Advertisement

ಬದುಕೆಂಬ ಸ್ಕೇಟಿಂಗ್‌ನಲ್ಲಿ ಗೆದ್ದವನೇ ಸಾಹೇಬ!

04:42 PM Feb 24, 2018 | Team Udayavani |

ಅವನು ಸ್ಲಂ ಹುಡುಗ. ಹೆಸರು ಸೂರಿ. ಅವನಿಗೆ ಚಿಕ್ಕಂದಿನಿಂದಲೂ ಸ್ಕೇಟಿಂಗ್‌ ಕಲಿಯೋ ಆಸೆ. ಆದರೆ, ತುತ್ತು ಅನ್ನಕ್ಕೂ ಪರಿತಪಿಸುವ ಕುಟುಂಬಕ್ಕೆ ಅವನೊಬ್ಬನೇ ಆಧಾರ. ಅನಾರೋಗ್ಯದ ತಾಯಿ ಜೊತೆ ದುಡಿದು ಬದುಕು ಕಟ್ಟಿಕೊಳ್ಳುವ ಅವನಿಗಿರೋದು ಒಂದೇ ಗುರಿ, ತಾನು ಸ್ಕೇಟಿಂಗ್‌ ಕಲಿತು, ಚಾಂಪಿಯನ್‌ ಆಗಬೇಕು. ನಂತರ ತಾಯಿಗೆ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಏನೂ ಇಲ್ಲದ ಅವನಿಗೆ ಇದು ಸಾಧ್ಯನಾ?

Advertisement

“ರಂಕಲ್‌ ರಾಟೆ’ಯಲ್ಲಿ ಅದು ಖಂಡಿತ ಸಾಧ್ಯ. ಈಗಾಗಲೇ ಕ್ರೀಡೆಗಳ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ “ರಂಕಲ್‌ ರಾಟೆ’ ಚಿತ್ರವನ್ನು ಸೇರಿಸಬಹುದು. ಕಥೆಗೆ ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಕೆಲವೆಡೆಯಂತೂ ಜಾಳು ಜಾಳು ಎನಿಸುವ ದೃಶ್ಯಗಳು ಎದುರಾಗಿ, ನೋಡುಗನ ಚಿತ್ತ ಬದಲಿಸುವಂತೆ ಮಾಡುತ್ತೆ. ಇನ್ನೂ ಕೆಲವು ಕಡೆಯಲ್ಲಿ ಕಾಣಸಿಗುವ ದೃಶ್ಯಗಳು ಕಾಟಚಾರಕ್ಕೆಂಬಂತಿವೆ.

ಜೋಪಡಿಯಲ್ಲಿ ಕಂಡು ಬರುವ ದೃಶ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿತ್ತು. ಭಾವನಾತ್ಮಕ ಸಂಬಂಧಗಳು ಇಲ್ಲಿ ಹೈಲೈಟ್‌ ಎನಿಸಿದರೂ, ಕ್ರೀಡೆ ಕುರಿತು ಇನ್ನಷ್ಟು ಆಳವಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು. ಮೊದಲರ್ಧ ವೇಗ ದ್ವಿತಿಯಾರ್ಧದಲ್ಲಿಲ್ಲ. ಒಮ್ಮೊಮ್ಮೆ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಿರುವ ಹುಡುಗನೊಬ್ಬನ ಡಾಕ್ಯುಮೆಂಟರಿ ನೋಡಿದಂತೆ ಭಾಸವಾಗುತ್ತದೆ.

ಸುಮ್ಮನೆ ನೋಡಿಸಿಕೊಂಡು ಹೋಗುವ ಚಿತ್ರದ ಮಧ್ಯೆ, ವಿನಾಕಾರಣ ಹಾಡುಗಳು ತೂರಿಬಂದು, ನೋಡುಗನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಒಟ್ನಲ್ಲಿ, ಸ್ಕೇಟಿಂಗ್‌ ಕ್ರೀಡೆಯಲ್ಲಿ ಸ್ಲಂ ಹುಡುಗನ ಸಾಧಕ-ಬಾಧಕ ಚಿತ್ರದ ಪ್ರಮುಖ ಅಂಶ. ಇಲ್ಲಿ ಅವನು ಹೇಗೆಲ್ಲಾ ಒದ್ದಾಡಿ, ಚಾಂಪಿಯನ್‌ ಆಗ್ತಾನೆ ಎಂಬುದನ್ನು ತುಂಬಾನೇ ಸರಳವಾಗಿ ತೋರಿಸಲಾಗಿದೆ. ಸ್ಲಂನಲ್ಲಿ ಬದುಕು ಸವೆಸುವ ಸೂರಿ, ತನ್ನ ತಾಯಿ ಜತೆ ದಿನ ದೂಡುತ್ತಿರುತ್ತಾನೆ.

ಅವನಿಗೆ ಚಿಕ್ಕಂದಿನಿಂದಲೂ ಸ್ಕೇಟಿಂಗ್‌ ಮಾಡುವ ಆಸೆ. ಆದರೆ, ಹೊಟ್ಟೆಗೆ ಹಿಟ್ಟಿಲ್ಲ. ತರಬೇತಿಗೆ ಸೇರಿ, ಸ್ಕೇಟಿಂಗ್‌ ಶೂ ಖರೀದಿಸಿ, ಆಡುವುದಂತೂ ಬಲುದೂರ. ಅತ್ತ, ಗೋವಾದಲ್ಲಿರುವ ಡೇವಿಡ್‌ ಎಂಬ ಸ್ಕೇಟಿಂಗ್‌ ತರಬೇತುದಾರ, ಒಬ್ಬಳ ಪ್ರೀತಿ ಹಿಂದೆ ಬಿದ್ದಾಗ, ಕನ್ನಡದ ಒಬ್ಬ ಹುಡುಗನನ್ನು ನೀನು ಸ್ಕೇಟಿಂಗ್‌ ಚಾಂಪಿಯನ್‌ ಮಾಡಿ ಬಾ ಎಂದು ಅವಳು ಅವನಿಗೆ ಸವಾಲು ಹಾಕುತ್ತಾಳೆ.

Advertisement

ಆ ಸವಾಲು ಸ್ವೀಕರಿಸುವ ತರಬೇತುದಾರ ಡೇವಿಡ್‌, ಸೀದಾ ಬೆಂಗಳೂರಿಗೆ ಬರುತ್ತಾನೆ. ಸ್ಕೇಟಿಂಗ್‌ ಅಕಾಡೆಮಿಯನ್ನು ಹಿಡಿತದಲ್ಲಿಟ್ಟುಕೊಂಡ ಶ್ರೀಮಂತೆಯೊಬ್ಬಳು ತನ್ನ ಮಗನಿಗೆ ತರಬೇತಿ ನೀಡಿ ಚಾಂಪಿಯನ್‌ ಮಾಡಿಸಬೇಕು ಎಂದು ಡೇವಿಡ್‌ನ‌ನ್ನು ನೇಮಿಸಿಕೊಳ್ಳುತ್ತಾಳೆ. ಆದರೆ, ಶ್ರೀಮಂತ ಮಗನ ಪೊಗರು ನೋಡಿ, ಆ ತರಬೇತಿ ಕೆಲಸ ಬಿಟ್ಟು ಹೊರಬರುತ್ತಾನೆ.

ಆಗ ಕಣ್ಣಿಗೆ ಕಾಣುವ ಸ್ಲಂ ಹುಡುಗ ಸೂರಿಯ ಆಸೆಗೆ ನೆರವಾಗುತ್ತಾನೆ. ಮುಂದೆ ಸೂರಿ ಚಾಂಪಿಯನ್‌ ಹೇಗಾಗುತ್ತಾನೆ ಎಂಬುದು ಕಥೆ. ಇಷ್ಟು ಹೇಳಿದ ಮೇಲೂ “ರಂಕಲ್‌ ರಾಟೆ’ಯ “ರಂಕ್ಲು’ ನೋಡುವ ಮನಸ್ಸಿದ್ದರೆ ಹೋಗಬಹುದು. ಇಲ್ಲಿರುವ ಸಣ್ಣ ಸಂದೇಶವನ್ನು ಒಪ್ಪಲೇಬೇಕು “ಜೀವನದಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತೆ’ ಎಂಬ ತಾತ್ಪರ್ಯ ಇಲ್ಲಿದೆ.

ನಾಯಕ ಮನ ಅದ್ವಿಕ್‌ ತರಬೇತುದಾರನಾಗಿ ಗಮನಸೆಳೆಯುತ್ತಾರೆ. ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ನಾಯಕಿ ಅಶ್ರೀಯಾ ಬಗ್ಗೆ ಹೇಳುವುದೇನೂ ಇಲ್ಲ. ಉಳಿದಂತೆ ರವಿ ಕೆರೂರ್‌, ಯಶಸ್‌, ಆಶಾ ಮತ್ತಿತರರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಅವಿನಾಶ್‌, ಶ್ರೀರಾಮ್‌ ಸಂಗೀತದಲ್ಲಿ ಸ್ವಾದವಿಲ್ಲ. ಪ್ರವೀಣ್‌ ಎಂ. ಪ್ರಭು ಛಾಯಾಗ್ರಹಣದಲ್ಲಿ ಹೇಳಿಕೊಳ್ಳುವ ಯಾವ ಪವಾಡ ನಡೆದಿಲ್ಲ.

ಚಿತ್ರ: ರಂಕಲ್‌ ರಾಟೆ
ನಿರ್ಮಾಣ: ಬೈಸಾನಿ ಸತೀಶ್‌ಕುಮಾರ್‌
ನಿರ್ದೇಶನ: ಗೋಪಿ ಕೆರೂರ್‌
ತಾರಾಗಣ: ಮನ ಅದ್ವಿಕ್‌, ಆಶ್ರೀಯಾ, ರವಿ ಕೆರೂರ್‌, ಯಶಸ್‌, ಆಶಾ, ಕೃಷ್ಣಮೂರ್ತಿ ಮತ್ತಿತರರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next