ಹರಿಹರ: ನಿರೀಕ್ಷಿತವೇ ಆದರೂ ಲೋಕಸಭಾ ಚುನಾವಣೆಯ ಗುಂಗಿನಲ್ಲಿದ್ದಾಗ ದಿಢೀರನೆ ಬಂದೆರಗಿದ ನಗರಸಭೆ ಚುನಾವಣೆಯಿಂದಾಗಿ ಪಕ್ಷಗಳ ಬಹುತೇಕ ಮುಖಂಡರು-ಕಾರ್ಯಕರ್ತರು, ಅಭ್ಯರ್ಥಿಗಳು ಸಿದ್ಧತೆ-ಪ್ರಚಾರಕ್ಕೆ ಇನ್ನಷ್ಟು ಕಾಲಾವಕಾಶ ಸಿಗಬೇಕಿತ್ತು ಎನ್ನುತ್ತಲೇ ಲಗುಬಗೆಯಲ್ಲಿ ಕೊನೆಗಳಿಗೆಯ ಪ್ರಚಾರ ನಡೆಸಿದ್ದಾರೆ.
ಆರಂಭದಲ್ಲಿ ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ ಕೆಲ ಅಭ್ಯರ್ಥಿಗಳಲ್ಲೀಗ ನಿರಾಸೆ ಮೂಡಿದೆ. ಪಕ್ಷ ಕೈ ಹಿಡಿಯುತ್ತೆ, ಚುನಾವಣೆ ಖರ್ಚಿಗೆ ಹಣ ನೀಡುತ್ತೆ ಎಂದುಕೊಂಡದ್ದು ಬಹುತೇಕ ಸುಳ್ಳಾಗಿದೆ. ಟೈಮಿಲ್ಲ… ಟೈಮಿಲ್ಲ…. ಎನ್ನುತ್ತಿರುವ ಪಕ್ಷದ ಮುಖಂಡರೂ ಗೆಲ್ಲುವ ಭರವಸೆಯಿಲ್ಲದ ವಾರ್ಡ್‌ಗಳಿಗೆ ಕಾಲಿಡಲೂ ಹಿಂದೇಟು ಹಾಕುತ್ತಿದ್ದಾರೆ.
ಒಳ ಒಪ್ಪಂದ: ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಲವೆಡೆ ಬಿಜೆಪಿ ಒಳಗಿಂದೊಳಗೆ ಮತ್ತೂಬ್ಬರ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದರೆ, ಕೆಲವೆಡೆ ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದೆ. ಲೋಕಸಭಾ ಫಲಿತಾಂಶದ ನಂತರ ಸಂಸದ ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಬಂಡಾಯ ಕಾಂಗ್ರೆಸ್ಸಿಗ ಶ್ಯಾಮ್‌ಸನ್ ಮೇಸ್ತ್ರಿ ಪರವಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ಬಹಿರಂಗವಾಗಿಯೇ ಪ್ರಚಾರ ಮಾಡುತ್ತಿದ್ದರೆ, ಸುಣಗಾರ ಬೀದಿ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಪಾರ್ವತಮ್ಮರನ್ನು ಒಳಗಿಂದೊಳಗೆ ಬೆಂಬಲಿಸಲಾಗುತ್ತಿದೆ.
ಪ್ರಭಾವ, ಒತ್ತಡ ತಂತ್ರ ಬಳಸಿದ್ದರೂ ನಾಮಪತ್ರ ವಾಪಸ್ ಪಡೆಯದ ಕೆಲವು ಪಕ್ಷೇತರರನ್ನು ಕೊನೆಗಳಿಗೆಯಲ್ಲಿ ತಟಸ್ಥಗೊಳಿಸುವಲ್ಲೂ ಕೆಲವರು ಯಶಸ್ವಿಯಾಗಿದ್ದಾರೆ. ಕುಂಬಾರ ಓಣಿಯಲ್ಲಿ ಪಕ್ಷೇತರರಾಗಿದ್ದ ಅನಸೂಯಮ್ಮ ಕೆ.ರಾಜು. ತಾವು ತಟಸ್ಥರಾಗಿದ್ದು, ಜೆಡಿಎಸ್ ಅಭ್ಯರ್ಥಿ ರತ್ನಾ ಡಿ.ಯು. ಅವರನ್ನು ಬೆಂಬಲಿಸುತ್ತಿರುವುದಾಗಿ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಹೀಗೆ ವಿವಿಧ ವಾರ್ಡ್ ಗಳಲ್ಲಿ ಹಲವರು ತಮ್ಮ ಶಕ್ತ್ಯಾನುಸಾರ ತಮ್ಮ ಗೆಲುವಿಗೆ ಕಂಟಕವಾಗಬಹುದಾದ ಅಭ್ಯರ್ಥಿಗಳನ್ನು ತಟಸ್ಥಗೊಳಿಸುವ ಪ್ರಯತ್ನವನ್ನು ಇನ್ನೂ ಮುಂದುವರಿಸಿದ್ದಾರೆ.
Advertisement
ಬಹಿರಂಗ ಪ್ರಚಾರ ಮುಗಿದಿದ್ದರೂ ತೆರೆಮರೆಯಲ್ಲಿ ಸೋಮವಾರ ಅಭ್ಯರ್ಥಿಗಳು, ಅವರ ಬೆಂಬಲಿಗರು ಮನೆ ಮನೆಗೆ ಭೇಟಿ ನೀಡಿ, ಹಿರಿಯರು, ಮುಖಂಡರಿಗೆ ನಮಸ್ಕರಿಸುತ್ತಾ ಮತದಾರರ ಮನವೊಲಿಕೆಗೆ ಪ್ರಯತ್ನಿಸಿದರು. ಮತದಾನಕ್ಕೆ ಮುನ್ನಾ ದಿನವಾದ ಮಂಗಳವಾರದ ಕತ್ತಲುರಾತ್ರಿ ತಮ್ಮ ಎದುರಾಳಿಗಿಂತ ಹೆಚ್ಚಿನ ಕೊಡುಗೆ ನೀಡಿ ಕಾರ್ಯ ಸಾಧಿಸಲೂ ಕೆಲವರು ಸಜ್ಜಾಗಿದ್ದಾರೆ.
Related Articles
ಹೈ ವೋಲ್ಟೇಜ್ ವಾರ್ಡ್‌ಗಳಿವು:
ಗಂಗಾ ನಗರದಲ್ಲಿ ಕಾಗ್ರೆಸ್‌ನಿಂದ ಸ್ಪರ್ಧಿಸಿರುವ ಶಾಸಕ ಎಸ್.ರಾಮಪ್ಪ ಸಹೋದರನ ಪುತ್ರ, ಮಾಜಿ ನಗರಸಭೆ ಸದಸ್ಯ ಎಸ್.ಎಂ. ವಸಂತ್, ಈಗಷ್ಟೇ ಜೆಡಿಎಸ್ ಸೇರಿರುವ ಕಟ್ಟಾ ಕಾಂಗ್ರೆಸ್ ಕುಟುಂಬಸ್ಥ ಸಿ.ಎನ್.ಮಂಜುನಾಥ್‌ರನ್ನು (ಸಿ.ಎನ್. ಹುಲಿಗೇಶ್ ಸಹೋದರ) ಎದುರಿಸಬೇಕಾಗಿರುವುದು ವಿಶೇಷವಾಗಿದೆ. ನಗರಸಭೆ ಮಾಜಿ ಅಧ್ಯಕ್ಷೆ, ಕಾಂಗ್ರೆಸ್‌ನ ಸುಜಾತಾ ರೇವಣಸಿದ್ದಪ್ಪ, ಜೆಡಿಎಸ್ ಮುಖಂಡ ಡಿ.ಉಜ್ಜೇಶ್ ಪತ್ನಿ ವಿರುದ್ಧ ಕುಂಬಾರ ಓಣಿಯಲ್ಲಿ ಮತ್ತು ಬಿಜೆಪಿ ಯುವ ಮುಖಂಡರಾಗಿದ್ದ ದಿ|ರಮೇಶ್ ಮೆಹರ್ವಾಡೆ ಪತ್ನಿ ನಿತಾ ಮೆಹರ್ವಾಡೆ ಕಾಂಗ್ರೆಸ್‌ನ ಷಹಜಹಾದ್ ಸನಾವುಲ್ಲಾ ವಿರುದ್ಧ ಜೆಸಿಆರ್ ಬಡಾವಣೆ-1 ರಲ್ಲಿ ಸೆಣಸುತ್ತಿರುವುದು ಕುತೂಹಲ ಮೂಡಿಸಿದೆ. ಜೆಸಿಆರ್ ಬಡಾವಣೆ-2 ರಲ್ಲಿ ಕಾಂಗ್ರೆಸ್‌ನ ಸಿ.ಎನ್.ಹುಲಿಗೇಶ್, ಬಿಜೆಪಿಯ ಮಾರುತಿ ಶೆಟ್ಟಿ ಮಧ್ಯೆ ಹಾಗೂ ಇಮಾಮ್ ಮೊಹಲ್ಲಾದಲ್ಲಿ ಕಾಂಗ್ರೆಸ್‌ನ ಶಂಕರ್ ಖಟಾವ್‌ಕರ್, ಜೆಡಿಎಸ್‌ನ ಅಬ್ದುಲ್ ರೆಹಮಾನ್ ಖಾನ್ ಮಧ್ಯೆ ನೇರ ಸ್ಪರ್ಧೆಯಿದ್ದರೆ, ಆಶ್ರಯ ಬಡಾವಣೆಯಲ್ಲಿ ಬಿಜೆಪಿಯ ಆಟೋ ಹನುಮಂತ, ಜೆಡಿಎಸ್‌ನ ಸುರೇಶ್ ಬಿ.ಆರ್., ಬಿಎಸ್‌ಪಿಯ ಸೊಸೈಟಿ ಹನುಂತಪ್ಪರ ಮಧ್ಯೆ ತ್ರಿಕೋನ ಸ್ಪರ್ಧೆಯಿದೆ. ಜೆಡಿಎಸ್‌ನ ವಿರೂಪಾಕ್ಷ ಸ್ಪರ್ಧಿಸಿರುವ ಎ.ಕೆ.ಕಾಲೋನಿ, ನಿಂಬಕ್ಕ ಚಂದಾಪುರ್ ಸ್ಪರ್ಧಿಸಿರುವ ಭರಂಪುರ, ಕಾಂಗ್ರೆಸ್‌ನ ಸಿಗ್ಬತ್‌ಉಲ್ಲಾ ಸ್ಪರ್ಧಿಸಿರುವ ಪ್ರಶಾಂತ ನಗರ, ಬಿಜೆಪಿಯ ರೂಪ ಕಾಟ್ವೆ ಕಣಕ್ಕಿಳಿದಿರುವ ಕೆ.ಆರ್.ನಗರ, ಅಶ್ವಿನಿ ಕೃಷ್ಣ ಸ್ಪರ್ಧಿಸಿರುವ ವಿದ್ಯಾನಗರ, ಡಿ.ವೈ.ಇಂದಿರಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಡವಲುಪೇಟೆ ಪ್ರತಿಷ್ಠಿತ ವಾರ್ಡ್‌ಗಳಾಗಿವೆ. ಅನೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆಯಿದ್ದರೆ, ಸುಣಗಾರ ಬೀದಿಯ ಪಾರ್ವತಮ್ಮ, ಕಾಳಿದಾಸ ನಗರದ ಸೈಯದ್ ಏಜಾಜ್, ವಿಜಯನಗರ ಬಡಾವಣೆಯ ದಿನೇಶ್ ಸ್ವತಂತ್ರ ಅಭ್ಯರ್ಥಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಎರೆಡೆರಡು ಕಡೆ ಮತ-ಗೊಂದಲ:
ನಗರದ ಹಲವೆಡೆ ಒಬ್ಬರೇ ಮತದಾರರ ಹೆಸರು ಎರಡೆರಡು ವಾರ್ಡ್‌ಗಳಲ್ಲಿರುವುದು ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ತೆಗ್ಗಿನ ಕೇರಿ ವಾರ್ಡ್‌ನ ಮೆಟ್ಟಿಲು ಹೊಳೆ ರಸ್ತೆಯ ನೇಕಾರ ಕುಟುಂಬಕ್ಕೆ ಸೇರಿದ ನೂರಕ್ಕೂ ಹೆಚ್ಚು ಮತಗಳು ತೆಗ್ಗಿನ ಕೇರಿ ವಾರ್ಡ್ ಮತಪಟ್ಟಿಯಲ್ಲಿ ಮಾತ್ರವಲ್ಲದೆ ಪಕ್ಕದ ಇಮಾಮ್ ಮೊಹಲ್ಲಾ ವಾರ್ಡ್‌ನ ಮತದಾರರ ಪಟ್ಟಿಯಲ್ಲೂ ನಮೂದಾಗಿವೆ. ಮನೆ ಬಾಗಿಲಿಗೆ ಬಂದ ಎರಡೂ ವಾರ್ಡ್‌ನ ಅಭ್ಯರ್ಥಿಗಳಿಗೆ ತಥಾಸ್ತು ಎನ್ನುತ್ತಿರುವ ಈ ಮತದಾರರು ಯಾವುದಾದರೂ ಒಂದು ವಾರ್ಡ್‌ನಲ್ಲಿ ಮಾತ್ರ ಮತ ಚಲಾವಣೆ ಮಾಡಬೇಕಾಗಿರುವುದರಿಂದ ಮತದಾನದ ದಿನ ಬೆಳಿಗ್ಗೆಯೇ ಇವರನ್ನು ತಮ್ಮ ಮತಗಟ್ಟೆಗೆ ಕರೆದೊಯ್ದು ಮತ ಹಾಕಿಸಿಕೊಳ್ಳಲು ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಕೆಲವೆಡೆ ಒಂದೇ ಮನೆಯಲ್ಲಿರುವ ಅತ್ತೆ-ಮಾವನ ಮತ ಒಂದು ವಾರ್ಡ್‌ನಲ್ಲಿದ್ದರೆ, ಮಗ-ಸೊಸೆಯ ಮತಗಳು ಮತ್ತೂಂದು ವಾರ್ಡ್‌ನಲ್ಲಿವೆ. ವಾರ್ಡ್ ಪುನರ್‌ವಿಂಗಡಣೆ ವೇಳೆ ಈ ಯಡವಟ್ಟು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಬ್ರಾಹ್ಮಣರ ಅಧಿಪತ್ಯಕ್ಕೆ ಬ್ರೇಕ್?:
ನಗರದ ಹರಿಹರೇಶ್ವರ ದೇವಸ್ಥಾನದ ಸುತ್ತಮುತ್ತಲ ಪ್ರದೇಶವಾದ ಕೋಟೆಕೆರೆ ಈ ಮುಂಚೆ ಪ್ರತ್ಯೇಕ ವಾರ್ಡ್ ಆಗಿತ್ತು. ಇಲ್ಲಿ ಗರಿಷ್ಟ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮಾಜದ ಮತಗಳೇ ನಿರ್ಣಾಯಕವಾಗಿದ್ದವು. ಬ್ರಾಹ್ಮಣ ಅಭ್ಯರ್ಥಿಗಳೇ ಇಲ್ಲಿಂದ ಆಯ್ಕೆಯಾಗುತ್ತಿದ್ದರು. ಪ್ರಮುಖ ಪಕ್ಷಗಳ ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬರುತ್ತಿದ್ದರು. ಪುನರ್‌ವಿಂಗಡಣೆ ನಂತರ ಕೋಟೆಕೆರೆ, ಅಕ್ಕಪಕ್ಕದ ತೆಗ್ಗಿನ ಕೇರಿ, ಇಮಾಮ್ ಮೊಹಲ್ಲಾ ಮತ್ತಿತರೆ ವಾರ್ಡ್‌ಗಳಿಗೆ ಹಂಚಿ ಹೋಗಿದೆ. ಹೀಗಾಗಿ ಈ ನೂತನ ವಾರ್ಡ್‌ಗಳಿಂದ ಬ್ರಾಹ್ಮಣ ಅಭ್ಯರ್ಥಿಗಳು ಯಾರೂ ಸ್ಪರ್ಧಿಸಿಲ್ಲ. ಬ್ರಾಹ್ಮಣರ ಅಧಿಪತ್ಯಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
•ಬಿ.ಎಂ. ಸಿದ್ಧಲಿಂಗಸ್ವಾಮಿ
Advertisement