Advertisement

ಚಳಿಗಾಲ ಆರೋಗ್ಯ ಕಾಳಜಿ ಅಗತ್ಯ

12:22 AM Nov 26, 2019 | Sriram |

ಈಗಾಗಲೇ ಚಳಿಗಾಲ ಆರಂಭವಾಗಿದ್ದು ಈ ಕಾಲದಲ್ಲಿ ಒಂದಿಷ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.ಚಳಿಗಾಲದಲ್ಲಿ ತಂಪಿನ ವಾತಾವರಣದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಬಹುದು. ಈ ಕಾರಣಕ್ಕೆ ದೇಹಾರೋಗ್ಯ ಕಾಪಾಡಿಕೊಳ್ಳುವುದು ಆವಶ್ಯಕ. ಹೀಗಾಗಿ ಚಳಿಗಾಲದಲ್ಲಿ ವಹಿಸಬೇಕಾದ ಕ್ರಮಗಳು ಮತ್ತು ಜಾಗೃತಿ ಬಗ್ಗೆ ಇಲ್ಲಿ ತಿಳಿಯಬಹುದಾಗಿದೆ.

Advertisement

ಇದು ಚಳಿಗಾಲದ ಸಮಯ. ಯಾವುದೇ ಕಾಲದಲ್ಲಿಯೂ ಆರೋಗ್ಯ ಕಾಳಜಿಗೆ ಗಮನ ಕೊಡಬೇಕು. ಆದರೆ, ಚಳಿಗಾಲದಲ್ಲಂತೂ ಈ ಕಾಳಜಿ ತುಸು ಜಾಸ್ತಿಯೇ ಇರಬೇಕು. ಚಳಿಗಾಲದ ಕೆಲವು ಸಮಸ್ಯೆಗಳು ಕೇವಲ ಆರೋಗ್ಯ ಮಾತ್ರವಷ್ಟೇ ಅಲ್ಲ, ಸೌಂದರ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ನಡುಗಿಸುವ ಚಳಿಯಿಂದಾಗಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ಹಾಗಾಗಿ ದೇಹವನ್ನು ಆದಷ್ಟು ಉಷ್ಣತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದುದು ಅವಶ್ಯ. ಶೀತ, ಕೆಮ್ಮು, ಜ್ವರ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ. ದೇಹ ಹೆಚ್ಚು ತಂಪಾಗಿರುವುದರಿಂದ ಶೀತ ಆಗಾಗ ಕಾಡುವ ಸಮಸ್ಯೆಯಾಗಿ ತಲೆದೋರುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಉಸಿರಾಟ ಸಂಬಂಧಿ ತೊಂದರೆಗಳು ಹೆಚ್ಚಾಗುವುದು ಚಳಿಗಾಲದಲ್ಲಿಯೇ. ಮಂಡಿ ನೋವು, ಪಾದ ನೋವು, ಚರ್ಮ ಶುಷ್ಕವಾಗುವುದು, ಚರ್ಮ ಸುಕ್ಕುಗಟ್ಟಿದಂತಾಗುವುದು, ಮುಖದ ಚರ್ಮ ಹೊಳಪು ಕಳೆದುಕೊಳ್ಳುವುದು ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ವಿವಿಧ ತೊಂದರೆಗಳು ಚಳಿಗಾಲದಲ್ಲಿ ಬಾಧಿಸುತ್ತವೆ. ಕೈ ಕಾಲಿನ ಚರ್ಮ ಮೂಲರೂಪ ಕಳೆದುಕೊಂಡು ಅಸಹ್ಯವಾಗಿ ಕಾಣಿಸಿದಂತಾಗುತ್ತದೆ. ಹೃದಯಾಘಾತದ ಪ್ರಮಾಣವೂ ಚಳಿಗಾಲದಲ್ಲಿ ಹೆಚ್ಚು . ಹಾಗಾಗಿ ಹೃದಯ ಸಂಬಂಧಿ ಕಾಯಿಲೆಯುಳ್ಳವರು ಚಳಿಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದಿರಬೇಕು ಎನ್ನುವುದು ವೈದ್ಯರ ಅಭಿಪ್ರಾಯ.

ಚಳಿಗಾಲದಲ್ಲೇನು ಮಾಡಬೇಕು?
ಮುಖ್ಯವಾಗಿ ಸಾಧ್ಯವಾದಷ್ಟು ಬೆಚ್ಚಗಿರುವ ಬಟ್ಟೆಗಳನ್ನೇ ಧರಿಸಿ ಓಡಾಡಬೇಕು. ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ಸಂಪೂರ್ಣ ದೇಹ ಮುಚ್ಚುವಂತಹ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಜ್ವರ, ಶೀತ, ನೆಗಡಿ, ಕೆಮ್ಮು ಮುಂತಾದ ಅತೀ ಸಾಮಾನ್ಯವಾಗಿ ಕಾಡುವ ಕಾಯಿಲೆಗಳೆಂದು ನಿರ್ಲಕ್ಷé ಮಾಡದೆ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆದಷ್ಟು ಬಿಸಿ ನೀರನ್ನೇ ಕುಡಿಯಬೇಕು. ತಣ್ಣೀರು, ತಂಪು ಪಾನೀಯ, ಐಸ್‌ಕ್ರೀಂ, ಫಾಸ್ಟ್‌ಫುಡ್‌ ತಿನ್ನುವುದನ್ನು ಕಡಿಮೆ ಮಾಡಬೇಕು. ಬಿಸಿ ಊಟ, ತಿಂಡಿ, ಬಿಸಿ ಪಾನೀಯ ಸೇವನೆಗೆ ಒತ್ತು ನೀಡಬೇಕು. ದಾಳಿಂಬೆ, ಕಿತ್ತಳೆಯಂತಹ ಸೀಸನಲ್‌ ಹಣ್ಣುಗಳನ್ನು ತಿನ್ನುವುದರಿಂದ ರಕ್ತಕಣ ಹೆಚ್ಚಾಗಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಡ್ರೈ ಸ್ಕಿನ್‌, ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ತೆಂಗಿನೆಣ್ಣೆ, ಇತರ ಸ್ಕಿನ್‌ ಕ್ರೀಂಗಳನ್ನು ಹಚ್ಚಬೇಕು.

ಚಳಿಗಾಲದಲ್ಲಿ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವೃದ್ಧರಿಗೆ ಮತ್ತು ಮಕ್ಕಳಿಗೆ ಚಳಿಗಾಲದ ಸಮಸ್ಯೆಗಳು ಬೇಗ ಕಾಣಿಸಿಕೊಳ್ಳುವುದರಿಂದ ಆದಷ್ಟು ಅವರ ಶರೀರವನ್ನು ಬೆಚ್ಚಗಿಡುವಂತೆ ನೋಡಿಕೊಳ್ಳಬೇಕು. ತಂಪು ಪಾನೀಯಗಳನ್ನು ನೀಡಲೇಬಾರದು. ಯಾವುದೇ ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ತತ್‌ಕ್ಷಣವೇ ವೈದ್ಯರಲ್ಲಿಗೆ ಕರೆದೊಯ್ಯಬೇಕು.

Advertisement

ತ್ವಚೆಗಿರಲಿ ಗಮನ
ಮಹಿಳೆಯರು ತಮ್ಮ ಸೌಂದರ್ಯಕ್ಕೆ ಹೆಚ್ಚು ಗಮನ ನೀಡುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಡ್ರೈ ಸ್ಕಿನ್‌ ಸಮಸ್ಯೆ ಕಾಡಿದರೆ ಅಯ್ಯೋ ಎನಿಸದೆ ಇರದು. ತ್ವಚೆಯ ಆರೈಕೆಯಿಂದ ಇದನ್ನು ನಿವಾರಣೆ ಮಾಡಲು ಸಾಧ್ಯವಿದೆ. ಕೊಕೊವಾ ಬೆಣ್ಣೆಯು ತ್ವಚೆಗೆ ಅಗತ್ಯವಾದ ಸಂರಕ್ಷಣೆ ಒದಗಿಸುತ್ತದೆ. ಅತ್ಯುತ್ತಮವಾದ ಮೊಶ್ಚರೈಸರ್‌ ಕೂಡ ಆಗಿದ್ದು, ತ್ವಚೆಯ ಸೌಂದರ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಪ್ರತಿದಿನ ನಿಮ್ಮ ತ್ವಚೆಗೆ ತೆಂಗಿನೆಣ್ಣೆ ಅಥವಾ ಇತರ ಮೊಯಿಶ್ಚರೈಸ್‌ ಕ್ರೀಂಗಳನ್ನು ಹಚ್ಚುತ್ತಿರಬೇಕು. ಬಿಸಿ ಮಾಡಿದ ಎಳ್ಳೆಣ್ಣೆಯನ್ನೂ ಹಚ್ಚಬಹುದು. ಪಾದದ ಹಿಮ್ಮಡಿ ಒಡೆತ, ನೋವು ಕೂಡ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದ್ದು, ಇದು ಕಡಿಮೆಯಾಗಲು ಉಗುರು ಬೆಚ್ಚಗಿನ ನೀರಲ್ಲಿ ಪಾದವನ್ನು ಚೆನ್ನಾಗಿ ತೊಳೆದು ಒರೆಸಿ ಎಣ್ಣೆ, ಹಾಲಿನ ಕೆನೆ ಅಥವಾ ಲೋಳೆಸರ ಹಚ್ಚಿ ಮಲಗಬೇಕು. ತುಟಿ ಒಡೆತಕ್ಕೆ ಬೆಣ್ಣೆ, ತುಪ್ಪ, ಎಣ್ಣೆ ಅಥವಾ ಹಾಲಿನ ಕೆನೆಯನ್ನು ಹಚ್ಚಬಹುದು.

ಹೆಚ್ಚಿನ ನೀರು ಸೇವಿಸಿ
ಚಳಿಗಾಲದಲ್ಲಿ ಡ್ರೈಸ್ಕಿನ್‌ ಸಮಸ್ಯೆ, ಕಾಲಿನ ಪಾದಗಳ ಒಡೆತ ಸಾಮಾನ್ಯ. ಸ್ನಾನದ ಅನಂತರ ಇಡೀ ದೇಹಕ್ಕೆ ಮೊಶ್ಚರೈಸರ್‌ ಕ್ರೀಂ ಹಚ್ಚಿ ಮಲಗಬೇಕು. ಬಿಸಿಲಿಗೆ ಹೋಗುವಾಗ ಸನ್‌ಸ್ಕೀನ್‌ ಹಚ್ಚಬೇಕು. ಪ್ರತಿದಿನ ಕನಿಷ್ಠ 2-3 ಲೀಟರ್‌ ನೀರು ಕುಡಿಯಬೇಕು. ಹಣ್ಣು ಹಂಪಲು, ತರಕಾರಿ ಹೆಚ್ಚು ಸೇವನೆ ಮಾಡಬೇಕು. ಚಳಿಗಾಲದಲ್ಲಿ ಒಟ್ಟು ದೇಹಾರೋಗ್ಯದ ರಕ್ಷಣೆಗೆ ಆದ್ಯ ಗಮನಹರಿಸುತ್ತಿರಬೇಕು.
– ಡಾ| ಅನುಷಾ ಪೈ
ವೈದ್ಯರು

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next