Advertisement
ಈಗಾಗಲೇ ಕರ್ನಾಟಕದ ಲಕ್ಷಾಂತರ ಮಂದಿ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಅವರು ತಮ್ಮ ಹುಟ್ಟೂರಿಗೆ ತೆರಳಲು ಉತ್ಸುಕರಾಗಿದ್ದಾರೆ. ಒಂದೋ ನಮಗೆ ಕೆಲಸ ಕೊಡಿ ಇಲ್ಲವಾದಲ್ಲಿ ನಮ್ಮನ್ನು ಊರಿಗೆ ಕಳುಹಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಒಡಿಶಾ, ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಮುಂಬಯಿ ಮತ್ತು ಇತರೆಡೆಗಳಿಗೆ ವಲಸೆ ಬಂದವರಿಗೆ ವಿಶೇಷ ರೈಲುಗಳನ್ನು ಓಡಿಸುವಂತೆ ಸಿಎಂ ಉದ್ಧವ್ ಠಾಕ್ರೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಇನ್ನಿತರ ಜಿಲ್ಲೆಗಳ ಕನ್ನಡಿಗ ಕುಟುಂಬಗಳು ಮತ್ತು ವಲಸೆ ಕಾರ್ಮಿಕರು ಮುಂಬಯಿ ಸೇರಿದಂತೆ ಉಪ ನಗರಗಳಲ್ಲಿ ಮತ್ತು ಪುಣೆ, ನಾಸಿಕ್ ಇನ್ನಿತರೆಡೆಗಳಲ್ಲಿ ನೆಲೆಸಿದ್ದು ತಮ್ಮ ಹುಟ್ಟೂರಿಗೆ ಹೋಗಲು ಅನುಕೂಲ ಮಾಡಿಕೊಟ್ಟರೂ ಕರ್ನಾಟಕದ ಒಂದು ಕಡೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುವುದು ಕಡ್ಡಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಸಂದರ್ಭದಲ್ಲೂ ಅನ್ವಯವಾಗುತ್ತದೆ. ಅಗತ್ಯವಾಗಿ ಹುಟ್ಟೂರಿಗೆ ತೆರಳಲು ಇಚ್ಚಿಸುವವರು covid19.mpassmahapolice.gov.inಗೆ ಇಮೇಲ್‌ನಲ್ಲಿ ಅರ್ಜಿಯನ್ನು ತುಂಬಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ 022 22021680, 022 22026636 ಈ ಹೆಲ್ಪ್ ಲೈನ್ ನಂಬರ್ ಗಳನ್ನು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.
Related Articles
ಸದ್ಯದ ಪರಿಸ್ಥಿತಿಯಲ್ಲಿ ಕನ್ನಡಿಗರಿಗೆ ಊಟಕ್ಕಾಗಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ ಎಂದು ಸಂಸದ ಗೋಪಾಲ್ ಶೆಟ್ಟಿಯವರ ನಿಕಟವರ್ತಿ ಸಮಾಜ ಸೇವಕ ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ ಅವರು ತಿಳಿಸಿದ್ದಾರೆ. ಇಲ್ಲಿನ ಎಲ್ಲ ಜಾತೀಯ ಮತ್ತು ಕನ್ನಡಪರ ಸಂಘ ಸಂಸ್ಥೆಗಳು ಮತ್ತು ದಾನಿಗಳು ಕರಾವಳಿ ಕನ್ನಡಿಗರು ಸೇರಿದಂತೆ ಇನ್ನಿತರ ಭಾಷಿಕರಿಗೂ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಹೊಟೇಲ್ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈಗಾಗಲೇ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು ಕರಾವಳಿಗಳ ಬಗ್ಗೆ ಯಾರೂ ಭೀತಿಪಡುವ ಅಗತ್ಯವಿಲ್ಲ ಎಂದು ಇಲ್ಲಿನ ವಿವಿಧ ಜಾತೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.