Advertisement

ವಿಥ್‌ಡ್ರಾ ಮಾಡಿದ ಹಣ ಜಮೆಯಾಗದ್ದೇ ಸಮಸ್ಯೆ

06:00 AM Apr 19, 2018 | Team Udayavani |

ನವದೆಹಲಿ: ಬ್ಯಾಂಕ್‌ಗಳಿಂದ ವಿಥ್‌ಡ್ರಾ ಮಾಡಿದಷ್ಟು ಹಣ, ಮತ್ತೆ ವಿವಿಧ ಹಂತಗಳಲ್ಲಿ ಜಮೆಯಾಗದೇ ಇರುವುದೇ ಎಟಿಎಂಗಳಲ್ಲಿ ನಗದು ಕೊರತೆಗೆ ಕಾರಣ. ಹೀಗೆಂದು ಅಧಿಕೃತ ದಾಖಲೆಗಳನ್ನು ಉಲ್ಲೇಖೀಸಿ “ಎನ್‌ಡಿಟಿವಿ’ ವರದಿ ಮಾಡಿದೆ. ಹೀಗಾಗಿ ಹಣದ ಪೂರೈಕೆ ಮತ್ತು ಬೇಡಿಕೆಯ ನಡುವೆ ಭಾರಿ ಅಂತರ ಉಂಟಾಗಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಚಾನೆಲ್‌ ಹೇಳಿಕೊಂಡಿದೆ. 

Advertisement

ವಿತ್ತ ಸಚಿವಾಲಯದ ಬ್ಯಾಂಕಿಂಗ್‌ ವಿಭಾಗ ಈ ಬಗ್ಗೆ ಅಧ್ಯಯನ ನಡೆಸಿದೆ. ಅದರ ಪ್ರಕಾರ ಆಂಧ್ರಪ್ರದೇಶವೊಂದರಲ್ಲಿಯೇ ಏ.6ರಂದು ಸಾರ್ವಜನಿಕರು 483 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ಗಳಿಂದ ವಿಥ್‌ಡ್ರಾ ಮಾಡಿದ್ದರು. ಆದರೆ ಬ್ಯಾಂಕ್‌ಗಳಿಗೆ ಮರು ಜಮೆಯಾದದ್ದು 219 ಕೋಟಿ ರೂ. ಮಾತ್ರ. ತೆಲಂಗಾಣದಲ್ಲಿ ಕೂಡ ಅದೇ ದಿನ ಠೇವಣಿಗಿಂತ ವಿಥ್‌ಡ್ರಾ ಪ್ರಮಾಣವೇ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.

ಮುದ್ರಣವಿಲ್ಲ: ಕಳೆದ ಕೆಲ ದಿನಗಳಿಂದ 2 ಸಾವಿರ ರೂ. ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಖಾತೆ  ಕಾರ್ಯದರ್ಶಿ ಸುಭಾಷ್‌ ಗರ್ಗ್‌ ಬುಧವಾರ ಸ್ಪಷ್ಟನೆ ನೀಡಿ ದ್ದಾರೆ. ಆದರೆ ಈ ಕ್ರಮದಿಂದ ಸದ್ಯ ಚಲಾವಣೆಯಲ್ಲಿರುವ 2 ಸಾವಿರ ರೂ.ನೋಟುಗಳ ಪೂರೈಕೆಗೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ. 

2 ಸಾವಿರ ರೂ. ನೋಟಿನ ಭವಿಷ್ಯವೇನು?: ಕೇಂದ್ರ ಸರ್ಕಾರ 2 ಸಾವಿರ ರೂ. ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆಯೇ ಎಂದು ಟಿಎಂಸಿ ಸಂಸದ ದಿನೇಶ್‌ ತ್ರಿವೇದಿ ಪ್ರಶ್ನಿಸಿದ್ದಾರೆ. ಹಣಕಾಸು ವಿಚಾರಕ್ಕಾಗಿ ಇರುವ ಸಂಸತ್‌ನ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ ತ್ರಿವೇದಿ, 2 ಸಾವಿರ ರೂ. ನೋಟುಗಳ ಮುದ್ರಣವನ್ನು ಸರ್ಕಾರ ನಿಲ್ಲಿಸಿದ್ದರಿಂದ ದೇಶಾದ್ಯಂತ ನಗದು ಕೊರತೆ ಉಂಟಾಗಿದೆ. ಜನರಿಗೆ ಕೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next