ಬೆಂಗಳೂರು: ರಾಜಧಾನಿಯ ಹಲವೆಡೆ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳ ಮೇಳಗಳನ್ನು ಆಯೋಜಿಸಿದ್ದ ಹಾಪ್‌ಕಾಮ್ಸ್ ಈ ಬಾರಿ ಕೇವಲ ಒಂದು ತಿಂಗಳಲ್ಲೇ ದಾಖಲೆಯ 1.60 ಕೋಟಿ ರೂ.ವಹಿವಾಟು ನಡೆಸಿದಿದೆ.
ಪ್ರತಿ ವರ್ಷ ನಗರದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾತ್ರ ನಡೆಯುತ್ತಿದ್ದ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳಗಳನ್ನು ಈ ಬಾರಿ ಹೊಸ ಪ್ರಯೋಗವಾಗಿ ಹೈಕೋರ್ಟ್ ಆವರಣ ಸೇರಿದಂತೆ ವಿವಿಧ ಕಂಪನಿಗಳ ಆವರಣ ಹಾಗೂ ಹಾರ್ಟಿ ಬಜಾರ್‌ನಲ್ಲೂ ಆಯೋಜಿಸಲಾಗಿತ್ತು. ಎಲ್ಲೆಡೆ ಮೇಳಗಳನ್ನು ಆಯೋಜಿಸಿದ ಪರಿಣಾಮವಾಗಿ ಕಡಿಮೆ ಆವಧಿಯಲ್ಲೇ ಹೆಚ್ಚಿನ ವಹಿವಾಟು ನಡೆಸಲು ಸಾಧ್ಯವಾಗಿದೆ.
ಅಲ್ಲದೇ ಸೂಪರ್ ಮಾರ್ಕೆಟ್ ಮಾದರಿಯ ಹಾರ್ಟಿ ಬಜಾರ್‌ಗಳಲ್ಲಿ ಒಂದು ತಿಂಗಳಲ್ಲಿ 1.50 ಟನ್ ದ್ರಾಕ್ಷಿ ಹಾಗೂ 3.5 ಟನ್ ಕಲ್ಲಂಗಡಿ ಮಾರಾಟವಾಗಿದೆ. ದ್ರಾಕ್ಷಿ ಸೀಜನ್ ಆರಂಭಕ್ಕೂ ಮೊದಲು ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ ಇತ್ಯಾದಿ ಕಡೆಗಳಿಂದ ದ್ರಾಕ್ಷಿ ಖರೀದಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಎಲ್ಲ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ದ್ರಾಕ್ಷಿ ಮೇಳ ಆರಂಭಿಸಿ ತಾಜಾ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲಾಗಿತ್ತು.
ಫೆ.14ಕ್ಕೆ ಆರಂಭವಾಗಿರುವ ದ್ರಾಕ್ಷಿ, ಕಲ್ಲಂಗಡಿ ಮೇಳ ಏಪ್ರಿಲ್, ಮೇ ತಿಂಗಳಲ್ಲಿಯೂ ಮುಂದುವರೆಯುವ ಲಕ್ಷಣಗಳಿದೆ. ಇದುವರೆಗೆ ಸ್ಥಳೀಯ ತಾಲೂಕುಗಳಿಂದ ದ್ರಾಕ್ಷಿ ಬಂ
ದಿಲ್ಲ. ಬಹುಶಃ ಮುಂದಿನ ವಾರದಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ದ್ರಾಕ್ಷಿ ಹಣ್ಣು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಇದುವರೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣ ಮುಂದಿನ ಎರಡು ತಿಂಗಳುಗಳ ಕಾಲ ಮೇಳ ಮುಂದುವರೆಸುವ ಕುರಿತು ಚಿಂತನೆ ನಡೆದಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್‌ಸಿಟಿಯಲ್ಲಿರುವ ಇನ್‌ಫೋಸಿಸ್ ಕ್ಯಾಂಪಸ್‌ನಲ್ಲಿ ಹಾಪ್‌ಕಾಮ್ಸ್ ಮಳಿಗೆಗೆ ಅನುಮತಿ ಸಿಕ್ಕಿದೆ. ಮಾ.21ರಂದು ಬೆಳಗ್ಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಮಳಿಗೆಗೆ ಚಾಲನೆ ನೀಡಿದ್ದು, ಇಲ್ಲೂ ಕೂಡ ದ್ರಾಕ್ಷಿ, ಕಲ್ಲಂಗಡಿ ಮೇಳ ನಡೆಯಲಿದೆ.
-ಡಾ.ಬೆಳ್ಳೂರು ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್
* ಸಂಪತ್ ತರೀಕೆರೆ