ಬೀಳಗಿ: ರೈತಾಪಿ ಜನರ ಬದುಕು ಸದಾ ಹಸಿರಾಗಬೇಕು ಎನ್ನುವುದು ಬಿಜೆಪಿ ಸರ್ಕಾರದ ಹಿತದೃಷ್ಟಿ. ಬೀಳಗಿ ಮತಕ್ಷೇತ್ರದಲ್ಲಿ ಒಂದು ಎಕರೆ ಜಮೀನು ಕೂಡಾ ನೀರಾವರಿಯಿಂದ ವಂಚಿತಗೊಳ್ಳದಂತೆ ನೋಡಿಕೊಂಡು ಸಂಪೂರ್ಣ ನೀರಾವರಿಗೆ ಒಳಪಡಿಸಲಾಗುವುದು. ರೈತರಿಗೆ ಬೇಕಾಗಿರುವ ನೀರಾವರಿ ವ್ಯವಸ್ಥೆ, ಸಮರ್ಪಕ ವಿದ್ಯುತ್, ಸೂಕ್ತ ಬೆಲೆಯಿಂದ ಅವರ ಬಾಳು ಸಮೃದ್ಧವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ|ಮುರುಗೇಶ ಆರ್.ನಿರಾಣಿ ಹೇಳಿದರು.
ಬೀಳಗಿ ಕ್ರಾಸ್ ಹತ್ತಿರ ತಮ್ಮ ಸ್ವಗೃಹದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ವಿಶೇಷ ಘಟಕ (ಎಸ್ ಸಿಪಿ ಮತ್ತು ಟಿಎಸ್‌ಪಿ) ಯೋಜನೆಯಲ್ಲಿ ಸುಮಾರು 55 ಫಲಾನುಭವಿಗಳ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಬಾಗಲಕೋಟೆ, ಬೀಳಗಿ, ಬದಾಮಿ ತಾಲೂಕಿನಲ್ಲಿ ಏತನೀರಾವರಿ ಯೋಜನೆಯ ಮೂಲಕ 1ಲಕ್ಷದ 25 ಸಾವಿರ ಎಕರೆ ಜಮೀನುಗಳು ಹೊಸ ನೀರಾವರಿ ಕಲ್ಪಿಸಲಾಗಿದೆ. ಅಲ್ಲದೇ ನೀರು ಹಾಯದೆ ಇರುವ ಪ್ರದೇಶ ಜಮೀನುಗಳಿಗೆ ಗಂಗಾಕಲ್ಯಾಣ ಯೋಜನೆಯ ಮೂಲಕ ರೈತರ ಬಾಳು ಸಮೃದ್ಧ ಮಾಡುವ ನಿಟ್ಟಿನಲ್ಲಿ ಮತ್ತೆ 150 ಕೊಳವೆಬಾವಿ, ಬೋರ್‌ವೆಲ್ ಒದಗಿಸಿ ನೀರಾವರಿ ಕಲ್ಪಿಸಲಾಗುವುದು. ಪ್ರತಿಯೊಬ್ಬರೂ ಯಾವುದೇ ಕೆಲಸವಿದ್ದರೂ ತಾವು ಮುಕ್ತ ಮನಸ್ಸಿನಿಂದ ಬಂದು ಪರಿಹಾರ ಪಡೆದುಕೊಳ್ಳಬೇಕು ಎಂದರು.
ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ, ಸಮುದಾಯ ಭವನ ನಿರ್ಮಾಣ, ಪ್ರತಿಯೊಂದು ಶಾಲಾ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಲೆಂದು ಡಿಜಿಟಲ್ ಸ್ಮಾಟ್ ಕ್ಲಾಸ್‌ಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬಾದಾಮಿ ಹತ್ತಿರ ವಿಮಾನ ನಿಲ್ದಾಣ ಆಗುವುದರಿಂದ ನಮ್ಮ ಜಿಲ್ಲೆಗೆ 15ಸಾವಿರ ಕೋಟಿ ಅನುದಾನ ದೊರೆಯಲಿದ್ದು, ಅದರಿಂದ 25ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಅಲ್ಲದೇ ಹಲಕುರ್ಕಿ ಹತ್ತಿರ ವಿಮಾನ ನಿಲ್ದಾಣದ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ವಿಮಾನ ನಿಲ್ದಾಣಕ್ಕೆ ಜಮೀನು ನೀಡುವ ರೈತರಿಗೆ ಪ್ರತಿ ಏಕರೆ ಜಮೀನಿಗೆ 18ಲಕ್ಷ ರೂಗಳ ಪರಿಹಾರ ನೀಡಿ ಅವರ ಕುಟುಂಬದ ಒಬ್ಬರಿಗೆ ಶಿಕ್ಷಣದ ಅನುಗುವಾಗಿ ನೌಕರಿ, ಒಂದು ಆಶ್ರಯ ಮನೆ, ಯಾರು ಜಮೀನು ಕಳೆದುಕೊಂಡು ಅವರ ಹೆಸರಿನಲ್ಲಿ ಜಮೀನು ಇಲ್ಲದಿದ್ದರೆ ಸರ್ಕಾರದಿಂದ ಒಂದು 1ಎಕರೆ ಜಮೀನು ಒದಗಿಸಿ ಅದಕ್ಕೆ ನೀರಾವರಿ ವ್ಯವಸ್ಥೆ. ಬೇರೆಡೆ ಜಮೀನು ಖರೀದಿ ಮಾಡಿದರೆ ಅವರಿಗೆ ಮುದ್ರಾಂಕ ಶಿಲ್ಕು ಉಚಿತ ಒದಗಿಸಲಾಗುವುದು ಎಂದರು.
ವಿಮಾನ ನಿಲ್ದಾಣಕ್ಕೆ ಬರಡಾದ ಭೂಮಿಯನ್ನೇ ಮಾತ್ರ ತೆಗೆದುಕೊಳ್ಳಾಗುವುದು. ಅದು ರೈತರ ಒಪ್ಪಿಗೆ ನೀಡಿದರೆ ಅಂತಹ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಬಾಗಲಕೋಟೆ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡಬೇಕು. ಬೀಳಗಿ ಮತಕ್ಷೇತ್ರ ಒಂದು ಮಾದರಿಯ ಕ್ಷೇತ್ರಕ್ಕೆ ತಮ್ಮೆಲ್ಲ ಸಹಕಾರ ಅಗತ್ಯವಾಗಲಿದೆ. ಬರುವ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಕಾರಕ್ಕೆ ತರುವಲ್ಲಿ ತಾವುಗಳು ಮುಂದಾಗಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಬಿಜೆಪಿ ಸರ್ಕಾರ ರೈತಾಪಿ ಜನರ ಮತ್ತು ಎಲ್ಲ ಸಮುದಾಯದ ಜನರ ಕಲ್ಯಾಣಕ್ಕಾಗಿ ಹತ್ತು ಹಲುವಾರು ಯೋಜನೆಗಳು ಕೈಗೊಂಡಿದೆ. ಗಂಗಾಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ಪುಣ್ಯ ಮಾಡಿದ್ದಾರೆ. ಸರ್ಕಾರ ಅವರಿಗೆ ಯಾವುದೇ ಒಂದು ಖರ್ಚಿನ ಹೊರೆಹಾಕದೆ ಉಚಿತವಾಗಿ ವಿದ್ಯುತ್ ಸಂಪರ್ಕ, ಬೋರ್‌ವೆಲ್‌ಗೆ ಬೇಕಾಗುವ ಮೋಟರ್, ಪೈಪ್, ಬೋರ್ಡ್ ಇನ್ನಿತರ ಸಾಮಗ್ರಿಗಳನ್ನು ನೀಡಿ ಅವರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುತ್ತಿದೆ. ರೈತರು ಇದರ ಲಾಭವನ್ನು ಪಡೆದು ಆರ್ಥಿಕವಾಗಿ ಮುಂದೆ ಬರಬೇಕು. ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಮೂಲಕ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಬರುವಂತೆ ತಾವೆಲ್ಲರೂ ಆಶೀರ್ವಾದ ಮಾಡಬೇಕು ಎಂದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ವಿ.ಜಿ. ರೇವಡಿಗಾರ, ಮಾಜಿ ಅಧ್ಯಕ್ಷ ಎಂ.ಎಂ. ಶಂಭೋಜಿ, ಎಪಿಎಂಸಿ ಮಾಜಿ ಸದಸ್ಯ ರಾಮಣ್ಣ ಕಾಳಪ್ಪಗೋಳ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜಗತ್ತನಾಯಕ ಕಣವಿ ಮತ್ತಿತರರು ಇದ್ದರು.