ಹೊಸದಿಲ್ಲಿ : ವಾರ್ಷಿಕ ಕಾರ್ಯನಿರ್ವಹಣೆ ವಿಶ್ಲೇಷಣೆಯ ಭಾಗವಾಗಿ ದೇಶದ ಮೂರನೇ ಬೃಹತ್ ಐಟಿ ಸಂಸ್ಥೆಯಾಗಿರುವ ವಿಪ್ರೋ ತನ್ನ ನೂರಾರು ನೌಕರರನ್ನು ಉದ್ಯೋಗದಿಂದ ಕಿತ್ತು ಹಾಕಿದೆ.
ಮೂಲಗಳ ಪ್ರಕಾರ ನಿರೀಕ್ಷಿತ ಮಟ್ಟದ ತೃಪ್ತಿಕರ ಕಾರ್ಯನಿರ್ವಹಣೆ ತೋರದ ಸುಮಾರು 600 ಮಂದಿ ನೌಕಕರನ್ನು ಉದ್ಯೋಗದಿಂದ ತೆಗೆದು ಹಾಕಿರುವುದಾಗಿ ತಿಳಿದು ಬಂದಿದೆ. ಆದರೆ ವಿಪ್ರೋದಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ 2,000 ದಾಟಲಿದೆ ಎಂದು ಊಹಿಸಲಾಗಿದೆ.
2016ರ ಡಿಸೆಂಬರ್ ಅಂತ್ಯಕ್ಕೆ ಬೆಂಗಳೂರಿನಲ್ಲಿ ನೆಲೆಗೊಂಡಿರುವ ವಿಪ್ರೋ ಐಟಿ ಕಂಪೆನಿಯಲ್ಲಿ 1.79 ಲಕ್ಷಕ್ಕೂ ಅಧಿಕ ನೌಕರರು ಇದ್ದರು.
ವಿಪ್ರೋ ಕಂಪೆನಿಯನ್ನು ಈ ಬಗ್ಗೆ ಸಂಪರ್ಕಿಸಿದಾಗ, “ಅತ್ಯಂತ ಕಠಿನ ಗುಣಮಟ್ಟದ ಕಾರ್ಯನಿರ್ವಹಣ ವಿಶ್ಲೇಷಣೆಯನ್ನು ಕಂಪೆನಿಯು ಕೈಗೊಂಡಿದ್ದು ಕಂಪೆನಿಯ ಔದ್ಯಮಿಕ ಉದ್ದೇಶಗಳಿಗೆ ಸರಿಹೊಂದುವ, ಗ್ರಾಹಕರ ಆವಶ್ಯಕತೆಗಳನ್ನು ಪೂರೈಸಬಲ್ಲ, ಸಂಸ್ಥೆಯ ವ್ಯೂಹಾತ್ಮಕ ಆದ್ಯತೆಗಳಿಗೆ ತಕ್ಕುದಾಗಿರಬಲ್ಲ ಕಾರ್ಯಪಡೆಯನ್ನು ರೂಪಿಸುವ ನಿಟ್ಟಿನಲ್ಲಿ ನೌಕರರ ಕಾರ್ಯಸಾಮರ್ಥ್ಯ, ದಕ್ಷತೆ, ನಿರ್ವಹಣಾ ಕೌಶಲ ಇತ್ಯಾದಿಗಳನ್ನು ಕಾಲಕಾಲಕ್ಕೆ ನಡೆಸುತ್ತಿದ್ದೇವೆ’ ಎಂದು ಅದು ಹೇಳಿದೆ.
ಅಂದ ಹಾಗೆ ಇದೇ ಎಪ್ರಿಲ್ 25ರಂದು ವಿಪ್ರೋ ಕಂಪೆನಿಯು ತನ್ನ ನಾಲ್ಕನೇ ತ್ತೈಮಾಸಿಕ ಹಾಗೂ ಪೂರ್ಣ ಹಣಕಾಸು ವರ್ಷದ ಆದಾಯ ಫಲಿತಾಂಶವನ್ನು ಪ್ರಕಟಿಸಲಿದೆ.
ಅಮೆರಿಕ, ಸಿಂಗಾಪುರ, ಆಸ್ಟ್ರೇಲಿಯ ಮತ್ತು ನ್ಯೂಜೀಲಂಡ್ ದೇಶಗಳು ಐಟಿ ಉದ್ಯೋಗ ವೀಸಾ ನಿಬಂಧನೆಗಳನ್ನು ಕಟ್ಟುನಿಟ್ಟುಗೊಳಿಸಿ ಸ್ವದೇಶೀಯರಿಗೇ ಮೊದಲ ಆದ್ಯತೆಯಲ್ಲಿ ಉದ್ಯೋಗ ಎಂಬ ನೀತಿ, ನಿಲುವು, ತತ್ವಕ್ಕೆ ಅಂಟಿಕೊಂಡಿರುವುದರಿಂದ ಭಾರತೀಯ ಐಟಿ ಕಂಪೆನಿಗಳಿಗೆ ತೀವ್ರವಾಗಿ ಬಿಸಿ ಮುಟ್ಟಿದೆ.