ನವದೆಹಲಿ: 2018ನೇ ಸಾಲಿನ ಭಾರತದ ಹುಲಿ ಗಣತಿ ಅಂಕಿಅಂಶವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಅಂದಾಜು 3000 ಹುಲಿಗಳು ಇದ್ದಿರುವುದಾಗಿ ವರದಿ ತಿಳಿಸಿದ್ದು, ದೇಶದ ಹುಲಿಗಳ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ.
2014ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 2,226 ಇದ್ದಿದ್ದು, 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ. ಈ ಮೂಲಕ ವಿಶ್ವದಲ್ಲಿಯೇ ಭಾರತ ಹುಲಿಗಳ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳ ಎಂಬುದಾಗಿ ಗುರುತಿಸಿಕೊಂಡಿದೆ.
ಇಂದು ಹುಲಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದಿಲ್ಲಿಯಲ್ಲಿ ಹುಲಿ ಗಣತಿಯ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿದ್ದಾರೆ. 2018ರಲ್ಲಿ 2,967 ಹುಲಿಗಳು ದೇಶದಲ್ಲಿದ್ದು, ಇದರಿಂದ ಪ್ರತಿಯೊಬ್ಬ ನಿಸರ್ಗ ಪ್ರೇಮಿಯೂ ಸಂತಸ ಪಡುವಂತಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕಥೆ “ಏಕ್ ಥಾ ಟೈಗರ್ ನಿಂದ ಆರಂಭವಾಗಿ ಟೈಗರ್ ಜಿಂದಾ ಹೈ ಎಂಬಲ್ಲಿಗೆ ಬಂದು ತಲುಪಿದೆ. ಇದು ಎಂದಿಗೂ ಅಂತ್ಯವಾಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಸಿನಿಮಾದ ಹೆಸರನ್ನು ಉಪಮೆಯಾಗಿ ಬಳಸುವ ಮೂಲಕ ಉದಾಹರಣೆಯನ್ನು ನೀಡಿದ್ದಾರೆ.
ಹುಲಿ ಸಂಖ್ಯೆಯಲ್ಲಿ ಮಧ್ಯಪ್ರದೇಶ ನಂ-1, ಕರ್ನಾಟಕಕ್ಕೆ 2ನೇ ಸ್ಥಾನ:
ಹುಲಿಗಳ ಗಣತಿಯ ಪ್ರಕಾರ, ಅತೀ ಹೆಚ್ಚು ಹುಲಿಗಳು ಇರುವ ರಾಜ್ಯಗಳಲ್ಲಿ ಮಧ್ಯಪ್ರದೇಶ(526) ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ (524) ಸ್ಥಾನ ಪಡೆದಿದೆ. ಉತ್ತರಾಖಂಡ್ (442) ಸ್ಥಾನ ಪಡೆದಿರುವುದಾಗಿ ತಿಳಿಸಿದೆ.