ಚೆನ್ನೈ: ಕೋವಿಡ್ 19 ಸೊಂಕಿಗೆ ಒಳಗಾಗಿ ಚೆನ್ನೈನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ ಇಂದು ವಿಶ್ವಾದ್ಯಂತ ಅವರ ಅಭಿಮಾನಿಗಳು ‘ಸಾಮೂಹಿಕ ಪ್ರಾರ್ಥನೆ’ ನಡೆಸಲಿದ್ದಾರೆ.
74 ವರ್ಷ ಪ್ರಾಯದ ಈ ಶ್ರೇಷ್ಠ ಗಾಯಕನ ಆರೋಗ್ಯ ಚೇತರಿಕೆಗಾಗಿ ಈ ಪ್ರಾರ್ಥನೆ ನಡೆಯಲಿದೆ. ನಿರ್ದೇಶಕ ಭರತ್ ರಾಜ್ ಅವರು ಈ ಸಾಮೂಹಿಕ ಪ್ರಾರ್ಥನೆಯ ಕರೆಯನ್ನು ನೀಡಿದ್ದಾರೆ.
ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದ ಕಾರಣದಿಂದಾಗಿ ಗಾಯಕ ಎಸ್.ಪಿ.ಬಿ ಅವರು ಆಗಸ್ಟ್ 5ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದರು.
‘ಗುರುವಾರ ಸಾಯಂಕಾಲ 6 ಗಂಟೆಗೆ ಸರಿಯಾಗಿ ಭಾರತವೂ ಸೇರಿದಂತೆ ವಿಶ್ವಾದ್ಯಂತ ಇರುವ ಎಸ್.ಪಿ.ಬಿ ಅಭಿಮಾನಿಗಳು ಅವರು ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ನಿರ್ದೇಶಕ ಭರತ್ ರಾಜ್ ತಿಳಿಸಿದ್ದಾರೆ.
Related Articles
ತೆಲುಗು ಮೆಗಾ ಸ್ಟಾರ್ ಚಿರಂಜೀವಿ, ತಲೈವಾ ರಜನಿಕಾಂತ್, ಕಮಲ್ ಹಾಸನ್, ಸಂಗೀತ ಮಾಂತ್ರಿಕ ಇಳಯರಾಜ ಸೇರಿದಂತೆ ಚಿತ್ರೋದ್ಯಮದ ಹಲವಾರು ಹಿರಿಯ ಮತ್ತು ಕಿರಿಯ ನಟರು, ತಂತ್ರಜ್ಞರು ಎಸ್.ಪಿ.ಬಿ. ಶೀಘ್ರ ಚೇತರಿಕೆಗೆ ಹಾರೈಸಿ ವಿಡಿಯೋ ಸಂದೇಶಗಳನ್ನು ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಮಹಾನ್ ಗಾಯಕ, ಸರಳ ಮತ್ತು ಸ್ನೇಹ ಜೀವಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮದೂ ಸೇರಿದಂತೆ ಅಭಿಮಾನಿಗಳೆಲ್ಲರ ಹಾರೈಕೆಯಾಗಿದೆ.