Advertisement

ಕರ್ನಾಟಕದಲ್ಲಿ ವೈನಾಗಿದೆ “ವೈನ್‌ ಮಾರಾಟ’

06:00 AM Dec 15, 2017 | Team Udayavani |

ಬೆಂಗಳೂರು: ವರ್ಷದಿಂದ ವರ್ಷಕ್ಕೆ ವೈನ್‌ ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದು, ವರ್ಷಾಂತ್ಯ ಡಿಸೆಂಬರ್‌ನಲ್ಲಿ ವೈನ್‌ ಮಾರಾಟದಲ್ಲಿ ಭಾರಿ ಏರಿಕೆಯಾಗಲಿದ್ದು, ಸುಮಾರು 12 ಲಕ್ಷ ಲೀ. ವೈನ್‌ ಮಾರಾಟದ ನಿರೀಕ್ಷೆಯಿದೆ.

Advertisement

ಪ್ರತಿ ವರ್ಷ ವೈನ್‌ ಮಾರಾಟ ಬರೋಬ್ಬರಿ ಶೇ.35 ಏರಿಕೆ ಕಾಣುತ್ತಿದೆ. ಅದರಲ್ಲೂ ಕ್ರಿಸ್‌ಮಸ್‌ ಹಾಗೂ ಹೊಸವರ್ಷ ಆಚರಣೆ ಸಂದರ್ಭದಲ್ಲಿ ವೈನ್‌ ಮಾರಾಟ ಭರ್ಜರಿ. ಡಿಸೆಂಬರ್‌ವೊಂದರಲ್ಲೇ ರಾಜ್ಯದ್ಯಂತ ಸುಮಾರು 60 ಕೋಟಿ ರೂ. ಗೂ ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದ್ದು, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್‌) ವರದಿ ಅನ್ವಯ ಡಿ.1ರಿಂದ ಡಿ.8ರವರೆಗೆ ಅಂದರೆ ಕೇವಲ 8 ದಿನಗಳಲ್ಲಿ ಸುಮಾರು 5.82 ಕೋಟಿ ರೂ. ವಹಿವಾಟು ನಡೆದಿದೆ.

2016ರಲ್ಲಿ ಕೇಂದ್ರ ಸರ್ಕಾರ 500 ರೂ. ಮತ್ತು 1000 ರೂ. ನೋಟುಗಳನ್ನು ಅಮಾನ್ಯಿàಕರಣ ಮಾಡಿದ್ದರಿಂದ ವೈನ್‌ ಉದ್ಯಮದ ಮೇಲೆ ಭಾರಿ ಪ್ರಮಾಣದ ಹೊಡೆತ ಬಿದ್ದಿತ್ತು. 2015ರ ಡಿಸೆಂಬರ್‌ನಲ್ಲಿ 10.53 ಲಕ್ಷ ಲೀಟರ್‌ ವೈನ್‌ ಮಾರಾಟವಾಗಿದ್ದು, 40 ಕೋಟಿ ರೂ. ವಹಿವಾಟು ನಡೆಸಿ 20 ಕೋಟಿ ರೂ. ಲಾಭ ಬಂದಿತ್ತು. ಆದರೆ, 2016ರ ಡಿಸೆಂಬರ್‌ನಲ್ಲಿ ಕೇವಲ 8,39,862 ಲೀಟರ್‌ ವೈನ್‌ ಮಾರಾಟವಾಗಿದ್ದು, 33 ಕೋಟಿ ರೂ. ವಹಿವಾಟು ಮತ್ತು 15 ಕೋಟಿ ರೂ. ಲಾಭ ಪಡೆಯಲಾಗಿತ್ತು. ನೋಟು ಅಮಾನ್ಯಿàಕರಣದಿಂದ ಸುಮಾರು 2 ಲಕ್ಷ ಲೀ. ವೈನ್‌ ಮಾರಾಟವಾಗದೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿತ್ತು.

ರಾಜ್ಯಾದ್ಯಂತ ಡಿಸೆಂಬರ್‌ ಅಂತ್ಯಕ್ಕೆ ಸುಮಾರು 12 ಲಕ್ಷ ಲೀ. ವೈನ್‌ ಮಾರಾಟವಾಗುವ ನಿರೀಕ್ಷೆಯಿದೆ. 2015ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು ಶೇ.15ರಿಂದ 20 ವೈನ್‌ ಮಾರಾಟದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ಕುಮಾರ್‌ ಹೇಳಿದ್ದಾರೆ.

200 ಕೋಟಿ ಲಾಭ
ರಾಜ್ಯಾದ್ಯಂತ ಪ್ರತಿ ವರ್ಷ 80 ಲಕ್ಷ ಲೀಟರ್‌ಗೂ ಅಧಿಕ ವೈನ್‌ ಉತ್ಪಾದನೆ ಮಾಡಲಾಗುತ್ತದೆ. ವೈನ್‌ ಮಂಡಳಿ ಅಂದಾಜಿನ ಪ್ರಕಾರ ವಾರ್ಷಿಕ ಸುಮಾರು 800 ಕೋಟಿ ರೂ. ವಹಿವಾಟು ವೈನ್‌ನಿಂದ ನಡೆಯುತ್ತದೆ. ಅದರಲ್ಲಿ ಅಂದಾಜು 180ರಿಂದ 200 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುತ್ತದೆ. ಇದು ಅಬಕಾರಿ ಸುಂಕದ ಬಾಬಿ¤ಗೆ ಒಳಪಡುತ್ತದೆ. ಅಂದಾಜಿನ ಪ್ರಕಾರ ವರ್ಷಕ್ಕೆ ಅಬಕಾರಿ ಸುಂಕ 15 ಸಾವಿರ ಕೋಟಿ ರೂ.ಗೂ ಅಧಿಕವಿದ್ದು, ಅದರಲ್ಲಿ ವೈನ್‌ ಮಾರಾಟದಿಂದ ಬಂದ 200 ಕೋಟಿ ರೂ. ತೆರಿಗೆಯೂ ಸೇರಿದೆ. ವೈನ್‌ ದ್ರಾಕ್ಷಿ ತಳಿಯ 100 ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Advertisement

ಬೆಂಗಳೂರು ವೈನ್‌ ಹಬ್‌
ವೈನ್‌ ಮಾರುಕಟ್ಟೆಯಲ್ಲಿ ಬೆಂಗಳೂರು ವೈನ್‌ ಹಬ್‌ ಎಂದು ಹೇಳಲಾಗುತ್ತದೆ. ಶೇ.70 ವೈನ್‌ಗೆ ಬೆಂಗಳೂರೇ ಮಾರುಕಟ್ಟೆ. ಪ್ರತಿ ವರ್ಷ ವೈನ್‌ ಮಾರಾಟದಲ್ಲಿ ಸುಮಾರು 400ರಿಂದ 550 ಕೋಟಿ ರೂ. ವಹಿವಾಟು ಇಲ್ಲಿ ನಡೆಯುತ್ತದೆ. ಉಳಿದಂತೆ ಮಂಗಳೂರಿಗೆ 2ನೇ ಸ್ಥಾನ. ಬೆಳಗಾವಿ, ಕಾರವಾರ, ಬಳ್ಳಾರಿ, ಬಾಗಲಕೋಟೆ ಉಳಿದ ಸ್ಥಾನಗಳಲ್ಲಿದ್ದು, ಈ ಜಿಲ್ಲೆಗಳಲ್ಲೂ ಕೂಡ ವೈನ್‌ ಮಾರಾಟ ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಕೆಎಸ್‌ಬಿಸಿಎಲ್‌ ವರದಿ ಸ್ಪಷ್ಟಪಡಿಸಿದೆ.

ಕಳೆದ ವರ್ಷ ನೋಟು ಅಮಾನ್ಯಿàಕರಣದಿಂದ ವೈನ್‌ ವಹಿವಾಟು ನಷ್ಟ ಅನುಭವಿಸಿತ್ತು. ಈ ಬಾರಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡು ಬಂದಿದೆ. ಡಿಸೆಂಬರ್‌ನಲ್ಲಿ ಚಳಿ ಇರುವುದರಿಂದ ವೈನ್‌ ಮಾರಾಟವೂ ಹೆಚ್ಚು ಇರುತ್ತದೆ. ಆದ್ದರಿಂದ ಸುಮಾರು 12 ಲಕ್ಷ ಲೀ. ವೈನ್‌ ಮಾರಾಟದ ನಿರೀಕ್ಷೆಯಿದೆ.
– ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ದ್ರಾಕ್ಷಾರಸ ಮಂಡಳಿ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next