Advertisement

ಘನತೆಯಿಂದ ವೃತ್ತಿ ನಿರ್ವಹಣೆ ನೆಮ್ಮದಿಗೆ ಸಹಕಾರಿ

11:43 AM Jun 18, 2018 | |

ವಿಜಯಪುರ: ನಮ್ಮಲ್ಲಿರುವ ನೈತಿಕ ಶಕ್ತಿ, ಚೈತನ್ಯವೇ ನಮ್ಮನ್ನು ವೃತ್ತಿ ಬದುಕಿನಲ್ಲಿ ಸಾಧನೆಗೆ ಪ್ರೇರೇಪಿಸುತ್ತದೆ. ವೃತ್ತಿಯಲ್ಲಿ ಗೌರವದ ಜೊತೆಗೆ ಹಸನ್ಮುಖೀಯಾಗಿದ್ದರೆ ಮಾಡುವ ಕೆಲಸವೂ ತೃಪ್ತಿದಾಯಕವಾಗಿರುತ್ತದೆ.
ಅಂತರಂಗ ಶುದ್ಧಿಯಿಂದ ಮಾನಸಿಕ, ದೈಹಿಕ, ಆರೋಗ್ಯ ನಮ್ಮ ಹಿಡಿತದಲ್ಲಿದ್ದರೆ ಸಾಧನೆ ಸಾಧ್ಯ ಎಂದು ಕರ್ನಾಟಕ
ಹೈಕೋರ್ಟ್‌ ನಿವೃತ್ತ ಹಿರಿಯ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು.

Advertisement

ತಮಗಾಗಿ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಾಂಗ ಇಲಾಖೆ ನೌಕರರು ನನಗೆ ಕೊಟ್ಟ ಪ್ರೀತಿ, ವಿಶ್ವಾಸವೇ ನನ್ನನ್ನು ಎತ್ತರಕ್ಕೆ ಬೆಳೆಯಲು ಸಹಕರಿಸಿದೆ. ಇರುವುದರಲ್ಲೇ ನೆಮ್ಮದಿ ಜೀವನ ನಡೆಸಿದಲ್ಲಿ ಸಂತೃಪ್ತ ಜೀವನಕ್ಕೆ ಅದುವೇ ಶಕ್ತಿಯಾಗಿರುತ್ತದೆ.

ವೃತ್ತಿ ಜೀವನದ ನಿವೃತ್ತಿ ನಂತರವು ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯಿಂದ ಜೀವನ ನಡೆಸುವುದು ನಮ್ಮೆಲ್ಲರ ಜವಾಬ್ದಾರಿ. ಜೊತೆಗೆ ಪ್ರತಿ ಉದ್ಯೋಗಿಗೂ ತನ್ನ ಉದ್ಯೋಗದ ಕುರಿತು ಗೌರವ ಹೊಂದಿದ್ದಲ್ಲಿ ಸಮರ್ಪಕ ಕರ್ತವ್ಯ ನಿರ್ವಹಣೆಯೂ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾಆಡಳಿತಾತ್ಮ ನ್ಯಾಯಮೂರ್ತಿಗಳೂ ಆಗಿರುವ ಹೈಕೋರ್ಟ್‌ ನ್ಯಾಯಮೂರ್ತಿ
ಕೆ.ಎನ್‌. ಫಣೀಂದ್ರ ಮಾತನಾಡಿ, ಕಾನೂನಿನ ದೃಷ್ಟಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕೂಡಿರಬೇಕು. ವೃತ್ತಿಯಲ್ಲಿ ಒಪ್ಪಿಕೊಳ್ಳುವುದು, ಅಪ್ಪಿಕೊಳ್ಳುವಿಕೆ ಪ್ರೀತಿ, ವಿಶ್ವಾಸ ವ್ಯವಸ್ಥೆಯ ಕಾಳಜಿ ತುಂಬಾ ಮುಖ್ಯ. ಮನಸ್ಸಿನ ಭಾವನೆ ಅಂತರಾಳದ ಮಾತಾಗಿರಬೇಕು. ನಮ್ಮ ಇಡಿ ಬದುಕಿನಲ್ಲಿ ಹೆತ್ತವರು ಹಾಗೂ ಗುರುವಿನ ಪಾತ್ರ ಮಹದ್ದಾಗಿರುತ್ತದೆ.  

ನಮ್ಮನ್ನು ಬೆಳೆಸುವಲ್ಲಿ ಸಹಕರಿಸಿದ ಸಮಾಜದ ಋಣ ಎಂದೂ ತೀರಿಸಲು ಸಾಧ್ಯವಿಲ್ಲ. ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ, ಬದುಕಿದ್ದಾಗ ಸಮಾಜಕ್ಕೆ ಎಷ್ಟು ಉಪಯುಕ್ತವಾಗಿ ಬದುಕಿದ್ದ ಎಂಬುವುದೇ ಮುಖ್ಯವಾಗುತ್ತದೆ ಎಂದರು. 

Advertisement

ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ ಬಾಳಿಕಾಯಿ, ಹೈಕೋರ್ಟ್‌ ಹಿರಿಯ ವಕೀಲೆ ಶೋಭಾ ಪಾಟೀಲ, ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ರವಿ ಅರಕೇರಿ ವೇದಿಕೆಯಲ್ಲಿದ್ದರು.
ವಕೀಲರಾದ ಬಿ.ಜಿ. ಮುಚ್ಚಂಡಿ, ರವಿ  ಅರಕೇರಿ, ಶಿವಾನಂದ ಚಕ್ರಮನಿ, ಬಸವರಾಜ ಬಿಸಿರೊಟ್ಟಿ, ಮಹಾದೇವಿ ಕುಂಬಾರ, ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಎಸ್‌.ಐ. ಹೊಸಮನಿ, ಬಿ.ಪಿ. ಬೇವೂರ, ಎಸ್‌.ಪಿ. ಮೋರೆ, ಎಸ್‌.ಕೆ. ಬಗಲಿ ಇದ್ದರು. ಎಚ್‌.ಕೆ. ದೊಡಮನಿ, ಸಂಗಮೇಶ ಬದಾಮಿ ನಿರೂಪಿಸಿದರು. ಜ್ಯೋತಿ ಶಹಾಪೇಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next