ವಾಷಿಂಗ್ಟನ್: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಆರಂಭವಾಗುತ್ತಿರುವಂತೆಯೇ ಅಮೆರಿಕದಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ವಾಕ್ಸಮರ ಬಿರುಸಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನವು ಕಾಶ್ಮೀರ ವಿಚಾರ ಪ್ರಸ್ತಾಪ ಮಾಡುವ ನಿರೀಕ್ಷೆಯ ಬೆನ್ನಲ್ಲೇ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ರಾಯಭಾರಿ ಸಯ್ಯದ್ ಅಕ್ಬರುದ್ದೀನ್, ನೆರೆರಾಷ್ಟ್ರದ ಕುತಂತ್ರಗಳಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದಿದ್ದಾರೆ. ಪಾಕಿಸ್ಥಾನ ಕಾಶ್ಮೀರ ವಿಚಾರವನ್ನು ಏಕಮುಖವಾಗಿ ಪ್ರಸ್ತಾವಿಸಿದರೆ ಅದಕ್ಕೆ ಸೂಕ್ತ ಉತ್ತರ ನೀಡುತ್ತೇವೆ. ಹಿಂದೆಯೂ ಅಂಥದ್ದೇ ಪರಿಸ್ಥಿತಿ ಭಾರತಕ್ಕೆ ಎದುರಾಗಿದ್ದಾಗ ಅದನ್ನು ನಿಭಾಯಿಸಿದ್ದೆವು ಎಂದಿದ್ದಾರೆ ಅಕ್ಬರ್.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ದ್ವಿಪಕ್ಷೀಯ ಮಾತುಕತೆ ಪುನಾರಂಭದ ಬಗ್ಗೆ ಭಾರತದ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಆದರೆ ಉಗ್ರ ಬುರ್ಹಾನ್ ವಾನಿ ಸ್ಮರಣಾರ್ಥ ಅಂಚೆ ಚೀಟಿ, ಮೂವರು ಪೊಲೀಸರ ಹತ್ಯೆ, ಬಿಎಸ್‌ಎಫ್ಯೋ ಧನ ಕತ್ತು ಸೀಳಿ ಕೊಂದ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವು ದ್ವಿಪಕ್ಷೀಯ ಮಾತುಕತೆ ಪ್ರಸ್ತಾಪ ತಿರಸ್ಕರಿಸಿತ್ತು.
ಪ್ರಯತ್ನ ಕೈಬಿಡಲ್ಲ: ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಾತನಾಡಿ, ಭಾರತ ಶಾಂತಿ ಮಾತುಕತೆ ಬಗ್ಗೆ ನಿರಾಸಕ್ತಿ ಹೊಂದಿದ್ದರೂ ನಾವು ಪ್ರಯತ್ನ ಕೈ ಬಿಡುವುದಿಲ್ಲ. ಜುಲೈನಲ್ಲಿ ನಡೆದಿದ್ದ ಘಟನೆಗಳನ್ನು ಆಧರಿಸಿ ಸೆಪ್ಟೆಂಬರ್‌ನಲ್ಲಿ ಒಪ್ಪಿಕೊಂಡ ಶಾಂತಿ ಪ್ರಸ್ತಾಪ ರದ್ದು ಮಾಡಿದೆ ಭಾರತ ಎಂದು ದೂರಿದರು. ವಿಚಾರಗಳಿಂದ ಓಡಿ ಹೋದರೆ ಅದೃಶ್ಯವಾದಂತಾಗುವುದಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸಲೂ ಸಾಧ್ಯವಾಗದು ಎಂದಿದ್ದಾರೆ. ಅಲ್ಲದೆ, ಭಾರತದ ವಿದೇಶಾಂಗ ಸಚಿವರು ಬಳಸಿದ ಭಾಷೆ ಅವರ ಹುದ್ದೆಗೆ ತಕ್ಕುದಾಗಿರಲಿಲ್ಲ ಎಂದೂ ಆರೋಪಿಸಿದ್ದಾರೆ.
ಒಂದೇ ದಿನ ಭಾಷಣ: ವಿಶ್ವಸಂಸ್ಥೆಯ 73ನೇ ವಾರ್ಷಿಕ ಮಹಾಧಿವೇಶನದಲ್ಲಿ ಈ ಬಾರಿ ಭಾರತ, ಪಾಕಿಸ್ಥಾನ ವಿದೇಶಾಂಗ ಸಚಿವರು ಒಂದೇ ದಿನ ಮಾತನಾಡಲಿದ್ದಾರೆ. 29ರ ಬೆಳಗ್ಗೆ ಭಾರತದ ಸಚಿವೆ ಸುಷ್ಮಾ ಸ್ವರಾಜ್, ಮಧ್ಯಾಹ್ನದ ಬಳಿಕ ಪಾಕ್‌ನ ಖುರೇಷಿ ಭಾಷಣ ಮಾಡಲಿದ್ದಾರೆ. ಇಬ್ಬರೂ ಪ್ರಬಲವಾಗಿಯೇ ತಮ್ಮ ತಮ್ಮ ವಾದಗಳನ್ನು ಮಂಡಿಸುವ ನಿರೀಕ್ಷೆ ಇದೆ.
‘ಸ್ನೇಹಿತ ಮೋದಿಗೆ ಶುಭಾಶಯ ತಿಳಿಸಿ’
‘ಭಾರತವನ್ನು ನಾನು ಇಷ್ಟ ಪಡುತ್ತೇನೆ. ಸ್ನೇಹಿತ ಪ್ರಧಾನಿ ಮೋದಿಗೆ ನನ್ನ ಶುಭಾಶಯ ತಿಳಿಸಿ’ ಹೀಗೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ತಿಳಿಸಿದ್ದಾರೆ. ಮಾದಕ ವಸ್ತು ಸಾಗಣೆ ನಿಯಂತ್ರಣ ಕುರಿತ ಸಭೆಯಲ್ಲಿ ಟ್ರಂಪ್ ಹಾಗೂ ಸುಷ್ಮಾ ಭೇಟಿ ವೇಳೆ “ಪ್ರಧಾನಿ ಮೋದಿಯವರಿಂದ ಶುಭಾಶಯಗಳನ್ನು ತಂದಿದ್ದೇನೆ’ ಎಂದು ಹೇಳಿದಾಗ ಟ್ರಂಪ್ ಅದಕ್ಕೆ ಈ ರೀತಿ ಪ್ರತ್ಯುತ್ತರ ನೀಡಿದ್ದಾರೆ.