Advertisement

ಸವಾಲುಗಳ ಗೆಲ್ಲುವುದು ಅಸಾಧ್ಯವಲ್ಲ !

12:30 AM Mar 08, 2019 | Team Udayavani |

 1982ರಲ್ಲಿ  ಕಲೆಗೆ ಈಗಿನಷ್ಟು ಪ್ರೋತ್ಸಾಹ ಇರಲಿಲ್ಲ. ಭರತನಾಟ್ಯ ಶಾಸ್ತ್ರ ಸಹಿತ ಪ್ರಯೋಗ ಕಲಿಸುವ ವಿದ್ವಾಂಸರು ಮಂಗಳೂರಿನಲ್ಲಿ ಇರಲಿಲ್ಲ. ತಂತ್ರಜ್ಞಾನ, ಮಾಧ್ಯಮ, ಸಂಚಾರಿ ಸೌಲಭ್ಯ, ನೃತ್ಯ ಗ್ರಂಥಗಳು ಸಿಗದಿದ್ದ ಕಾಲದಲ್ಲಿ  ಪುಸ್ತಕ ಉಳ್ಳವರೂ ಕೊಡುತ್ತಿರಲಿಲ್ಲ. ಭರತನಾಟ್ಯ ಪುಸ್ತಕ ತರಿಸಿ ಓದಿದರೂ ಅರ್ಥವಾಗದ್ದಕ್ಕೆ ಉತ್ತರ ಹೇಳುವವರಿಲ್ಲ. ಕೆಲವೊಮ್ಮೆ  ವ್ಯಂಗ್ಯ, ಉಪೇಕ್ಷೆಯ ಉತ್ತರದಿಂದ ಸ್ವ-ಅಧ್ಯಯನಕ್ಕೆ ತೊಡಗಬೇಕಾಯಿತು. ನಾನು ಹುಟ್ಟಿ ಬೆಳೆದ ಕೆಆರ್‌ಇಸಿ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ  ಸ್ಪಿಕ್‌ವೆುಕೆಯ ನೃತ್ಯ ಲೆಕ್‌-ಡೆಮ್‌ಗಳು ನನಗೆ ವರದಾನವಾಯಿತು. 

Advertisement

ವಿಜ್ಞಾನಕ್ಕೆ ಮಾತ್ರ ಗೌರವ ಇರುವಲ್ಲಿ ವಾಸಿಸುತ್ತಿದ್ದ ಕಾರಣ ಅಲ್ಲಿ ನನ್ನ ಕಲೆಯ ಬಗ್ಗೆ ಗೌರವ ದೊರಕಿಸಬೇಕಾದ ಸವಾಲು, ಸಮಯ ಹೊಂದಾಣಿಕೆಯೊಂದಿಗೆ ಗುರುಗಳ ತಂಡದಲ್ಲಿ  ಕಾರ್ಯಕ್ರಮದಲ್ಲಿ ಭಾಗಿಯಾಗುತ್ತ ಪಠ್ಯದಲ್ಲಿ ಉತ್ತಮ ಫ‌ಲಿತಾಂಶ ಕಾಯ್ದುಕೊಳ್ಳಬೇಕಿತ್ತು.

ಬಾಲ್ಯದಿಂದ ಉಪೇಕ್ಷೆಯ ಮಾತುಗಳನ್ನಾಡಿದವರು ಹೆಮ್ಮೆಪಡುವ ಮಟ್ಟಕ್ಕೆ ಬೆಳೆಯಬೇಕಾಗಿತ್ತು. ವಿವಾಹದ ಬಳಿಕ ಪತಿಯ ಮನೆಯವರಿಗೆ ಈ ಕಲೆಯ ಬಗ್ಗೆ  ಒಲವು ಮೂಡಿಸಬೇಕಿತ್ತು.

ಭರತನಾಟ್ಯ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ಅಂಗಶುದ್ಧಿ, ಅಭಿನಯ ಪಕ್ವತೆಗೆ ತಾಳ್ಮೆಯ ಕಲಿಕೆಯ ಮನವರಿಕೆಯೊಂದಿಗೆ  ಕಲೆಯನ್ನು ಪ್ರೀತಿಸುವಂತೆ ಮಾಡಬೇಕಾಗಿತ್ತು. ಮಾರ್ಗಂ ನೃತ್ಯಗಳು ತಮಿಳು-ತೆಲುಗು ಭಾಷೆ ಗಳಲ್ಲಿ ಅಧಿಕವಾಗಿದ್ದು ನೃತ್ಯ ಸಂಯೋಜನೆಗೆ ಅರ್ಥ ಹುಡುಕುವ ಸವಾಲಿತ್ತು. ಈಗ ಕನ್ನಡ ರಚನೆಗಳು ಮಾನ್ಯವಾಗಿವೆ.

ಕಾರ್ಯಕ್ರಮ ನೀಡುವಾಗ ಮಹಿಳೆಯಾಗಿ ಸಂಘಟನೆಯಲ್ಲಿ ಸಾಕಷ್ಟು ಸವಾಲುಗಳಿವೆ. ಧ್ವನಿಮುದ್ರಣಗಳಿಗೆ ಭರತನಾಟ್ಯ ಪ್ರದರ್ಶನ ಅಪರಾಧ ಎನ್ನುವ ಕಾಲದಲ್ಲಿ  ಭರತನಾಟ್ಯ ಹಿಮ್ಮೇಳ ಕಲಾವಿದರ ಕೊರತೆ, ಕಡೇ ಕ್ಷಣ ಕಾರ್ಯಕ್ರಮಕ್ಕೆ ಹಿಮ್ಮೇಳ ಕಲಾವಿದರು ಬರಲಾಗದೆ ಪರ್ಯಾಯ ಕಲಾವಿದರನ್ನು ಸಿದ್ಧಪಡಿಸುವುದು, ವಿದ್ಯಾರ್ಥಿಗಳು ಕೂಡ ಕಾರಣಾಂತರದಿಂದ ಬರಲಾಗದಾಗ ನೃತ್ಯ ಪುನರಪಿ ಸಂಯೋಜನೆಯ ಸಮಸ್ಯೆ, ವರ್ಣಾಲಂಕಾರ ಕಲಾವಿದರ ಕೊರತೆ, ಧ್ವನಿವರ್ಧಕ-ಬೆಳಕಿನ ಸಮತೋಲನ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದಿದೆ. 

Advertisement

ಅಂಗೈಯೊಳಗೆ  ಸೌಕರ್ಯವಿದ್ದರೂ ಹೊಸ ಸವಾಲುಗಳು ಹುಟ್ಟುತ್ತಲೇ ಇವೆ. ಕಲಾಪ್ರೀತಿ, ಶ್ರದ್ಧೆ, ಶಿಸ್ತು, ಪರಿಶ್ರಮ, ಸಕಾರಾತ್ಮಕ ನಿಲುವು ಇದ್ದರೆ ಎಂಥ ಸವಾಲನ್ನೂ ಗೆಲ್ಲಬಹುದು.

ಸುಮಂಗಲಾ ರತ್ನಾಕರ್‌
ಭರತನಾಟ್ಯ, ಯಕ್ಷಗಾನ ಕಲಾವಿದೆ

Advertisement

Udayavani is now on Telegram. Click here to join our channel and stay updated with the latest news.

Next