ಹೊಸದಿಲ್ಲಿ : ಅತ್ತ ಗೋವೆಯಲ್ಲಿ ನಾಳೆ ಮಂಗಳವಾರ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರ್ರೀಕರ್ ಅವರು ಪ್ರಮಾಣ ವಚನ ಸ್ವೀಕರಿಸಲಿರುವಂತೆಯೇ ಇತ್ತ ದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ನೂತನ ರಕ್ಷಣಾ ಮಂತ್ರಿಯಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಇಂದು ಬೆಳಗ್ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮನೋಹರ್ ಪರ್ರೀಕರ್ ಅವರು ತಮ್ಮ ರಕ್ಷಣಾ ಸಚಿವ ಪದಕ್ಕೆ ಕೊಟ್ಟ ತ್ಯಾಗಪತ್ರವನ್ನು ಸ್ವೀಕರಿಸಿದರು.
ಗೋವೆಯ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಪರ್ರೀಕರ್ ಅವರ ಪ್ರಮಾಣ ವಚನ ಸ್ವೀಕಾರವು ಪಣಜಿಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವರೆಂದು ಪರ್ರೀಕರ್ ತಿಳಿಸಿದರು.
40 ಸದಸ್ಯಬಲ ಗೋವೆಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನಿಯಾಗಿ 13 ಸ್ಥಾನಗಳನ್ನು ಪಡೆದಿದ್ದು ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಪಾರ್ಟಿಯ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರುತ್ತಿದೆ. 17 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದಿರುವ ಕಾಂಗ್ರೆಸ್, ಸರಕಾರ ರಚಿಸುವ ಸ್ಪರ್ಧೆಯಲ್ಲಿ ಹಿಂದುಳಿದಿರುವುದು ವಿಪರ್ಯಾಸವಾಗಿದೆ.
ಇಂದು ಗೋವೆಯ ರಾಜ್ಯಪಾಲರಿಂದ ಮುಖ್ಯಮಂತ್ರಿಯಾಗಿ ನೇಮಿಸಲ್ಪಟ್ಟ ಪರ್ರೀಕರ್ ಅವರು ಇನ್ನು ಹದಿನೈದು ದಿನಗಳ ಒಳಗೆ ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತು ಪಡಿಸಬೇಕಾಗಿದೆ.