ಮಲಪ್ಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಕೇರಳ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಅಸ್ಸಾಂ ಮೂಲದ ಯುವಕನೊಬ್ಬ ದಿನಗಟ್ಟಲೆ ಆಹಾರ ಸೇವಿಸಲು ಸಾಧ್ಯವಾಗದೆ ಬೆಕ್ಕಿನ ಹಸಿ ಮಾಂಸವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಜನನಿಬಿಡ ಬಸ್ ನಿಲ್ದಾಣದ ಆವರಣದಲ್ಲೇ ಶನಿವಾರ ಸಂಜೆ ಈ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಕುಳಿತು ಸತ್ತ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದನ್ನು ಸ್ಥಳೀಯ ಜನರು ಕಂಡಿದ್ದಾರೆ. ಮಾಹಿತಿ ನೀಡಿದ ನಂತರ, ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಯುವಕನನ್ನು ವಿಚಾರಿಸಿದಾಗ, ಕಳೆದ ಐದು ದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದ್ದಾನೆ ”ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕೂಡಲೇ ಸ್ವಲ್ಪ ಆಹಾರವನ್ನು ಖರೀದಿಸಿ ತಂದು ನೀಡಿದ್ದು, ಯುವಕ ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ತಿಂದಿದ್ದು, ಕೆಲ ಸಮಯದ ಬಳಿಕ ಯಾರಿಗೂ ಹೇಳದೆ ಸ್ಥಳದಿಂದ ನಾಪತ್ತೆಯಾಗಿದ್ದಾನೆ.
ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಯುವಕ ಪತ್ತೆಯಾಗಿರುವ ಬಗ್ಗೆ ಭಾನುವಾರ ಬೆಳಗ್ಗೆ ಮಾಹಿತಿ ಲಭಿಸಿದ್ದರಿಂದ, ಪೊಲೀಸರು ಸ್ಥಳಕ್ಕೆ ಧಾವಿಸಿ ಅವನ ಇರುವಿಕೆಯ ವಿವರಗಳನ್ನು ಹುಡುಕಿದ್ದಾರೆ. ಯುವಕನ ಹೇಳಿಕೆಗಳ ಆಧಾರದ ಮೇಲೆ, ಆತ ಈಶಾನ್ಯ ರಾಜ್ಯದ ಕಾಲೇಜು ವಿದ್ಯಾರ್ಥಿಯಾಗಿದ್ದು, ಡಿಸೆಂಬರ್‌ನಲ್ಲಿ ತನ್ನ ಕುಟುಂಬಕ್ಕೆ ತಿಳಿಸದೆ ರೈಲಿನಲ್ಲಿ ಕೇರಳ ತಲುಪಿದ್ದ. ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಆತನ ಸಹೋದರನ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ಆತನನ್ನು ಸಂಪರ್ಕಿಸಿದಾಗ ಮಾಹಿತಿ ಸರಿಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ, ನೆರೆಯ ತ್ರಿಶೂರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಲ್ಲ ಎಂದು ತೋರುತ್ತಿದೆ. ಆತನನ್ನು ಸಂಬಂಧಿಕರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.