ಬೆಳಗಾವಿ: ಹೊಸ ಪಿಂಚಣಿ ಯೋಜನೆಯನ್ನು ಎರಡು ತಿಂಗಳಲ್ಲಿ ರದ್ದು ಪಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸುವರ್ಣ ವಿಧಾನ ಸೌಧದೆದುರು ರಾಜ್ಯ ಸರಕಾರಿ ನೌಕರರು ನಡೆಸುತ್ತಿದ್ದ ಬೃಹತ್ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಸುವರ್ಣಸೌಧದ ಎದುರಿನ ಕೊಂಡಸಕೊಪ್ಪ ಗ್ರಾಮದ ವಿಶಾಲ ಮೈದಾನದಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ನೌಕರರು, ಅಹೋರಾತ್ರಿ ಧರಣಿ ನಡೆಸಲು ಉದ್ದೇಶಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿಯೊಂ ದಿಗೆ ಮಾತುಕತೆಗೆ ಬರುವಂತೆ ಮುಖಂಡರಿಗೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಚಿವರು ಹಾಗೂ ಪ್ರತಿ ಭಟ ನಾ ಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳಕ್ಕೆ ಸಚಿವರಾದ ಬಂಡೆಪ್ಪ ಕಾಶೆಂಪೂರ, ನಾಡಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಗೋವಿಂದ ಕಾರಜೋಳ, ಆಯನೂರು ಮಂಜುನಾಥ, ವಿರೂಪಾಕ್ಷಪ್ಪ, ಎನ್.ಎಚ್.ಕೋನರೆಡ್ಡಿ, ಶ್ರೀಕಂಠೆಗೌಡ, ಬೋಜೇಗೌಡ ಸೇರಿದಂತೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ 12ಕ್ಕೂ ಹೆಚ್ಚು ಶಾಸಕರು ಬಂದು ಪ್ರತಿಭಟನಾಕಾರರ ಮನವೊಲಿಸಿದರೂ ನೌಕರರು ಒಪ್ಪ ಲಿಲ್ಲ. ಮುಖ್ಯಮಂತ್ರಿಗಳೇ ಇಲ್ಲಿ ಬರಬೇಕು ಎಂದು ಪಟ್ಟು ಹಿಡಿದರು.
ಆಗ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ, ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ದೂರದಿಂದ ಬಂದಿರುವ ನಿಮಗೆ ಗೌರವ ಕೊಟ್ಟು ಬಂದಿದ್ದೇನೆ. ಸಾಧಕ-ಬಾಧಕ ಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮುಖಂಡರು ಮುಖ್ಯಮಂತ್ರಿಯವರನ್ನು ಭೇಟಿಯಾಗಲಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾ ಕಾರರು ಕೂಗಾಟ ಆರಂಭಿಸಿದರು. ಆಗ ತಾಳ್ಮೆ ಕಳೆದುಕೊಂಡ ಸಚಿವರು, ಏನಾದರೂ ಮಾಡಿಕೊಳ್ಳಿ. ನಾನು ಇಲ್ಲಿ ಬಂದಿದ್ದೇ ತಪ್ಪಾಯ್ತು ಕ್ಷಮಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆದರು. ನಂತರ ಮಾತುಕತೆಗೆ ಒಪ್ಪಿದ ಮುಖಂಡರು,
ಮುಖ್ಯಮಂತ್ರಿಯವರ ಭೇಟಿಗೆ ತೆರಳಿದರು.ನಂತರ ಬಂದ ಯಡಿಯೂರಪ್ಪ, ಎನ್‌ಪಿಎಸ್ ರದ್ದುಪಡಿಸಲು ಮುಖ್ಯಮಂತ್ರಿಯ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದರು.