ಮುಂಬೈ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ದಿನಗೂಲಿ ನೌಕರರು, ಕಾರ್ಮಿಕರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದೀಗ ಮುಂಬೈನಲ್ಲಿ ಅತ್ಯಂತ ಜನಪ್ರಿಯವಾಗಿ ಡಬ್ಬಾವಾಲಾಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಸದ್ಯ ಮುಂದುವರಿದಿರುವ ಲಾಕ್ ಡೌನ್ ನಿಂದಾಗಿ ಟಿಫಿನ್ ಡೆಲಿವರಿ ಸೇವೆ ನಿಂತು ಹೋಗಿದೆ. ಇದರಿಂದ ಡಬ್ಬಾವಾಲಾಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು, ಇದೀಗ ಸರ್ಕಾರದ ಆರ್ಥಿಕ ನೆರವಿಗಾಗಿ ಎದುರು ನೋಡುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಜೀ ವರದಿ ಪ್ರಕಾರ, ಡಬ್ಬಾವಾಲಾಗಳು ಮಾರ್ಚ್ 31ರಂದು ಟಿಫಿನ್ ಸರ್ವಿಸ್ ಅನ್ನು ಮುಂಬೈನಲ್ಲಿ ನಿಲ್ಲಿಸಿದ್ದರು. ಅಲ್ಲದೇ 21 ದಿನಗಳ ಲಾಕ್ ಡೌನ್ ಗೆ ಪೂರ್ಣ ಬೆಂಬಲ ಘೋಷಿಸಿದ್ದರು.
ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕೋವಿಡ್ 19 ವೈರಸ್ ಪ್ರಕರಣ ದಿಢೀರ್ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿದೆ. ಮುಂಬೈನಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಡಬ್ಬಾವಾಲಾಗಳಿಗೆ ತಮ್ಮ ದೈನಂದಿನ ಖರ್ಚು, ವೆಚ್ಚಕ್ಕೆ ಸಮಸ್ಯೆ ತಂದೊಡ್ಡಿದೆ ಎಂದು ಅಲವತ್ತುಕೊಂಡಿರುವುದಾಗಿ ವರದಿ ವಿವರಿಸಿದೆ.
ಯಾವುದೇ ಸಮಸ್ಯೆ ಇಲ್ಲದೆ ಟಿಫಿನ್ ಡೆಲಿವರಿ ಹಾಗೂ ಇಡೀ ಜಗತ್ತಿನಲ್ಲಿಯೇ ಅದ್ಬುತ ಮ್ಯಾನೇಜ್ ಮೆಂಟ್ ಕೌಶಲ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಮುಂಬೈನ ಡಬ್ಬಾವಾಲಾಗಳು. ಇವರು ಮುಂಬೈನಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ಟಿಫಿನ್ ಸರ್ವಿಸ್ ನೀಡುವ ಮೂಲಕ ವ್ಯವಹಾರ ನಡೆಸುತ್ತಿದ್ದರು.
ಮುಂಬೈನಲ್ಲಿ ಈ ಡಬ್ಬಾವಾಲಾಗಳು ದಿನಂಪ್ರತಿ 200,000 ಲಕ್ಷದಷ್ಟು ಮನೆ ಅಡುಗೆಯನ್ನು ತಯಾರಿಸುತ್ತಾರೆ. ಆದರೆ ಕಳೆದ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘಕಾಲ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದು. ಅಲ್ಲದೇ ಸರ್ಕಾರ ಕೂಡಾ ಲಾಕ್ ಡೌನ್ ಮುಂದುವರಿಸುವ ಸುಳಿವು ನೀಡಿದೆ. ಹೀಗಾಗಿ ಡಬ್ಬಾವಾಲಾಗಳಿಗೆ ಸದ್ಯ ತಮ್ಮ ಸೇವೆಯನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.
ಲಾಕ್ ಡೌನ್ ದಿನಗಳಲ್ಲಿ ನಮಗೆ ಕೆಲಸವೇ ಇಲ್ಲದಂತಾಗಿದೆ. ಇದರಿಂದಾಗಿ ಡಬ್ಬಾವಾಲಾಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಸಾರ್ವಜನಿಕರಿಂದ ಹಾಗೂ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವಿವರಿಸಿದೆ.