Advertisement

 ಅಪ್ರಾಪ್ತ ವಯಸ್ಕ ವಿವಾಹಿತೆಯರ ಹಕ್ಕು;ಅನ್ವಯ ಸಂದರ್ಭ ಎಚ್ಚರಿಕೆಯಿರಲಿ

03:35 PM Oct 12, 2017 | Sharanya Alva |

ಅಪ್ರಾಪ್ತ ವಯಸ್ಕ ಪತ್ನಿಯ ಜತೆಗೆ ಪತಿ ನಡೆಸುವ ಲೈಂಗಿಕ ಸಂಬಂಧ ವನ್ನೂ ಅತ್ಯಾಚಾರ ಎಂದು ಕರೆಯುವ ಮೂಲಕ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮಹತ್ತರವಾದುದು. ತನ್ಮೂಲಕ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಸಂಬಂಧಿ ಕಾನೂನು ಸೆಕ್ಷನ್‌ 375ಕ್ಕೆ ದೂರಗಾಮಿ ಪರಿಣಾಮ ಬೀರಬಲ್ಲ ಮಾರ್ಪಾಟನ್ನು ಮಾಡಿದಂತಾಗಿದೆ. ಇದುವರೆಗೆ ಜಾರಿಯಲ್ಲಿದ್ದ ಕಾನೂನಿನಲ್ಲಿ, 18 ವರ್ಷ ವಯಸ್ಸಿಗಿಂತ ಕೆಳಗಿನ ಪತ್ನಿಯ ಜತೆಗೆ ಪತಿಯು ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯನ್ನೂ ಅತ್ಯಾಚಾರದ ವ್ಯಾಪ್ತಿ ಯಿಂದ ಹೊರಗಿಡಲಾಗಿತ್ತು. ಪ್ರಾಪ್ತ ವಯಸ್ಸು ಎಂಬುದು ಹದಿನೆಂಟು ಆಗಿರುವಾಗ ಅದಕ್ಕಿಂತ ಕೆಳವಯಸ್ಸಿನ ಮಡದಿಯ ಜತೆಗೆ ಪತಿಯ ಲೈಂಗಿಕ ಸಂಬಂಧ ಅತ್ಯಾಚಾರದ ವ್ಯಾಪ್ತಿಯಿಂದ ಹೊರಗುಳಿಯುವುದು ಹೇಗೆ ಎಂದು ನ್ಯಾಯಾಲಯ ಎತ್ತಿರುವ ಪ್ರಶ್ನೆ ಸರಿಯಾಗಿಯೇ ಇದೆ. ಭಾರತದಲ್ಲಿ ಇರುವ ಸುಮಾರು 2.3 ಕೋಟಿ ಅಪ್ರಾಪ್ತ ವಯಸ್ಕ ವಿವಾಹಿತ ಬಾಲಕಿಯರ ಹಕ್ಕುಗಳನ್ನು ಸುಪ್ರೀಂ ಕೋರ್ಟ್‌ನ ಈ ತೀರ್ಪು ಎತ್ತಿಹಿಡಿದಿದೆ.

Advertisement

ಭಾರತದ ಅಸಮಾನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿ ಗತಿಗಳಿಂದಾಗಿ ಬಾಲ್ಯವಿವಾಹ ಕಾಯಿದೆ ಜಾರಿಯಲ್ಲಿದ್ದರೂ ಇಂದಿಗೂ ಸಹ ದೇಶದಲ್ಲಿ ಹದಿನೆಂಟು ವರ್ಷ ವಯಸ್ಸಿಗಿಂತ ಕೆಳಗಿನ ಬಾಲಕಿಯರು ವಿವಾಹ ಬಂಧನಕ್ಕೆ ಕೊರಳೊಡ್ಡುವುದು ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಬಾಲ್ಯವಿವಾಹವನ್ನು ತಡೆಯುವ ಕಾನೂನು ಇದ್ದರೂ ಅದು ಸಮರ್ಪ ಕವಾಗಿ ಜಾರಿಯಾಗುತ್ತಿಲ್ಲ. ಪ್ರಸ್ತುತ ಪ್ರಕರಣದ ವಿಚಾರಣೆಯ ಸಂದರ್ಭ ದಲ್ಲಿಯೂ ಕೇಂದ್ರ ಸರಕಾರ ಇದೇ ಕಾರಣವನ್ನು ಮುಂದೊಡ್ಡಿ, ಹದಿನೆಂಟು ವರ್ಷ ವಯಸ್ಸಿಗಿಂತ ಕೆಳಗಿನ ಪತ್ನಿಯ ಜತೆಗಿನ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸುವುದು ಅಸಾಧ್ಯ ಎಂಬುದಾಗಿ ವಾದ ಮಂಡಿಸಿತ್ತು. 

ಈ ವಿನಾಯಿತಿಯನ್ನು ತೆಗೆದುಹಾಕಿದರೆ ಅಂತಹ ಪ್ರಕರಣಗಳು ವೈವಾಹಿಕ ಅತ್ಯಾಚಾರದ ವ್ಯಾಪ್ತಿಗೆ ಬರಬಲ್ಲವು ಎಂಬುದಾಗಿ ಹೇಳಿತ್ತು. ಆದರೆ ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿ, ಪ್ರಾಪ್ತ ವಯಸ್ಸು ಎಂಬುದು ಹದಿನೆಂಟು ಆಗಿರುವಾಗ ಅದಕ್ಕಿಂತ ಕೆಳ ವಯಸ್ಸಿನ ಪತ್ನಿಯ ಜತೆಗಿನ ಲೈಂಗಿಕ ಸಂಬಂಧವನ್ನುಅತ್ಯಾಚಾರದ ವ್ಯಾಪ್ತಿಯಿಂದ ಹೊರಗಿರಿಸಿರುವುದು ಸರಿಯಲ್ಲ ಎಂದಿದೆ.

ಭಾರತದಲ್ಲಿ ಅಂದಾಜು 23 ಕೋಟಿ ಅಪ್ರಾಪ್ತ ವಯಸ್ಕ ವಿವಾಹಿತ ಬಾಲಕಿಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಬಾಲ್ಯವಿವಾಹಗಳು ನಡೆಯುತ್ತಿರುವುದನ್ನು ಈ ಪ್ರಕರಣದ ವಿಚಾರಣೆಯ ಸಂದರ್ಭ ದಲ್ಲಿ ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ ಮತ್ತದು ಅಕ್ಷರಶಃ ಸತ್ಯ. ಇಂತಹ ಪ್ರಕರಣಗಳಲ್ಲಿ ಪತಿ-ಪತ್ನಿಯರ ಲೈಂಗಿಕ ಸಂಬಂಧವನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡಲು ಈ ವಿನಾಯಿತಿಯನ್ನು ನೀಡಲಾಗಿತ್ತು. ಈಗ ನ್ಯಾಯಾಲಯ ಅದನ್ನು ನಿರಾಕರಿಸಿದೆ.

ಅಪ್ರಾಪ್ತ ವಯಸ್ಕ ವಿವಾಹಿತ ಬಾಲಕಿಯರ ಹಕ್ಕುಗಳನ್ನು ರಕ್ಷಿಸುವ, ಅವರಿಗೆ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಒದಗಿಸುವ ಸುಪ್ರೀಂ ಕೋರ್ಟ್‌ನ ಈ ತೀರ್ಪು ಪರೋಕ್ಷವಾಗಿ ಬಾಲ್ಯ ವಿವಾಹವನ್ನೂ ನಿರುತ್ತೇಜನಗೊಳಿಸುವ ಉದ್ದೇಶ ಹೊಂದಿದೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಸಮಾನತೆಗಳು ವ್ಯಾಪಕವಾಗಿರುವ ಭಾರತದಲ್ಲಿ ವಿವಿಧ ಕಾರಣಗಳಿಂದಾಗಿ ಬಾಲ್ಯವಿವಾಹಗಳು ಇಂದಿಗೂ ತೀವ್ರ ಪ್ರಮಾಣದಲ್ಲಿ ನಡೆಯುತ್ತಿವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಭಾವನೆ ದೇಶದಲ್ಲಿ ಇಂದಿಗೂ ಇದೆ, ವಯಸ್ಸಿಗೆ ಬಂದ ಹೆಣ್ಮಕ್ಕಳ ರಕ್ಷಣೆಯ ಹೊಣೆ, ಕುಟುಂಬದ ಆರ್ಥಿಕ ಸಂಕಷ್ಟಗಳು, ವಿವಿಧ ಧಾರ್ಮಿಕ- ಸಾಂಸ್ಕೃತಿಕ ಕಾರಣಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತವೆ.

Advertisement

ಬಹುತೇಕ ಪ್ರಕರಣಗಳಲ್ಲಿ ಇಂತಹ ವಿವಾಹಕ್ಕೆ ಕೊರಳೊಡ್ಡುವ ಬಾಲಕಿ ತಾನು ಬೆಳೆದ ಮನೆಯಲ್ಲಿ ಅನುಭವಿಸಿದ ಸಂಕಷ್ಟಗಳಿಗೆ ಹೆಚ್ಚುವರಿಯಾಗಿ ಪತಿಯ ಮನೆಯಲ್ಲಿ ಲೈಂಗಿಕ ದೌರ್ಜನ್ಯವನ್ನೂ ಅನುಭವಿಸು ತ್ತಾಳೆ. ಇಂತಹ ಸಂಕಟವನ್ನು ಕೊಂಚ ಮಟ್ಟಿಗಾದರೂ ದೂರ ಮಾಡಿದರೆ ಸುಪ್ರೀಂಕೋರ್ಟಿನ ತೀರ್ಪಿನ ಆಶಯ ಈಡೇರಿದಂತೆ.

ಆದರೆ, ಇದರ ಬೆನ್ನಿಗೆ ಈ ತೀರ್ಪು ಉಂಟು ಮಾಡಬಹುದಾದ ಇನ್ನೊಂದು ಆಯಾಮದ ಪರಿಣಾಮದ ಬಗ್ಗೆಯೂ ಅದರ ಅನುಷ್ಠಾನ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ಕಟುವಾದ ವರದಕ್ಷಿಣೆ ಕಾಯಿದೆ ಅನೇಕ ಪ್ರಕರಣಗಳಲ್ಲಿ ನಿರಪರಾಧಿ ಗಂಡು ಮತ್ತು ಆತನ ಮನೆಯವರನ್ನು ಸುಲಿಗೆ ಮಾಡುವುದಕ್ಕಾಗಿ ದುರ್ಬಳಕೆಯಾಗುತ್ತಿರುವ ನಿದರ್ಶನಗಳಿವೆ. ಈ ತೀರ್ಪಿನ ಅನ್ವಯವೂ ಆ ಬಗೆಯಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next