ಹುಬ್ಬಳ್ಳಿ: ಚಿಕನ್ ದರ ಒಮ್ಮಿಲೇ ಹೆಚ್ಚಳವಾಗಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಸುಮಾರು 150 ರೂ. ಪ್ರತಿ ಕೆಜಿಯಂತೆ ಬಿಕರಿಯಾಗುತ್ತಿದೆ. ಚಳಿಯಂತೆ ಚಿಕನ್ ದರವೂ ಹೆಚ್ಚಾಗಿರುವುದು ಚಿಕನ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.
ಚಿಕನ್ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಏಕಾಏಕಿ ಹೆಚ್ಚಳವಾಗಿದ್ದರೂ ಪೌಲ್ಟಿ ಉದ್ಯಮಿಗಳಿಗೆ ಇದರಿಂದ ಲಾಭ ಸಿಗುತ್ತಿಲ್ಲ. ಕಳೆದ 4 ವರ್ಷಗಳಿಂದ ಬರದಿಂದ ಕೋಳಿ ಆಹಾರ ದರ ಹೆಚ್ಚಾಗಿತ್ತು, ಆದರೆ ಈ ವರ್ಷ ಅತಿವೃಷ್ಟಿಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೆಕ್ಕೆಜೋಳ ಮಾರುಕಟ್ಟೆಗೆ ಬಾರದ್ದರಿಂದ ಕೋಳಿ ಆಹಾರ ದರದಲ್ಲಿ ಹೆಚ್ಚಳವಾಗಿದ್ದರಿಂದ ಸದ್ಯ ರಿಟೇಲ್ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದರೂ ಪೌಲ್ಟಿ ಉದ್ಯಮ ಅವಲಂಬಿಸಿದವರು ನಷ್ಟದಿಂದ ಹೊರ ಬರಲು ಒದ್ದಾಡುತ್ತಿದ್ದಾರೆ.
ಕೋಳಿ ಆಹಾರದಲ್ಲಿ ಶೇ.50 ಬಳಕೆಯಾಗುವುದು ಗೋವಿನಜೋಳ. ಇದರಿಂದ ಸಹಜವಾಗಿಯೇ ಕೋಳಿಗಳ ಆಹಾರ ಗೋವಿನಜೋಳದ ದರ ಅವಲಂಬಿಸಿದೆ. ಗೋವಿನಜೋಳದ ದರ ಕಡಿಮೆಯಾಗುತ್ತಿಲ್ಲ. ಇದರಿಂದ ಪೌಲ್ಟಿ ಉದ್ಯಮಿಗಳು ಗೋವಿನಜೋಳ ಸಂಗ್ರಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗೋವಿನಜೋಳದ ಬೆಲೆ ಕ್ವಿಂಟಲ್‌ಗೆ 2500 ರೂ.ವರೆಗೂ ಹೆಚ್ಚಾಗಿತ್ತು. ಸದ್ಯ 1700-1800ರೂ. ಪ್ರತಿ ಕ್ವಿಂಟಲ್ ದರವಿದೆ. ಅಲ್ಲದೇ ರಾಜ್ಯ ಸರಕಾರ ಪ್ರತಿ ಕ್ವಿಂಟಲ್‌ಗೆ 1900 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ ಅದಕ್ಕಿಂತ ಕಡಿಮೆದರದಲ್ಲಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದು ಕುಕ್ಕುಟೋದ್ಯಮಿಗಳಿಗೆ ಸಮಸ್ಯೆ ತಂದೊಡ್ಡಿದೆ. ಸದ್ಯ ಬ್ರಾಯ್ಲರ್ ಚಿಕನ್ ಹೋಲ್‌ಸೇಲ್‌ನಲ್ಲಿ 70ರೂ. ಪ್ರತಿ ಕೆಜಿಯಂತೆ ಬಿಕರಿಯಾಗುತ್ತಿದೆ. ಆದರೆ ಹುಬ್ಬಳ್ಳಿ ರಿಟೇಲ್ ಮಾರುಕಟ್ಟೆಯಲ್ಲಿ 140ರಿಂದ 150 ಪ್ರತಿ ಕೆ.ಜಿ.ವರೆಗೆ ಮಾರಾಟವಾಗುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಚಿಕನ್‌ಹಾಗೂ ಮೊಟ್ಟೆಗಳ ಬೇಡಿಕೆ ಹೆಚ್ಚಾಗುತ್ತದೆ.
ಮೊಟ್ಟೆಗಳ ಉತ್ಪಾದನೆ ಕಡಿಮೆಯಾಗುತ್ತದೆ ಇದರಿಂದ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ದರವೂ ಹೆಚ್ಚಳವಾಗುತ್ತದೆ. ಚಿಕನ್ ಹಾಗೂ ಮೊಟ್ಟೆಯ ದರ ಪ್ರತಿದಿನದ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದರೆ ಚಳಿಗಾಲ ಬರುತ್ತಿದ್ದಂತೆಯೇ ಒಮ್ಮಿಲೇ ಚಿಕನ್ ದರದಲ್ಲಿ ಹೆಚ್ಚಳ ಕಂಡುಬರುತ್ತದೆ. ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾಗುವುದೇ ಇದಕ್ಕೆ ಕಾರಣವಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಹೆಚ್ಚಾಗಿ ಹೊಸಪೇಟೆ, ಬಳ್ಳಾರಿ, ಕೊಪ್ಪಳ ಕಡೆಯಿಂದ ಮೊಟ್ಟೆಗಳು ಬರುತ್ತವೆ.
ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯ ಫಾರ್ಮ್ಗಳು ಆರಂಭಗೊಂಡಿರುವುದರಿಂದ ಇಲ್ಲಿ ಕೂಡ ಉತ್ಪಾದನೆ ಹೆಚ್ಚಾಗುತ್ತಿದೆ. ವೆಂಕಟೇಶ್ವರ ಹ್ಯಾಚರಿಸ್ (ವೆಂಕಿಸ್) ಹಾಗೂ ಸುಗುಣ ಹ್ಯಾಚರೀಸ್ ಮೊದಲಾದ ಸಂಸ್ಥೆಗಳು ಕೂಡ ಗುತ್ತಿಗೆ ಪೌಲ್ಟಿ ಮಾಡುತ್ತಿರುವುದರಿಂದ ಅನೇಕ ಕೃಷಿಕರು ಕೋಳಿ ಬೆಳೆದು ಕಂಪನಿಗಳಿಗೆ ಕೊಡುತ್ತಿದ್ದಾರೆ. ಅಲ್ಲದೇ ದೇಶಿ ಕೋಳಿಗಳ ಫಾರ್ಮ್ಗಳು ಕೂಡ ಹೆಚ್ಚಾಗುತ್ತಿವೆ. ಕಡಕನಾಥ ಎಂಬ ದೇಶಿ ತಳಿ ಕಪ್ಪು ಕೋಳಿ ಉತ್ಪಾದಿಸುವಲ್ಲಿಯೂ ಕೆಲ ಕೆಲ ರೈತರು ಮುಂದಾಗಿದ್ದಾರೆ. ಆದರೆ ಬ್ರಾಯ್ಲರ್ ಉದ್ಯಮ ಅಗಾಧವಾಗಿ ಪಸರಿಸಿದೆ. ಚಿಕನ್ ಮಾತ್ರವಲ್ಲ ಮೊಟ್ಟೆಯ ದರದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಪ್ರತಿ ನೂರು ಮೊಟ್ಟೆಗಳಿಗೆಅಂದಾಜು 100ರೂ. ಹೆಚ್ಚಳವಾಗಿದೆ.
ಹುಬ್ಬಳ್ಳಿ ರಿಟೇಲ್ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಹೋಲ್‌ಸೇಲ್‌ನಲ್ಲಿ 100 ಮೊಟ್ಟೆಗಳ ಬೆಲೆ 418ರೂ.ಗಳಿಗೆ ಏರಿಕೆಯಾಗಿದೆ. ಕಳೆದ 4 ದಿನಗಳಹಿಂದೆ ಏರಿಕೆಯಾಗಿದ್ದು, ನವಂಬರ್ 24ರವರೆಗೂ ಮೊಟ್ಟೆಯ ದರ 100 ಮೊಟ್ಟೆಗಳಿಗೆ 380 ರೂ. ಇತ್ತು. ರಿಟೇಲ್ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 5 ರೂ. ಗಳಿಂದ 6 ರೂ.ವರೆಗೆ ಮಾರಾಟವಾಗುತ್ತಿದೆ. ಚಳಿಗಾಲದ ಲಾಭ ಪಡೆಯಲು ಚಿಕನ್ ಹಾಗೂ ಮೊಟ್ಟೆ ರಿಟೇಲ್ ವ್ಯಾಪಾರಿಗಳು ಸಜ್ಜಾಗಿದ್ದಾರೆ. ಗ್ರಾಹಕರು ಮಾತ್ರ ಚಳಿಗಾಲ ಮುಗಿಯುವವರೆಗೂ ಹೆಚ್ಚು ದರ ತೆತ್ತು ಚಿಕನ್, ಮೊಟ್ಟೆ ಖರೀದಿಸಬೇಕಾಗಿದೆ.
-ವಿಶ್ವನಾಥ ಕೋಟಿ