ಲಕ್ನೋ: ತ್ರಿವಳಿ ತಲಾಖ್‌ಗೆ ಕೊನೆಹಾಡುವ ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ದಿನಗಣನೆ ಆರಂಭಿಸಿರುವ ಹೊತ್ತಲ್ಲೇ, ಈ ವಿಧೇಯಕಕ್ಕೆ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.
ಭಾನುವಾರ ಉತ್ತರಪ್ರದೇಶದ ಲಕ್ನೋದಲ್ಲಿ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡಳಿಯ ಪದಾಧಿಕಾರಿಗಳು, “ತ್ರಿವಳಿ ತಲಾಖ್ ವಿಧೇಯಕವು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದ್ದು, ಮಹಿಳೆಯರ ಹಕ್ಕುಗಳನ್ನು ಉಲ್ಲಂಸುವಂಥದ್ದು. ಅಲ್ಲದೆ, ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ. ಈ ವಿಧೇಯಕವು ಕಾನೂನಾಗಿ ರೂಪುಗೊಂಡರೆ ಮುಸ್ಲಿಂ ಮಹಿಳೆಯರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ’ ಎಂದಿದ್ದಾರೆ. ಜತೆಗೆ, ವಿಧೇಯಕವನ್ನು ರದ್ದುಗೊಳಿಸುವಂತೆ ಅಥವಾ ತಡೆ ಹಿಡಿಯುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದೂ ಹೇಳಿದ್ದಾರೆ.
ಇಲ್ಲಿ ಮಾತನಾಡಿದ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಖಲೀಲುರ್ ರೆಹಮಾನ್ ಸಜ್ಜದ್ ನೊಮಾನಿ, ಪ್ರಸ್ತಾಪಿತ ಮಸೂದೆಯು ಸಂವಿಧಾನದ ಮೂಲ ತತ್ವಗಳಿಗೇ ವಿರುದ್ಧವಾದದ್ದು. ವಿಧೇಯಕದ ಕರಡು ಸಿದ್ಧಪಡಿಸುವಾಗ ಕೇಂದ್ರ ಸರ್ಕಾರವು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಯನ್ನಾಗಲೀ, ಇತರೆ ಮುಸ್ಲಿಂ ಸಂಘಟನೆಗಳನ್ನಾಗಲೀ ಅಥವಾ ಸಂಬಂಧ ಪಟ್ಟ ಯಾರನ್ನೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಇದೊಂದು ಸಂಚು ಎಂದೂ ಆರೋಪಿಸಿರುವ ಮಂಡಳಿಯು, ಕೇಂದ್ರ ಸರ್ಕಾರವು ಪುರುಷರಿಗಿರುವ ವಿಚ್ಛೇದನದ
ಹಕ್ಕನ್ನು ಕಸಿಯುತ್ತಿದೆ ಎಂದೂ ಹೇಳಿದೆ.