ರಾಣಿಬೆನ್ನೂರು: ಸ್ಥಳೀಯ ನಗರಸಭೆಗೆ ಆ.31 ರಂದು ನಡೆಯಲಿರುವ ಚುನಾವಣೆಯ ಗೆಲುವಿಗೆ ನಾಲ್ಕೂ ಪಕ್ಷಗಳಿಂದ ಎಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಕೆಪಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಲ್ಲಿ ಗೆಲುವಿನ ಸಂಚಲನ ಮೂಡಿಸಿದೆ.
ಕಳೆದ ನಗರಸಭೆ ಚುನಾವಣೆಯಲ್ಲಿ 31 ಸ್ಥಾನಗಳ ಪೈಕಿ 13 ಕಾಂಗ್ರೆಸ್, ಕೆಜೆಪಿ 9, ಬಿಜೆಪಿ 3, ಆರ್ ಶಂಕರ ಅಭಿಮಾನಿಗಳ ಸಂಘಟನೆಯಿಂದ 6 ಸ್ಥಾನ ಪಡೆದಿದ್ದವು. ಅತೀ ಹೆಚ್ಚಿನ ಸ್ಥಾನ ಪಡೆದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಸಹ ಎಲ್ಲ 35 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಪುನಃ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸಪಡುತ್ತಿದೆ.
ಇನ್ನು ಬಿಜೆಪಿ ಮತ್ತು ಕೆಜೆಪಿ ಈಗಾಗಲೇ ವಿಲೀನವಾಗಿದ್ದು, 34 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಗೆಲುವಿನ ಭರವಸೆಯಲ್ಲಿ ಚುನಾವಣೆ ಎದುರಿಸಲು ಮುಂದಾಗಿವೆ. ಆದರೂ ಏಕಸಾಮಿತ್ವ ನಾಯಕನ ಕೊರತೆ ಎದ್ದು ಕಾಣುತ್ತಿದ್ದು, 12 ಕ್ಕೂ ಅ ಧಿಕ ನಾಯಕರು ಸ್ವಯಂ ಘೋಷಿತ ನಾಯಕರಿದ್ದಾರೆ. ಇವರೆಲ್ಲ ಒಂದಾಗಿ ಚುನಾವಣೆ ಎದುರಿಸಿದರೆ ಮಾತ್ರ ಗೆಲುವು ಸಾಧಿ ಸಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಶಾಸಕ ಹಾಗೂ ಸಚಿವ ಆರ್. ಶಂಕರ ಕೆಪಿಜೆಪಿಯಿಂದ 34 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪ್ರಭಲ ಸ್ಪರ್ಧೆ ನೀಡುವ ಮೂಲಕ ಗೆಲುವಿನ ಹುರುಪಿನಲ್ಲಿದ್ದಾರೆ. ಆದರೆ, ಕಳೆದ ನಗರಸಭಾ ಚುನಾವಣೆಯಲ್ಲಿ ಶಾಸಕನಾಗದಿದ್ದರೂ 6 ಸ್ಥಾನ ಪಡೆದಿದ್ದು, ಈ ಬಾರಿ ಸಚಿವನಾಗಿರುವುದರಿಂದ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿದ್ದಾರೆ, ವಿಧಾನಸಭೆಯ ಚುನಾವಣೆಗಿಂತ ಮೊದಲಿದ್ದ ಕಾಳಜಿ ಇಂದು ಸ್ವಲ್ಪ ಕಡಿಮೆಯಾಗಿದ್ದು, ಈಗ ಮತದಾರರ ಸಮೀಪವೂ ಸುಳಿಯುತ್ತಿಲ್ಲ ಎಂಬುದು ಮತದಾರರ ಆರೋಪವಾಗಿದೆ.
ಜೆಡಿಎಸ್ 10 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಿದ್ದು, ತನ್ನ ಖಾತೆ ತೆರೆಯುವ ಭರವಸೆಯಲ್ಲಿದೆ. ಈ ಎಲ್ಲದರ ಮಧ್ಯೆ ಭಿನ್ನಮತದ ಸಂಕಷ್ಠ ನಾಲ್ಕೂ ಪಕ್ಷಗಳಲ್ಲಿದೆ. ಈ ಎಲ್ಲದರ ಮಧ್ಯ ಮತದಾರನು ಯಾರ ಕೈಹಿಡಿಯುವನು ಎಂದು ಕಾದು ನೋಡಬೇಕಾಗಿದೆ.