Advertisement

ಒಂದಷ್ಟು ಖುಷಿಯೊಂದಿಗೆ…

01:11 AM Jan 20, 2020 | Sriram |

ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು ತುಂಬಿಕೊಂಡು ದಿನಪೂರ್ತಿ ಅದರ ಯೋಚನೆಯೆಲ್ಲೇ ಕೊರಗುತ್ತಾ ನಮ್ಮ ಅಮೂಲ್ಯ ದಿನವನ್ನು ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಸಂದರ್ಭ ನಗು ಬಂದರೂ ನಗಲು ನಾವು ತಯಾರಿರುವುದಿಲ್ಲ. ಏನೇ ಆಗಲಿ ಆ ಕ್ಷಣಕ್ಕೆ ಒಮ್ಮೆ ಮನಸ್ಸು ತೆರೆದು ನಕ್ಕು ಬಿಟ್ಟರೆ ನಾವು ಎಷ್ಟೋ ಖುಷಿಯಿಂದ ಜೀವಿಸಬಹುದು. ಸಂತೋಷ ಎನ್ನುವುದೇ ಹಾಗೆಯೇ ಅದನ್ನು ಇನ್ನೊಬ್ಬರ ಹತ್ತಿರ ಹಂಚಿಕೊಂಡಷ್ಟು ಇಮ್ಮಡಿಯಾಗುತ್ತದೆ.

Advertisement

ಶಾಲೆ, ಕಾಲೇಜು, ಕ್ಯಾಂಪಸ್ಸು, ಮನೆ, ಗೆಳೆಯರು ಅವರ ಹಳೆಯ ನೆನಪುಗಳು ನಮನ್ನು ಆಗಾಗ ಕಾಡುತ್ತವೆ. ಕಳೆದು ಹೋದ ಆ ಜೀವನ ಮತ್ತೆ ಸಿಗಬೇಕು ಎನ್ನುವ ಹುಚ್ಚು ಮನಸ್ಸಿನ ಹಟ ಇನ್ನಷ್ಟು ದುಃಖಕ್ಕೆ ತಳ್ಳಿ ಬಿಡುತ್ತವೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ತಪ್ಪಲ್ಲ. ಆದರೆ ನಿನ್ನೆ ತಿಂದ ಹೋಳಿಗೆಯ ಸವಿ ಇಂದು ಬೆಳಗ್ಗಿನ ದೊಸೆಯಲ್ಲೂ ಬಯಸುವುದು ಎಷ್ಟು ಸರಿ? ನಿನ್ನೆ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದವಳೂ ಇಂದು ಇದೆಲ್ಲ ಸರಿ ಬರೊಲ್ಲ. ನಾವು ಸ್ನೇಹಿತರಾಗಿಯೇ ಉಳಿದುಬಿಡೋಣ ಎನುತ್ತಾಳೆ. ಆ ಕ್ಷಣಕ್ಕೆ ಬಂದದ್ದನ್ನು ಖುಷಿಯಿಂದ ಅನುಭವಿಸಿದರೆ ಜೀವನ ಮತ್ತಷ್ಟು ಸುಂದರವಾಗುತ್ತದೆ. ಇಲ್ಲವಾದರೆ ನಿನ್ನೆ ಅನುಭವಿಸಿದ ಸಂತೋಷಕ್ಕೆ ಇಂದು ನೋವು ಪಡಬೇಕಾಗುತ್ತದೆ. ಜೀವನದ ಪ್ರತೀ ಹಂತದಲ್ಲೂ ವಿಭಿನ್ನ ಜನರು ಸಿಗುತ್ತಾರೆ. ತುಂಬ ಹತ್ತಿರಕ್ಕೆ ಬಂದಷ್ಟೇ ವೇಗದಲ್ಲಿ ಮತ್ತೆಲ್ಲೋ ತೆರೆ ಮರೆಗೆ ಸರಿದು ಬಿಡುತ್ತಾರೆ. ಅವರಿಂದ ಹೊಸದೇನೊ ಒಂದನ್ನು ನೀವು ನಿಮಗೆ ಗೊತ್ತಿಲ್ಲದೇ ಹಾಗೆ ಕಲಿತಿರುತ್ತೀರಿ. ಜೀವನವೇ ಹಾಗೆ ಎಲ್ಲರಿಂದಲೂ ಒಂದೊಂದು ಅಂಶ ಕಲಿತು ಪಕ್ವವಾಗುತ್ತದೆ.

ಜೀವನ ಹರಿಯುವ ನೀರಾಗಬೇಕು. ದಟ್ಟ ಕಾನನವ ಭೇದಿಸಿ ಕಣಿವೆಯಿಂದ ಧುಮಿಕ್ಕಿ ಹರಿಯುವ ನದಿಯಂತೆ ನಮ್ಮ ಜೀವನದಲ್ಲೂ ಅಚಾನಕ್ಕಾದ ತಿರುವು, ಭೋರ್ಗರೆತ, ಭಯ ಹುಟ್ಟಿಸುವ ಆಳವಾದ ಕಣಿವೆ, ಶಾಂತವಾದ ಬಯಲು ಆಗಾಗ ಎದುರಾಗುತ್ತವೆ. ಹೀಗಿದ್ದಾಗಲೇ ಅದಕ್ಕೊಂದು ಅರ್ಥ ಸಿಗುವುದು. ಬದುಕಿನ ಪಯಣದ ಉದ್ದಕ್ಕೂ ಅನೇಕರು ಸಿಗುತ್ತಾರೆ. ಕೆಲವರು ಶಾಶ್ವತ, ಕೆಲವರು ಕ್ಷಣಿಕ, ಇನ್ನು ಕೆಲವರು ಇದ್ದೂ ಇಲ್ಲದಂತೆ ಇದ್ದುಬಿಡುತ್ತಾರೆ. ಜತೆಗಿರುವಷ್ಟು ದಿನ ಒಬ್ಬರಿಗೊಬ್ಬರು ಹೆಗಲಾಗುತ್ತಾ, ಹೆಗಲು ಬಯಸುತ್ತಾ ಅವರ ಸುಖ, ದುಃಖದಲ್ಲಿÉ ಜತೆಯಾಗಿ ಇದ್ದು ಬಿಡಬೇಕು. ಹಾಗೇ ಒಂದಷ್ಟು ಖುಷಿಯೊಂದಿಗೆ…

– ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next