Advertisement

ಜತೆಯಲ್ಲೇ ಸಮಗ್ರ ಅಭಿವೃದಿ ಯೋಜನೆ; ಒಗ್ಗಟ್ಟೆ ಇಲ್ಲಿಯ ಮಂತ್ರ 

10:28 AM Dec 08, 2018 | |

ವಿಟ್ಲಮುಟ್ನೂರು: ವಿಟ್ಲ ಸೀಮೆಯ ಕುಳ – ವಿಟ್ಲಮುಟ್ನೂರು ಗ್ರಾಮದ ಕುಂಡಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನವಿದೆ. ಮಾಡತ್ತಡ್ಕದಲ್ಲಿ ಗ್ರಾಮ ದೈವಗಳಾದ ಶ್ರೀ ಮೂವರ್‌ ದೈವಂಗಳು, ಮಲರಾಯ ದೈವದ ದೈವಸ್ಥಾನ ವಿದೆ. ಮೂವರ್‌ದೈವಂಗಳ ಭಂಡಾರ ಸ್ಥಾನವು ಕುಳಗ್ರಾಮದ ಜೈನರಕೋಡಿಯಲ್ಲಿದ್ದು, ಮಲರಾಯ ದೈವದ ಭಂಡಾರ ಸ್ಥಾನವು ವಿಟ್ಲಮುಟ್ನೂರು ಗ್ರಾಮದ ಡೆಚ್ಚಾರುವಿನಲ್ಲಿದೆ. ಇವೆಲ್ಲವುಗಳ ಜೀರ್ಣೋದ್ಧಾರ, ಜತೆಜತೆಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿ ಯೋಜನೆಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಇದೊಂದು ಕ್ರಾಂತಿಯಾಗಿ ಮೂಡಿ ಬಂದಿದೆ. ಒಗ್ಗಟ್ಟೇ ಈ ಗ್ರಾಮದ ಮಂತ್ರವಾಗಿದೆ.

Advertisement

ದೇವಸ್ಥಾನ, ದೈವಸ್ಥಾನ ಮತ್ತು ಭಂಡಾರ ಮನೆಗಳನ್ನು ಸುಮಾರು 2.50ರಿಂದ 3 ಕೋಟಿ ವೆಚ್ಚದಲ್ಲಿ ಪುನರ್‌ ನಿರ್ಮಾಣ ಕಾರ್ಯ ನಡೆಸಲಾಗಿದೆ. ದೇಗುಲಕ್ಕೆ ವಸ್ತು ರೂಪವಾಗಿ ಶಿಲೆ, ಕೆಂಪುಕಲ್ಲು, ಮರಗಳನ್ನು ಸಂಗ್ರಹಿಸಲಾಗಿದೆ. ಕುಳ – ವಿಟ್ಲಮುಟ್ನೂರು ಗ್ರಾಮದಲ್ಲಿ 2.6 ಕೋಟಿ ರೂ. ಸಂಗ್ರಹಿಸಲಾಗಿದೆ. ಮಾರ್ಚ್‌ 2017ರಲ್ಲಿ ಅನುಜ್ಞಾಕಲಶ, ಮಾರ್ಚ್‌-2019ರ ಒಳಗೆ ಬ್ರಹ್ಮಕಲಶ ನಡೆಸಲು ತೀರ್ಮಾನಿಸಲಾಗಿತ್ತು.

ಆಹಾರ ಸ್ವಾವಲಂಬನೆ
ಬಂಜರು ಭೂಮಿಯಲ್ಲಿ ಗದ್ದೆ ಬೇಸಾಯ ಮತ್ತು ಹೊಸತಾಗಿ ಮಾಡಬಹುದಾದ ಗದ್ದೆಗಳನ್ನು ಉಳುಮೆ ಮಾಡಿ ಭತ್ತದ ಕೃಷಿ ಮಾಡುವ ಯೋಜನೆಯನ್ನು ಆರಂಭಿಸಲಾಗಿದೆ. ಕಳೆದ 2 ವರ್ಷಗಳಿಂದ 5 ಎಕ್ರೆ ಭೂಮಿಯಲ್ಲಿ 60-70 ಕ್ವಿಂಟಾಲ್‌ ಭತ್ತವನ್ನು ಬೆಳೆಯಲಾಗಿದೆ. 2018ನೇ ಸಾಲಿನಲ್ಲಿ ಸುಮಾರು 7 ಎಕ್ರೆ ಗದ್ದೆಯಲ್ಲಿ 100 ಕ್ವಿಂಟಾಲ್‌ ಭತ್ತ ಬೆಳೆಯಲಾಗಿದೆ. ಜತೆಗೆ ತರಕಾರಿಗಳನ್ನು ಬೆಳೆಸಲು ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ದೇವಸ್ಥಾನದ ಬ್ರಹ್ಮಕಲಶಕ್ಕಾಗಿ ತರಕಾರಿ ಬೆಳೆಸಲು ಬೀಜಗಳ ವಿತರಿಸಲಾಗಿದೆ.

ನೀರು
ಕಳೆದೆರಡು ವರ್ಷಗಳಿಂದ ಗ್ರಾಮದ ವಿವಿಧ ತೋಡುಗಳಿಗೆ ಸುಮಾರು 40 ಅಣೆಕಟ್ಟೆಗಳನ್ನು ಗ್ರಾಮಸ್ಥರು ಒಟ್ಟು ಸೇರಿ ನಿರ್ಮಿಸಿದ್ದಾರೆ. ಪಂ. ಸಹಾಯದೊಂದಿಗೆ ಚಿಕ್ಕ ಡ್ಯಾಮ್‌ಗಳನ್ನೂ ರಚಿಸಲಾಗಿದೆ. ಮುಂದಿನ ಯೋಜನೆಯಾಗಿ ಸಂಪುಗಳನ್ನು ರಚಿಸಲು ನಿರ್ಣಯಿಸಲಾಗಿದೆ. ಪ್ರಾಯೋಗಿಕವಾಗಿ ದೇವಸ್ಥಾನದ ಮುಂಭಾಗದಲ್ಲಿ 1 ಲಕ್ಷ ಲೀ. ನೀರು ಯೋಜನೆಯನ್ನು ಮಳೆ ಕೊಯ್ಲು ಸಂಗ್ರಹಕ್ಕಾಗಿ ರಚಿಸಲಾಗುತ್ತಿದೆ.

ಬೆಳಕು
ಪ್ರತಿ ಮನೆಗೆ 2 ಸೋಲಾರ್‌ ಬಲ್ಬ್ ನೀಡಲು ತೀರ್ಮಾನಿಸಲಾಗಿದೆ. ಧಾರ್ಮಿಕವಾಗಿಯೂ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ಇಲ್ಲಿ ಸಾಮೂಹಿಕವಾಗಿ ರಾಮತಾರಕ ಮಂತ್ರ ಪಠನ, ಲಲಿತಾ ಸಹಸ್ರನಾಮ ಪಠನ, ಕುಂಕು ಮಾರ್ಚನೆ, ವಿಷ್ಣು ಸಹಸ್ರ ನಾಮ ಪಠಿಸಲಾಗುತ್ತಿದೆ. ಮುಂದೆ ಪುರಾಣ, ಸಂಸ್ಕೃತ ಶ್ಲೋಕ ಇತ್ಯಾದಿ ಕಲಿಸುವ ಸಂಸ್ಕೃತಿ ಕಲಿಕಾ ಕೇಂದ್ರ ಆರಂಭಿಸುವ ಬಗ್ಗೆ ಚಿಂತನೆ ನಡೆದಿವೆ.

Advertisement

ಗ್ರಾಮಜ್ಯೋತಿ
ಗ್ರಾಮಜ್ಯೋತಿಯೊಡನೆ ಆಮಂತ್ರಣ ಪತ್ರಿಕೆ ಭಕ್ತರ ಮನೆ ತಲುಪುತ್ತದೆ. ಡಿ.9 ರಂದು ಕರ್ಗಲ್ಲು-ನೂಜಿ ಮನೆತನ, ಕುಂಡಡ್ಕ-ಕುಡ್ವ ಮನೆತನ, ಕುಳ ಮನೆತನ, ಕುಂಡಡ್ಕ ಮನೆತನಗಳ ಮೂಲಕ ವಿಟ್ಲ ಅರಮನೆಗೆ ತೆರಳುವ ಜ್ಯೋತಿ ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ತಲುಪಲಿದೆ. ಬಳಿಕ ಈ ಗ್ರಾಮಕ್ಕೆ ತಾಗಿಕೊಂಡಿರುವ ಗ್ರಾಮಗಳಿಗೆ ಆಮಂತ್ರಣ ನೀಡಿ, ವ್ರತಾಚರಣೆಯೊಂದಿಗೆ ಬ್ರಹ್ಮಕಲಶ ಸಂಭ್ರಮಕ್ಕೆ ಬದ್ಧರಾಗಲಿದ್ದಾರೆ.

ಗ್ರಾಮ ಸಮೃದ್ಧಿ ಯೋಜನೆ 
ದೇವಸ್ಥಾನ ಜೀರ್ಣೋದ್ಧಾರದ ಜತೆಜತೆಗೆ ಗ್ರಾಮದ ಹಾಗೂ ಜನರ ಮನೆ-ಮನಗಳೆಲ್ಲವೂ ಜೀರ್ಣೋದ್ಧಾರಗೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಹಾಕಿರುವ ಯೋಜನೆಯೇ ಗ್ರಾಮ ಸಮೃದ್ಧಿ. ಆಹಾರ, ನೀರು, ಬೆಳಕು ಇವುಗಳಲ್ಲಿ ಸ್ವಾವಲಂಬಿಗಳಾಗಬೇಕೆಂಬ ಮುಖ್ಯ ಉದ್ದೇಶವನ್ನು ಇರಿಸಲಾಗಿದೆ. ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ನೀಡಿ ಸಮಾಜದ ಏಳಿಗೆಗೆ ಕ್ರಮ ಕೈಗೊಳ್ಳಲಾಗಿದೆ.

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next