Advertisement

ಮ್ಯಾಂಡಸ್‌ ಚಂಡಮಾರುತದ ಪ್ರಭಾವ: ಕರಾವಳಿಯಾದ್ಯಂತ ಮಳೆ, ಚಳಿ ವಾತಾವರಣ

12:04 AM Dec 13, 2022 | Team Udayavani |

ಮಂಗಳೂರು : ಮ್ಯಾಂಡಸ್‌ ಚಂಡಮಾರುತದ ಪ್ರಭಾವ ಕರಾವಳಿಯಲ್ಲಿ ಮುಂದುವರಿದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಸೋಮವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಹಗಲು ವೇಳೆ, ಸಂಜೆ ಬಳಿಕ ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹನಿಮಳೆ, ಸಾಧಾರಣ ಮಳೆಯಾಗಿದೆ.

Advertisement

ಮಂಗಳೂರು ನಗರ, ಮೂಲ್ಕಿ, ಕಿನ್ನಿಗೋಳಿ, ಬಜಪೆ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಕೂಡ ಮಳೆ ಸುರಿದು ವಾತಾವರಣ ತಂಪಾಗಿದೆ.

ಇನ್ನೂ ಎರಡು ದಿನ ಮಳೆ
ಇನ್ನೂ ಎರಡು ದಿನ ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮಂಗಳವಾರ ಕರಾವಳಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕಡಲ ತೀರದಲ್ಲಿ ಗಂಟೆಗೆ 40-45 ಕಿ.ಮೀ. ನಿಂದ 55 ಕಿ.ಮೀ. ವರೆಗೆ ವೇಗವಾಗಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾಪಮಾನ 6 ಡಿಗ್ರಿ ಸೆ. ಕುಸಿತ
ಮುಂಗಾರು ರೀತಿಯಲ್ಲಿ ವಾತಾವಣ ಬದಲಾಗಿ ರುವುದರಿಂದ ಥಂಡಿ ಚಳಿಯ ಅನುಭವವಾಗಿದೆ. ದಿನದ ತಾಪಮಾನವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ಸರಾಸರಿಗಿಂತ 6 ಡಿಗ್ರಿಯಷ್ಟು ಕಡಿಮೆಯಾಗಿ, 27.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಕನಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್‌ ಇತ್ತು.

ಉಡುಪಿ ಜಿಲ್ಲೆ: ಉತ್ತಮ ಮಳೆ
ಉಡುಪಿ: ಜಿಲ್ಲೆಯಲ್ಲಿ ಮಳೆ ಹಾಗೂ ಚಳಿ ವಾತಾವರಣ ಮುಂದುವರಿದಿದ್ದು, ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣದ ನಡುವೆ ಹಲವೆಡೆ ಸಾಧಾರಣ ಮಳೆ, ರಾತ್ರಿ ಉತ್ತಮ ಮಳೆಯಾಗಿದೆ.

Advertisement

ಕುಂದಾಪುರ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲದ ರೀತಿ ಉತ್ತಮ ಮಳೆಯಾಗಿದೆ. ಬಸ್ರೂರು, ಬೀಜಾಡಿ, ಗೋಪಾಡಿ, ಸಿದ್ಧಾಪುರ, ವಂಡ್ಸೆ, ಕೊಲ್ಲೂರು, ಮಾರಣಕಟ್ಟೆ, ಬೈಂದೂರು, ಉಪ್ಪುಂದ, ಹೆಬ್ರಿ, ಕಾರ್ಕಳ ಪರಿಸರದಲ್ಲಿಯೂ ಉತ್ತಮ ಮಳೆಯಾಗಿದೆ.

ರವಿವಾರ ತಡರಾತ್ರಿ ಉಡುಪಿ ಪ್ರದೇಶವೂ ಸೇರಿ ಹೆಬ್ರಿ, ಕುಂದಾಪುರ, ಬೈಂದೂರು, ಬ್ರಹ್ಮಾವರ ಭಾಗದಲ್ಲಿ ಬಿಟ್ಟುಬಿಟ್ಟು ಕೆಲಕಾಲ ಮಳೆಯಾಗಿದೆ.
ಉಡುಪಿ 6.8 ಮಿ. ಮೀ. , ಬ್ರಹ್ಮಾವರ 11.0 , ಕಾಪು 3.4 , ಕುಂದಾಪುರ 12.3, ಬೈಂದೂರು 7.2. ಕಾರ್ಕಳ 8.0, ಹೆಬ್ರಿ 12.1 ಮಿ. ಮೀ ಮಳೆಯಾಗಿದೆ.

ಕೃಷಿಕರಲ್ಲಿ ಆತಂಕ
ಎರಡು-ಮೂರು ದಿನಗಳಿಂದ ಮಳೆಯಾಗುತ್ತಿರುವು ದರಿಂದ ಭತ್ತ ಹೊರತುಪಡಿಸಿ ಇತರ ಕೃಷಿಕರಲ್ಲಿ ಆತಂಕ ಶುರುವಾಗಿದೆ. ಉದ್ದು, ಮಾವು, ಗೇರು, ನೆಲಗಡಲೆ, ಹೆಮ್ಮಾಡಿ ಸೇವಂತಿಗೆ ಮೇಲೆ ಮಳೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೃಷಿಕರು ತಿಳಿಸಿದ್ದಾರೆ.

ಬೆಳ್ತಂಗಡಿ: ದಿನಪೂರ್ತಿ ಸುರಿದ ಮಳೆ
ಬೆಳ್ತಂಗಡಿ: ಹವಾಮಾನ ವೈಪರೀತ್ಯದಿಂದಾಗಿ ತಾಲೂಕಿ ನಲ್ಲಿ ಸೋಮವಾರವೂ ದಿನವಿಡೀ ಮಳೆ ಸುರಿದಿದೆ. ಶನಿವಾರ ಸಂಜೆ ದಿಡುಪೆ ಸುತ್ತಮುತ್ತ ಭಾರೀ ಮಳೆಯಾಗಿದ್ದು ಇತರೆಡೆ ರಾತ್ರಿ ಸುಮಾರು 9 ಗಂಟೆ ವರೆಗೆ ಮಳೆ ಸುರಿದಿದೆ.

ಮುಂಡಾಜೆಯ ಅರಳಿಕಟ್ಟೆಯಲ್ಲಿ ವಿದ್ಯುತ್‌ನ ಎಚ್‌.ಟಿ. ಲೈನ್‌ ಮೇಲೆ ಮರವೊಂದು ಉರುಳಿ ಬಿದ್ದು ಕಂಬ ತುಂಡಾಗಿ ಬಿದ್ದಿದೆ. ಹಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next