Advertisement

ಇಂದಿನಿಂದ ಸಂಸತ್‌ನ ಚಳಿಗಾಲದ ಅಧಿವೇಶನ

06:00 AM Dec 11, 2018 | Team Udayavani |

ಹೊಸದಿಲ್ಲಿ:  “”ಸಾರ್ವಜನಿಕ ಹಿತಾಸಕ್ತಿಯಿಂದ ಸರಕಾರ ಮತ್ತು ವಿಪಕ್ಷಗಳು ಪರಸ್ಪರ ಸಹಕರಿಸಿಕೊಂಡು, ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಇದು ಪ್ರತಿ ಯೊಬ್ಬರ ಜವಾಬ್ದಾರಿಯಾಗಿದೆ” ಎಂದು ರಾಜಕೀಯ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

Advertisement

ಮಂಗಳವಾರದಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸರ್ವಪಕ್ಷ ಸಭೆ ಯಲ್ಲಿ ಪ್ರಧಾನಿ ಈ ಕೋರಿಕೆ ಮುಂದಿಟ್ಟಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಧಾನಿ ಮೋದಿ, ಸರಕಾರ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಯಾವುದೇ ಚರ್ಚೆಗೂ ಸಿದ್ಧವಿದೆ ಎನ್ನುವ ಸಂದೇಶವನ್ನು ವಿಪಕ್ಷಗಳ ನಾಯಕರಿಗೆ ರವಾನಿಸಿದ್ದಾರೆ. ಅಲ್ಲದೆ, ವಿಪಕ್ಷ ಸಲಹೆಗಳನ್ನೂ ಸ್ವಾಗತಿಸುವುದಾಗಿಯೂ ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ನಾಯಕ ಗುಲಾಂ ನಬಿ ಅಜಾದ್‌ ಅವರು, ನಾವು ರಫೇಲ್‌ ಡೀಲ್‌, ಆರ್‌ಬಿಐ ಸ್ವಾಯತ್ತತೆ, ತನಿಖಾ ಸಂಸ್ಥೆಗಳ ದುರ್ಬಳಕೆ ಸೇರಿದಂತೆ ಹಲವು ವಿಚಾರಗಳನ್ನೆತ್ತಿಕೊಂಡು ಸರಕಾರವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ. ರಫೇಲ್‌ ಡೀಲ್‌ ಕುರಿತು ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಆಗ್ರಹಿಸಲಿದ್ದೇವೆ ಎಂದೂ ಹೇಳಿದ್ದಾರೆ.

ಇವಿಎಂ ಬಗ್ಗೆ ಪ್ರಸ್ತಾಪಿಸಿದ ಆಪ್‌: ಇವಿಎಂ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಆಮ್‌ ಆದ್ಮಿ ಪಕ್ಷದ ನಾಯಕರು, ಚುನಾವಣೆಗಳಲ್ಲಿ ಮತ ಪತ್ರವನ್ನೇ ಬಳಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಅವಕಾಶವನ್ನೂ ಕೋರಿದ್ದಾರೆ.

ಕಲಾಪ ನಡೆಯಲು ಬಿಡೆವು: ಇನ್ನೊಂದೆಡೆ, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವಿಧೇಯಕವನ್ನು ಈ ಅಧಿವೇಶನದಲ್ಲೇ ಮಂಡಿಸಬೇಕು ಎಂದು ಆಗ್ರಹಿಸಿರುವ ಶಿವಸೇನೆ, ಮಸೂದೆ ಮಂಡನೆ ಆಗುವವರೆಗೂ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next