ಗೋರಖ್‌ಪುರ : ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ಪರ್ಧಿಸುತ್ತಿರುವ ತವರು ಕ್ಷೇತ್ರ ಗೋರಖ್‌ಪುರ (ನಗರ) ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಧಾ ಮೋಹನ್ ಅಗರ್ವಾಲ್ ಅವರನ್ನು ಓಲೈಸಲು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಪ್ರಯತ್ನಿಸಿದ್ದು, ಪಕ್ಷದ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ.
ಶಾಸಕ ಅಗರ್‌ವಾಲ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಅಖಿಲೇಶ್ ಯಾದವ್ ,”ನೀವು (ವರದಿಗಾರರು) ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಿ ಅವರೊಂದಿಗೆ ಮಾತನಾಡಿದರೆ, ಟಿಕೆಟ್ ಘೋಷಿಸಲಾಗುವುದು ಮತ್ತು ಅವರಿಗೆ ಟಿಕೆಟ್ ಸಿಗುತ್ತದೆ.” ‘ಆನ್ ಸಂಕಲ್ಪ್ ದಿವಸ್’ ಸಂದರ್ಭದಲ್ಲಿ ಯಾದವ್ ಅವರು ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
”ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನನಗೆ ನೆನಪಿದೆ. ಆ ಸಂದರ್ಭ ನಾನು ರಾಧಾ ಮೋಹನ್ ಅಗರ್ವಾಲ್ ಅವರನ್ನು ನೋಡಿದ್ದೆ. ಸೀಟು ಸಿಗದೇ ನಿಂತಲ್ಲೇ ನಿಲ್ಲಬೇಕಾಗಿತ್ತು. ಬಿಜೆಪಿ ಸರಕಾರದಲ್ಲಿ ಅವರನ್ನು ಅತಿ ಹೆಚ್ಚು ಅವಮಾನಿಸಲಾಗಿದೆ ಎಂದು ಯಾದವ್ ಹೇಳಿದ್ದಾರೆ.
ಬಿಜೆಪಿಯ ಅತೃಪ್ತ ಶಾಸಕರ ಪ್ರಶ್ನೆಗೆ ಉತ್ತರಿಸಿದ ಯಾದವ್ , ”ನಾವು ಎಲ್ಲರಿಗೂ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ. ನಾವು ಈಗ ಯಾರನ್ನೂ ಎಸ್ಪಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಅಗರ್ವಾಲ್ ಹೆಸರು ಕೇಳಿದ ಕೂಡಲೇ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಅಗರ್ವಾಲ್ 2002 ರಿಂದ ಗೋರಖ್‌ಪುರ ನಗರ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ತಮ್ಮ ಕಿರಿಯ ಸಹೋದರನ ಪತ್ನಿ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಅಖಿಲೇಶ್ ಯಾದವ್, ” ಬಿಜೆಪಿಗೆ ನನ್ನ ಕುಟುಂಬದ ಬಗ್ಗೆ ನನಗಿಂತ ಹೆಚ್ಚು ಕಾಳಜಿ ಇದೆ. ಬಿಜೆಪಿಯಿಂದ ಸ್ಫೂರ್ತಿ ಪಡೆದು ಪ್ರಶ್ನೆ ಕೇಳುತ್ತಿದ್ದೀರಾ? ಎಂದರು.
ಅಪರ್ಣಾ ಯಾದವ್ ಅವರು 2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್‌ನಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಆದರೆ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು.