“ಕನ್ನಡಿಗರು ನನ್ನ ಮಗಳ ಅಭಿನಯ ಮೆಚ್ಚಿಕೊಂಡು ಪ್ರೀತಿಯಿಂದ ಅವಳನ್ನು ಬರಮಾಡಿಕೊಂಡಿದ್ದಾರೆ. ಇದಕ್ಕಿಂತ ಖುಷಿ ಬೇರೊಂದಿಲ್ಲ…’ ಹೀಗೆ ಹೇಳಿ ಹಾಗೊಂದು ನಗೆ ಬೀರಿದರು ಅರ್ಜುನ್ ಸರ್ಜಾ. ಅವರು ಹೀಗೆ ಹೇಳಿಕೊಂಡಿದ್ದು, ಪುತ್ರಿ ಐಶ್ವರ್ಯ ಕುರಿತು. “ಪ್ರೇಮ ಬರಹ’ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡ ಐಶ್ವರ್ಯ ಅವರ ನಟನೆಯನ್ನು ಜನ ಒಪ್ಪಿಕೊಂಡಿದ್ದಾರೆ.
ಇದು ಒಬ್ಬ ತಂದೆಯಾಗಿ ನನಗೆ ಹೆಮ್ಮೆ ಎನಿಸಿದೆ’ ಅಂತ ಹೇಳುತ್ತಾ ಹೋದರು ಅರ್ಜುನ್ ಸರ್ಜಾ. “ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ರಾಜ್ಯದ ಎಲ್ಲಾ ಭಾಗದಲ್ಲೂ ಉತ್ತಮ ಪ್ರದರ್ಶನ ಕಾಣುವ ಮೂಲಕ ಗೆಲುವಿನ ನಗೆ ಬೀರುವಂತೆ ಮಾಡಿದೆ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ ಒಂದುವರೆ ವರ್ಷದಿಂದಲೂ ಚಿತ್ರಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಅಲೆದಾಡಿದ್ದೇವೆ.
ಇನ್ನು, ಚಿತ್ರದಲ್ಲಿ ಒಳ್ಳೆಯ ಅಂಶ ಇದ್ದುದ್ದಕ್ಕೆ ಜನ ಒಪ್ಪಿಕೊಂಡಿದ್ದಾರೆ. ನನ್ನ ಜರ್ನಿಯಲ್ಲಿ ಛಾಯಾಗ್ರಾಹಕ ವೇಣುಗೋಪಾಲ್, ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್, ಸಾಧು ಕೋಕಿಲ ಎಲ್ಲರೂ ಸಾಥ್ ಕೊಟ್ಟಿದ್ದರಿಂದ ಒಂದು ಪರಿಪೂರ್ಣ ಸಿನಿಮಾ ಆಗಲು ಸಾಧ್ಯವಾಗಿದೆ. ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ನಾನು ಮೊದಲು ಇಬ್ಬರನ್ನು ಭೇಟಿ ಮಾಡಿದ್ದೆ. ಆ ಕೆಲಸ ತೃಪ್ತಿ ಕೊಟ್ಟಿರಲಿಲ್ಲ. ಆಮೇಲೆ ಸಾಧು ಕೋಕಿಲ ಬಳಿ ಹೋದಾಗ, ಟೈಮ್ ಪಡೆದು ಮಾಡಿಕೊಟ್ಟಿದ್ದಾರೆ.
ನಾಯಕ, ನಾಯಕಿ ಇಬ್ಬರಿಗೂ ನಾನು ಸಾಕಷ್ಟು ಬೆಂಡೆತ್ತಿದ್ದೇನೆ. ಅದೆಲ್ಲವೂ ಕೆಲಸ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕಷ್ಟೇ. ಇಲ್ಲಿ ಸಂದೇಶದ ಜತೆಗೆ ದೇಶಭಕ್ತಿ ಬಗ್ಗೆಯೂ ಹೇಳಿದ್ದೇನೆ. ದೇಶಪ್ರೇಮಿಗಳಿಗೆ ಅದು ಇಷ್ಟವಾಗಿದೆ. ನಾನು ಹಾಕಿದ ಹಣ ಬರುತ್ತಾ? ಅದು ಎರಡನೇ ಮಾತು. ಆದರೆ, ನನ್ನ ಪ್ರಯತ್ನವನ್ನು ಮತ್ತು ಮಗಳ ನಟನೆಯನ್ನು ಜನರು ಸ್ವೀಕರಿಸಿದ್ದಾರಲ್ಲ ಅದೇ ನನಗೆ ಖುಷಿ’ ಎಂದರು ಅರ್ಜುನ್ ಸರ್ಜಾ.
ಚಂದನ್‌ಗೆ, ಹಿಂದಿನ ಸಿನಿಮಾಗಳಿಗಿಂತಲೂ ಇಲ್ಲಿ ಹತ್ತು ಪಟ್ಟು ಜಾಸ್ತಿ ಗುರುತಿಸಿಕೊಳ್ಳುವಂತಹ ಅವಕಾಶ ಸಿಕ್ಕಿದೆಯಂತೆ. “ಪ್ರತಿಯೊಂದು ದೃಶ್ಯ ಚೆನ್ನಾಗಿ ಬಂದಿದೆ ಅಂದರೆ, ಆ ಎಲ್ಲಾ ಕ್ರೆಡಿಟ್ ಅರ್ಜುನ್ ಸರ್ಜಾ ಅವರಿಗೆ ಸಲ್ಲಬೇಕು. ಕ್ಯಾಮೆರಾ ಮುಂದೆ ನಿಲ್ಲುವ ಮುನ್ನ, ವರ್ಕ್‌ಶಾಪ್ ಮಡಿ ಕೆಲಸ ಮಾಡಿದ್ದೇವೆ. ಪ್ರತಿ ಸೀನ್‌ನಲ್ಲೂ ಅರ್ಜುನ್ ಸರ್, ನಟಿಸಿ ತೋರಿಸುತ್ತಿದ್ದರು. ಆ ಫಲಿತಾಂಶ ತೆರೆಯ ಮೇಲೆ ಬಂದಿದೆ. ಐಶ್ವರ್ಯ ಅವರು ನನಗಿಂತಲೂ ಚೆನ್ನಾಗಿ ನಟಿಸಿದ್ದಾರೆ. ಇದು ನನಗೆ ಸಿಕ್ಕ ದೊಡ್ಡ ಗೆಲುವು’ ಎಂದರು ಚಂದನ್.
ಐಶ್ವರ್ಯ ಅವರಿಗೆ, ಮೊದಲ ಚಿತ್ರದ ಗೆಲುವಿನ ಹಿಂದೆ ಚಿತ್ರತಂಡದ ಶ್ರಮ ನೆನಪಾಗುತ್ತದೆಯಂತೆ. “ಎಲ್ಲರು ತೋರಿದ ಪ್ರೀತಿ, ಪ್ರೋತ್ಸಾಹದಿಂದಾಗಿ, ನಾನು ಅಭಿನಯಿಸಲು ಸಾಧ್ಯವಾಗಿದೆ. ನನ್ನ ನಟನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ. ಇಂದು ನಾನು ಎಷ್ಟೇ ಚೆನ್ನಾಗಿ ನಟಿಸಿದ್ದರೂ ಆ ಎಲ್ಲಾ ಕ್ರೆಡಿಟ್ ನನ್ನ ತಂದೆಗೆ ಸಲ್ಲಬೇಕು. ಅಪ್ಪ, ಎಲ್ಲವನ್ನೂ ಹೇಳಿಕೊಟ್ಟಿದ್ದರಿಂದ ನಾನು ಮಾಡಲು ಸಾಧ್ಯವಾಗಿದೆ’ ಎಂದರು ಐಶ್ವರ್ಯ.