Advertisement

ನಗರದಲ್ಲೆಡೆ ವಿವೇಕ ಸ್ಮರಣೆ

06:27 AM Jan 13, 2019 | Team Udayavani |

ಬೆಂಗಳೂರು: ನಗರದೆಲ್ಲೆಡೆ ಶನಿವಾರ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆ ರಾಷ್ಟ್ರೀಯ ಯುವ ದಿನವನ್ನು ಅವರ ಆದರ್ಶ ವಿಚಾರಗಳ ಸ್ಮರಣೆಯಲ್ಲಿ ಆಚರಿಸಲಾಯಿತು. ಜತೆಗೆ ವಿವೇಕಾನಂದರ ಚಿಕಾಗೋ ಭಾಷಣಕ್ಕೂ 125 ವರ್ಷ ಸಂದಿದ್ದು, ಆ ಹಿನ್ನೆಲೆಯಲ್ಲಿ ಸಿಲಿಕಾನ್‌ಸಿಟಿಯ ಹಲವೆಡೆ ಸ್ವಾಮಿ ವಿವೇಕಾನಂದರನ್ನು ನೆನಪಿಸುವ ಹಲವು ಕಾರ್ಯಕ್ರಮಗಳು, ಮಕ್ಕಳ ಜಾಥಾ ನಡೆಯಿತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಭೂಷಣಗಳನ್ನು ತೊಟ್ಟು ಕಣ್ಮನ ಸೆಳೆದರು. 

Advertisement

ವಿದ್ಯಾಪೀಠದ ವಿವೇಕಾನಂದ ಕಲಾ ಕೇಂದ್ರ ವತಿಯಿಂದ ಬ್ಯೂಗಲ್‌ರಾಕ್‌ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೃತ್ಯಕಲಾವಿದೆ ಡಾ.ಶ್ವೇತಾ ಹರ್ಷ, ನೃತ್ಯ ರೂಪಕದ ಮೂಲಕ ಸ್ವಾಮಿ ವಿವೇಕನಂದರ ಬಾಲ್ಯ ಮತ್ತು ಬದುಕಿನ ಸಾಧನೆಗಳನ್ನು ಕಟ್ಟಿಕೊಟ್ಟರು. ಇದೇ ವೇಳೆ ಮಾಸ್ಟರ್‌ ದೈವಿಕ್‌ ವಿವೇಕಾನಂದರ ಸಿಂಹವಾಣಿ ವಾಚನ ಮಾಡಿದರು. ಮಾಜಿ ಮಹಾಪೌರ ಸತ್ಯನಾರಾಯಣ, ಬರಹಗಾರ ಡಾ. ವರದಾ ಶ್ರೀನಿವಾಸ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪದ್ಮನಾಭನಗರದ ಅಕ್ಷಯ ಸೇವೆ ಫೌಂಡೇಷನ್‌ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಶೋಭಾ ಆಂಜನಪ್ಪ ಪಾಲ್ಗೊಂಡು ಶಾಲಾ ಮಕ್ಕಳಿಗೆ ವಿವೇಕಾನಂದರ ಬದುಕು ಮತ್ತು ಜೀವನದ ಕುರಿತ ಪುಸ್ತಕಗಳನ್ನು ವಿತರಿಸಿದರು. ಬನಶಂಕರಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪದ್ಮನಾಭ ನಗರದ ಹಲವು ಬೀದಿಗಳಲ್ಲಿ ವಿವೇಕಾನಂದರ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿದರು. ಇದೇ ವೇಳೆ ಪದ್ಮನಾಭ ನಗರದ ನಾಗರಿಕರಿಗಾಗಿ ರಂಗೋಲಿ ಸ್ಪರ್ಧೆ ನಡೆಯಸಲಾಯಿತು. 

ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ ರಾಮಕೃಷ್ಣ ಮಠದ ಪ್ರವೇಶ ದ್ವಾರದಿಂದ ಹೊರಟ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.ಇದೇ ವೇಳೆ ರಾಮಕೃಷ್ಣ ಚೌಕ್‌ನಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಚಾಮರಾಜ ಪೇಟೆಯ ಸರ್ಕಾರಿ ಕೋಟೆ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕಾನಂದರು ಸಾಗಿದ ಮಾರ್ಗದಲ್ಲಿ ನಡೆಯುವಂತೆ ವಿದ್ಯಾರ್ಥಿ ಸಮೂಹಕ್ಕೆ ಮನವಿ ಮಾಡಲಾಯಿತು. ಚಾಮರಾಜನಗರದ ಉನ್ನತಿ ಹೀಲಿಂಗ್‌ ಫೌಂಡೇಶನ್‌ ವಿವೇಕಾನಂದರ ಹುಟ್ಟುಹಬ್ಬದ ಅಂಗವಾಗಿ ಭಾರತ ನಿರ್ಮಾಣ ಚಳವಳಿಗಳಿಗೆ ಚಾಲನೆ ನೀಡಲಾಯಿತು.

Advertisement

ಹಲಸೂರಿನ ರಾಮಕೃಷ್ಣ ಮಠವು ಹಲಸೂರು ಕೆರೆಯಿಂದ ಮಠದ ಆವರಣದ ವರೆಗೆ ಜಾಥಾ ಆಯೋಜಿಸಿತ್ತು. ಸ್ವಾಮಿ ವಿವೇಕಾನಂದರ ಬೃಹತ್‌ ಭಾವಚಿತ್ರದೊಂದಿಗೆ ನೂರಾರು ಮಕ್ಕಳು ಭಾಗವಹಿಸಿದ್ದರು. ಆನಂತರ ಮಠದ ಆವರಣದಲ್ಲಿನ ವಿವೇಕಾನಂದರ ಬೃಹತ್‌ ಮೂರ್ತಿಗೆ ಪುಷ್ಪಾರ್ಚನೆ ಮಕ್ಕಳಿಂದ ವೇದ ಪಠಣ ಪ್ರಾರ್ಥನೆ ನಡೆದವು.

“ನಮ್ಮ ಮಲ್ಲೇಶ್ವರ ಸಮೂಹ’, ಡಿಸ್ಕವರಿ ವಿಲೇಜ್‌ ಮತ್ತು ಅಶ್ವಥ್‌ನಾರಾಯಣ ಪ್ರತಿಷ್ಠಾನ ಸಹಯೋಗದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ಯುವ ದಿನದ ಪ್ರಯುಕ್ತ ಯೂತ್‌ ಎಡ್ಜ್ 2019 ಉಪನ್ಯಾಸಗಳು ನಡೆದವು. ವ್ಯಕ್ತಿತ್ವ ವಿಕಸನದ ಕುರಿತು ಪ್ಯಾರಾ ಅಥ್ಲೀಟ್‌ ಕೆ.ಮಾಲತಿ ಹೊಳ್ಳ, ಇಯಾನ್‌ ಫಾರಿಯಾ, ಬಿ.ಎಸ್‌.ಶಾಂತಾರಾಜು ಯುವ ಸಮೂಹಕ್ಕೆ ಮಾರ್ಗದರ್ಶನ ಮಾಡಿದರು.

ನಗರದ ಹಲವು ಶಾಲಾ ಕಾಲೇಜುಗಳಲ್ಲಿ ಪ್ರಬಂಧ ರಚನೆ, ಭಾಷಣ, ರೂಪಕ ಪ್ರದರ್ಶನ, ಚರ್ಚಾಗೋಷ್ಠಿ, ಪಾತ್ರಾಭಿನಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷ ಉಪನ್ಯಾಸಗಳು, ಯೋಗಾಸನ ಪ್ರದರ್ಶನ ಮತ್ತು ಯುವಜನೋತ್ಸವಗಳು ಸಹ ಕೆಲವು ಕಡೆ ನಡೆದವು. ಯುವಜನ ಸಂಘಗಳು ಸಂಘ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ, ಅವರ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next