸ್ತ ಕನ್ನಡಿಗರಿಗೆ ಸೇರಿದ್ದಾಗಿದೆ. ಇದು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಆ ಹಿನ್ನೆಲೆಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶ, ಆಶಯಗಳನ್ನು ಅರಿತು ಕನ್ನಡಿಗರೆಲ್ಲರೂ ನಡೆಯಬೇಕು.

* ಶೃಂಗೇರಿ ಸಮ್ಮೇಳನದ ಕುರಿತು ಅಪಸ್ವರ ಕೇಳಿಬಂತಲ್ಲ… ಆ ಬಗ್ಗೆ…?
– ಶೃಂಗೇರಿಯಲ್ಲಿನ ಸಾಹಿತ್ಯ ಸಮ್ಮೇಳನದ ಆಯೋಜಕರು ಹಲವು ವಿಚಾರಗಳ ಬಗ್ಗೆ ನನ್ನ ಮಾತು ಕೇಳಲಿಲ್ಲ. ಅವರವರುಗಳೇ ಹೇಳಿಕೆಗಳನ್ನು ನೀಡುತ್ತಿದ್ದರು. ಸತ್ಯ ಏನು ಎಂದರೆ, ನಾನು ಆ ಅಧ್ಯಕ್ಷರನ್ನು ಬದಲಿ ಮಾಡಿ ಎಂದು ಹೇಳಲಿಲ್ಲ. ಸಮ್ಮೇಳನ ಮಾಡಬೇಡಿ ಅಂತ ಕೂಡ ಹೇಳಿಲ್ಲ. ಜತೆಗೆ ಅನುದಾನ ನೀಡುವುದಿಲ್ಲ ಎಂದು ಹೇಳಿಯೇ ಇಲ್ಲ. ಪ್ರಕ್ಷುಬ್ಧ ವಾತಾವರಣ ಇದ್ದ ಹಿನ್ನೆಲೆಯಲ್ಲಿ 2-3 ತಿಂಗಳು ಮುಂದೆ ಹಾಕಿ ಎಂದು ಹೇಳಿದ್ದೆ ಅಷ್ಟೇ. ನಮ್ಮ ಮಾತನ್ನು ಅವರು ಕೇಳಲೇ ಇಲ್ಲ.

* ಕನ್ನಡದ ಪ್ರಮುಖ ಸಾಹಿತ್ಯ ರಚನೆಗಳನ್ನು ಡಿಜಿಟಲೀಕರಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಎಲ್ಲಿ ತನಕ ಬಂದಿದೆ?
– ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳನ್ನು ಡಿಜಟಲೀಕರಿಸುವ ಕೆಲಸದಲ್ಲಿ ನಿರತವಾಗಿದೆ. ಜತೆಗೆ 8 ನಿಘಂಟುಗಳನ್ನು ಡಿಜಿಟಲೀಕರಿಸುವ ಕಾರ್ಯವೂ ಪೂರ್ತಿಯಾಗಿದೆ. ಅಲ್ಲದೆ, 140 ಪುಸ್ತಕಗಳನ್ನು ಸಿಐಎಲ್‌ ( ಸೆಂಟ್ರಲ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಇಂಡಿಯನ್‌ ಲಾಂಗ್ವೇಜ್‌ ) ಮೂಲಕ ಪ್ರಕ್ರಿಯೆಗಳು ನಡೆಯುತ್ತಿವೆ.

Advertisement

* ಸಮ್ಮೇಳನ ಎಂದರೆ ಕನ್ನಡದ ಹಲವು ತೊರೆಗಳು ಒಂದಾಗುವ ತಾಣ. ಸಾಹಿತ್ಯದ ಜತೆ ಸಾಂಸ್ಕೃತಿಕ, ಜಾನಪದ ಕಲಾತಂಡಗಳನ್ನೂ ಸಂಘಟಿಸಿ ಸಮ್ಮೇಳನಕ್ಕೆ ಮೆರುಗು ನೀಡುವ ಕೆಲಸ ಆಗಬೇಕು. ಆ ಬಗ್ಗೆ ಎದುರಾಗುವ ಸವಾಲುಗಳೇನು?
– ಅಂಥ ಯಾವುದೇ ರೀತಿಯ ಸಮಸ್ಯೆಗಳು ಇಲ್ಲಿಯವರೆಗೂ ಎದುರಾಗಿಲ್ಲ. ಜಾನಪದ ಮತ್ತು ಜಾನಪದ ಸಾಹಿತ್ಯದ ಕುರಿತಾದ ಗೋಷ್ಠಿಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾನಪದದ ಕುರಿತ ಚರ್ಚೆಗೆ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆಯನ್ನು ಕಲ್ಪಿಸಿ ಕೊಡಲಾಗಿದೆ. ಜತೆಗೆ ನಾಡಿನ ನೂರಾರು ಜಾನಪದ ಕಲಾ ತಂಡಗಳಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next