ನವದೆಹಲಿ: ಕೊನೆಗೂ ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮವು “ರಾಮ್ಸರ್ ಪಟ್ಟಿ’ಗೆ ಸೇರುವಲ್ಲಿ ಯಶಸ್ವಿಯಾಗಿದೆ. ರಂಗನತಿಟ್ಟು ಸೇರಿದಂತೆ ಭಾರತದ 10 ತಾಣಗಳನ್ನು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿ ರಾಮ್ಸರ್ ಪಟ್ಟಿಗೆ ಸೇರಿಸಲಾಗಿದೆ.
ಕೇಂದ್ರ ಪರಿಸರ ಸಚಿವಾಲಯವೇ ಬುಧವಾರ ಈ ವಿಷಯವನ್ನು ಬಹಿರಂಗಪಡಿಸಿದೆ. ವಿಶೇಷವೆಂದರೆ, ಮತ್ತೆ ದೇಶದ 10 ತಾಣಗಳು ಈ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ “ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಅತಿ ಹೆಚ್ಚು ಜೌಗು ಪ್ರದೇಶಗಳಿರುವ ದೇಶ’ವೆಂಬ ಖ್ಯಾತಿಯನ್ನು ಚೀನದೊಂದಿಗೆ ಭಾರತವೂ ಹಂಚಿಕೊಂಡಂತಾಗಿದೆ. ಈವರೆಗೆ ಚೀನಾ ಮಾತ್ರ ಈ ಖ್ಯಾತಿ ಪಡೆದಿತ್ತು.
ತಮಿಳುನಾಡುನ 6 (ಕೂಂಥಂಕುಳಂ ಪಕ್ಷಿಧಾಮ, ಗಲ್ಫ್ ಆಫ್ ಮನ್ನಾರ್ ರಕ್ಷಿತಾರಣ್ಯ, ವೆಂಬನ್ನೂರ್ ಜೌಗು ಪ್ರದೇಶ, ವೆಲ್ಲೋಡ್ ಪಕ್ಷಿಧಾಮ, ವೇದಾಂತಂಗಲ್ ಪಕ್ಷಿಧಾಮ ಮತ್ತು ಉದಯಮಾರ್ತಾಂಡಪುರಂ ಪಕ್ಷಿಧಾಮ), ಗೋವಾದ ನಂದಾ ಸರೋವರ, ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ, ಮಧ್ಯಪ್ರದೇಶದ ಸಿರ್ಪುರ್ ಜೌಗು, ಒಡಿಶಾದ ಸತ್ಕೊರ್ಷಿಯಾ ಗಾರ್ಜ್ ಹೊಸದಾಗಿ ರಾಮ್ಸರ್ ಪಟ್ಟಿಗೆ ಸೇರಿದ ತಾಣಗಳು. ಈ ಮೂಲಕ ಪಟ್ಟಿಗೆ ಸೇರಿದ ದೇಶದ ಒಟ್ಟು ತಾಣಗಳ ಸಂಖ್ಯೆ 64ಕ್ಕೇರಿದಂತಾಗಿದೆ.
64 ತಾಣಗಳಿಗೆ ಈ ಸ್ಥಾನಮಾನ ಸಿಕ್ಕಿರುವುದರಿಂದ ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಅವುಗಳ ಸಂಪನ್ಮೂಲಗಳ ಸಮರ್ಥ ನಿರ್ವಹಣೆಗೆ ನೆರವಾಗಲಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ 75 ತಾಣಗಳಿಗೆ ರಾಮ್ಸರ್ ಸ್ಥಾನಮಾನ ಸಿಗಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿತ್ತು.