Advertisement

ವ್ಯಾಪಾರೋದ್ಯಮಕ್ಕೆ ಹಣಕ್ಕಿಂತ ಬುದ್ಧಿ ಮುಖ್ಯ: ರವಿರಾಜ್‌

12:12 PM May 27, 2018 | Team Udayavani |

ದಾವಣಗೆರೆ: ವ್ಯಾಪಾರ, ಉದ್ಯಮಗಳಲ್ಲಿ ಮೇಲೆ ಬರಲು ಹಣಕ್ಕಿಂತ ಬುದ್ಧಿ ಮುಖ್ಯ ಎಂದು ಮಹಾರಾಜ ಸೋಪ್‌ ಇಂಡಸ್ಟೀಸ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಡಾ| ರವಿರಾಜ್‌ ಅಭಿಪ್ರಾಯಪಟ್ಟಿದ್ದಾರೆ. 

Advertisement

ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ತಮ್ಮ ಕಂಪನಿಯಿಂದ ಕೊಡುಗೆ ನೀಡಿದ 4 ಲಕ್ಷ ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ವ್ಯಾಪಾರ ಮಾಡಲು ಒಂದು ವೇಳೆ ಹಣ ಇಲ್ಲದಿದ್ದರೆ ನಡೆಯುತ್ತದೆ. ಆದರೆ, ಬುದ್ಧಿ ಇಲ್ಲದೆ ಯಾವುದೇ ವ್ಯವಹಾರ ಮಾಡಲಾಗುವುದಿಲ್ಲ. ವ್ಯಾಪಾರಿಗೆ ಬುದ್ಧಿ ಇದ್ದದ್ದೇ ಆದಲ್ಲಿ ಹಣ ತಾನಾಗಿಯೇ ಬರುತ್ತದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಖಾಸಗಿ ಕಾಲೇಜಿನವರಿಗೆ ಸರಿಸಾಟಿಯಾಗಿ ಹೆಸರು ಮಾಡಿದೆ. ಕಾಲೇಜಿನ ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ತಿಂಗಳಲ್ಲೇ ನಿವೃತ್ತಿ ಹೊಂದುತ್ತಿದ್ದರೂ ಲವಲವಿಕೆಯಿಂದ ಕೆಲಸ ಮಾಡುತ್ತಿರುವುದು ಅಚ್ಚರಿ ಅನ್ನಿಸುತ್ತದೆ. ಈ ಶುದ್ಧ ಕುಡಿಯುವ ನೀರಿನ ಘಟಕ ಅವರ ಸೇವಾ ಕೊನೆ ದಿನಗಳ ನೆನಪಾಗಿ ಉಳಿಯಲಿದೆ ಎಂದು ಅವರು ಹೇಳಿದರು.

ಕಷ್ಟ ಪಟ್ಟರೆ ಫಲ ಉಂಟು ಎಂಬುದು ವಿದ್ಯಾರ್ಥಿಗಳಿಗೆ ಅರ್ಥ ಆಗಬೇಕು. ನೀವು ಯಾವುದೇ ಕೆಲಸ ಮಾಡುವ ಮುನ್ನ
ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ಶಿಕ್ಷಕರು, ಪೋಷಕರು ಸದಾ ಕಾಲ ಮಾರ್ಗದರ್ಶಕಾಗಿ ನಿಮಗೆ ಇರುತ್ತಾರೆ ಎಂಬುದನ್ನು ಮರೆಯಬೇಡಿ. ನಮ್ಮ ಬುದ್ಧಿಶಕ್ತಿ ಜೊತೆಗೆ ಹಿರಿಯ ಅನುಭವ ಸಹ ಯಶಸ್ಸಿಗೆ ಸಹಕಾರಿಯಾಗಲಿದೆ. ಶಿಕ್ಷಕರು, ಪೋಷಕರು ಏನೇ ಹೇಳಿದರೂ ಅದನ್ನು ಪಾಲಿಸುವ ಪರಿಪಾಠ ಬೆಳೆಸಿಕೊಳ್ಳಿ. ನಿಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುವ ಕೆಲಸಕ್ಕೆ ಎಂದಿಗೂ ಕೈ ಹಾಕದಿರಿ ಎಂದು ಅವರು ಕಿವಿಮಾತು ಹೇಳಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಂ. ಮಲ್ಲಿಕಾರ್ಜುನ, ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವಂತಾಗಿತ್ತು. ಇದೀಗ ರವಿರಾಜ್‌ ಈ ಕೊರತೆ ನೀಗಿಸಿದ್ದಾರೆ. 4 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸುವ ಮೂಲಕ 4 ಸಾವಿರ ವಿದ್ಯಾರ್ಥಿಗಳ ನೀರಿನ ದಾಹ ತೀರಿಸಿದ್ದಾರೆ ಎಂದರು.
 
ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಎಸ್‌. ಆರ್‌. ಭಜಂತ್ರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್‌, ನಾಗರಾಜ, ಐಕ್ಯುಎಸಿ ಸಂಚಾಲಕ ಡಾ| ಆರ್‌. ತಿಪಾರೆಡ್ಡಿ, ವ್ಯವಸ್ಥಾಪಕ ವಿಭಾಗದ ಮರುಳಸಿದ್ಧಪ್ಪ, ಎನ್‌.ಆರ್‌. ರಾಜಮೋಹನ್‌ ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next