Advertisement
ರಾಮಲಕ್ಷ್ಮಣ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗೆ ವಿಶೇಷ ಪೂಜೆ ಸಲ್ಲಿಸಿ, ದೇಗುಲದ ಒಳಾಂಗಣದಲ್ಲಿ ದೊಡ್ಡದಾದ ಎರಡು ಒಲೆಗಳ ಮೇಲೆ ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲಾಯಿತು. ಅನ್ನದಾನ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಕುಕ್ಕೆಯಲ್ಲಿ ಜಾತ್ರೆಯ ಸಂದರ್ಭ ವಿಶೇಷ ಅನ್ನದಾನ ನಿರಂತರವಾಗಿ ನಡೆಯುವುದು. ಬುಧವಾರದಿಂದ ಜಾತ್ರೆ ಮುಗಿಯುವ ವರೆಗೆ ಪ್ರತಿದಿನ ವಿಶೇಷ ಕೊಪ್ಪರಿಗೆಯ ಅನ್ನವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಇದು ಶ್ರೀ ದೇವರ ಅತ್ಯಮೂಲ್ಯ ಪ್ರಸಾದಗಳಲ್ಲಿ ಒಂದು. ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ವಾರ್ಷಿಕ ಜಾತ್ರೆ ಕೂಡ ಆರಂಭಗೊಂಡಿದೆ. ನ. 17ರಂದು ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ.
ಪ್ರಥಮ ಬಾರಿಗೆ ಚಂಪಾಷಷ್ಠಿಗೆ ಹೊರೆ ಕಾಣಿಕೆ ಸಂಗ್ರಹವಾಗಿದೆ. ದೇಗುಲದ ಆಡಳಿತ ಮಂಡಳಿ ಈ ಬಾರಿ ಹೊರೆ ಕಾಣಿಕೆ ಸಂಗ್ರಹಕ್ಕೆ ನಿರ್ಧರಿಸಿತ್ತು. ಅದರಂತೆ ಕ್ಷೇತ್ರ ಹಾಗೂ ಇತರೆಡೆಗಳಿಂದ ಭಕ್ತರು ಸೀಯಾಳ, ಬಾಳೆಗೊನೆ, ಅಕ್ಕಿ, ಅಡಿಕೆ ಗೊನೆ ತರಕಾರಿ ಇತ್ಯಾದಿ ಹೊರೆ ಕಾಣಿಕೆಗಳನ್ನು ತಂದು ಬುಧವಾರ ದೇಗುಲಕ್ಕೆ ಅರ್ಪಿಸಿದರು. ಕುರಿಯಾಲ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇಗುಲದಿಂದ ಬಂದ ಹೊರೆ ಕಾಣಿಕೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು.