Advertisement

ಗಾಳಿ, ಭೋರ್ಗರೆಯುವ ಕಡಲು-ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಹಿನ್ನಡೆ

11:26 PM Jul 02, 2023 | Team Udayavani |

ಮಲ್ಪೆ : ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭ ವಾಗಿ ಸುಮಾರು 20 ದಿನ ಕಳೆದರೂ ಹೇಳಿಕೊಳ್ಳುವಂತಹ ಮೀನುಗಾರಿಕೆ ನಡೆಯದಿರುವುದು ಮೀನುಗಾರರಿಗೆ ಆತಂಕ ತಂದಿದೆ.

Advertisement

ಮಳೆಗಾಲದ ಅವಧಿಯಲ್ಲಿ ಔಟ್‌ಬೋರ್ಡ್‌ ಎಂಜಿನ್‌ ಅಳವಡಿಸಿದ ನಾಡ ದೋಣಿಗಳಲ್ಲಿ ಸೀಮಿತ ದೂರದವರೆಗೆ ಸಮುದ್ರದಲ್ಲಿ ಸಾಗಿ ಪಟ್ಟೆಬಲೆ, ಮಾಟುಬಲೆ, ಕಂತುಬಲೆಯಂತಹ ರಿಸ್ಕ್ನ ಮೀನುಗಾರಿಕೆ ನಡೆಯುತ್ತದೆ.

30-35 ಮಂದಿ ಮೀನುಗಾರರು ಸಹಕಾರ ತಣ್ತೀದಡಿ ನಡೆಸುವ ನಾಡದೋಣಿಗಳಿಗೆ (ಡಿಸ್ಕೋ) ಇದುವರೆಗೂ ಸಂಪಾದನೆ ಇಲ್ಲದೆ ನಷ್ಟದ ಹಾದಿಯಲ್ಲಿದೆ. ಮುಖ್ಯ ಕಾರಣ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕ ವಾತಾವರಣ ಇಲ್ಲದಿರುವುದು. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಇತರ ವರ್ಗದ ದೋಣಿಗಳೂ ಮೀನುಗಾರಿಕೆ ತೆರಳಿಲ್ಲ.
ಜೋರಾದ ಮಳೆಗೆ ಕಡಲಾಳದಲ್ಲಿ ತೂಫಾನ್‌ ಎದ್ದರೆ ಆಳದಲ್ಲಿರುವ ಮೀನುಗಳು ತೀರ ಪ್ರದೇಶದತ್ತ ಧಾವಿಸುವುದು ಸಾಮಾನ್ಯ. ದುರದೃಷ್ಟವೆಂದರೆ ಈ ಬಾರಿ ಅಂತಹ ತೂಫಾನ್‌ ಏಳದೆ ನಾಡದೋಣಿ ಮೀನುಗಾರರಿಗೆ ಭಾರೀ ನಿರಾಶೆ ಮೂಡಿಸಿದೆ. ಈ ಬಾರಿ ಆರಂಭದಲ್ಲಿ ಕಂತುಬಲೆ, ಪಟ್ಟಬಲೆಗೆ ಅಲ್ಪಸ್ವಲ್ಪ ಮೀನು ಮಾತ್ರ ಲಭಿಸಿದ್ದರೂ ಕಡಲಿನ ಅಬ್ಬರವೂ ಬಡ ಮೀನುಗಾರರನ್ನು ಕಂಗೆಡಿಸಿದೆ.

ತಾಜಾ ಮೀನು, ಸವಿರುಚಿ
ನಾಡದೋಣಿ ಮೀನುಗಾರಿಕೆಯಲ್ಲಿ ಸಿಗುವ ಮೀನುಗಳು ಶೀಘ್ರವಾಗಿ ದಡ ಸೇರುವುದರಿಂದ ತಾಜಾವಾಗಿದ್ದು, ಬಹುರುಚಿಕರವಾಗಿರುತ್ತವೆ. ಸಿಗಡಿ, ಬಂಗುಡೆ, ಬೂತಾಯಿ, ಮಣಂಗ್‌, ಬೊಳೆಂಜಿರ್‌ ಸಹಿತ ಕೊಡ್ಡೆಯಿ, ಅಡೆಮೀನು, ಖುರ್ಚಿ, ಸ್ವಾಡಿ ಇತ್ಯಾದಿ ಒಳಗೊಂಡ ಬೆರಕೆ ಮೀನುಗಳು ಮಳೆಗಾಲದಲ್ಲಿ ಇಂತಹ ಪಾರ್ಟ್‌ಟೈಮ್‌ ಮೀನು ಶಿಕಾರಿಯಲ್ಲಿ ಸಾಮಾನ್ಯವಾಗಿ ದೊರೆಯುತ್ತವೆ.

ಕುಂದಾಪುರದಲ್ಲೂ ಅದೇ ಸ್ಥಿತಿ
ಸಮುದ್ರದಲ್ಲಿ ತೂಫಾನ್‌ ಏಳದೇ ಇರುವುದರಿಂದ ಗಂಗೊಳ್ಳಿ, ಕೋಡಿ, ಮರವಂತೆ, ಕೊಡೇರಿ, ಮಡಿಕಲ್‌, ಅಳ್ವೆಗದ್ದೆ ಭಾಗದಲ್ಲಿ ಈ ಬಾರಿ ನಾಡದೋಣಿ ಮೀನುಗಾರಿಕೆ ಆರಂಭ ವಿಳಂಬವಾಗಲಿದೆ. ಜು. 6ರ ಅನಂತರ ಕೆಲವೆಡೆಗಳಲ್ಲಿ ಸಮುದ್ರ ಪೂಜೆ ನಡೆಯಲಿದ್ದು, ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಮೀನುಗಾರರು ಕಡಲಿಗಿಳಿಯುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

Advertisement

ವಾರದ ಹಿಂದೆ ಕೋಡಿ, ಗಂಗೊಳ್ಳಿ ಭಾಗದಲ್ಲಿ ಕಂಟಲೆ ದೋಣಿ (ಬೀಣಿ ಬಲೆ ದೋಣಿ)ಯವರು ಕಡಲಿಗಿಳಿದ್ದು, ಸಮುದ್ರ ಸ್ವಲ್ಪ ರಫ್‌ ಇದ್ದರೂ 2 ದಿನ ಬೂತಾಯಿ ಮೀನು ಹೇರಳವಾಗಿ ಸಿಕ್ಕಿತು. ಆ ಬಳಿಕ ಕಡಲಬ್ಬರ ಜೋರಾಗಿದ್ದರಿಂದ ಸ್ಥಗಿತಗೊಳಿಸಬೇಕಾಯಿತು. ಎರಡು ದಿನದ ಹಿಂದೆ ಮತ್ತೆ ಕಡಲಿಗಿಳಿದಿದ್ದು ಬಂಗುಡೆ ಸ್ವಲ್ಪ ಮಟ್ಟಿಗೆ ಸಿಕ್ಕಿತು. ಈಗ ಮತ್ತೆ ಕಡಲು ರಫ್‌ ಇರುವುದರಿಂದ ಇಳಿಯುವುದು ಕಷ್ಟ ಎನ್ನುವುದಾಗಿ ಕೋಡಿ ಭಾಗದ ನಾಡದೋಣಿ ಮೀನುಗಾರರು ಹೇಳುತ್ತಾರೆ.

ಚಂಡಮಾರುತದ ಪರಿಣಾಮ
ಕಡಲಾಳದಲ್ಲಿ ತೂಫಾನ್‌ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಆಗ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ.
ಆದರೆ ಈ ಬಾರಿ ಬಿಪರ್‌ ಜಾಯ್‌ ಚಂಡಮಾರುತದ ರೂಪದಲ್ಲಿ ಆರಂಭದಲ್ಲೇ ತೂಫಾನ್‌ ಆಗಿದೆ. ಈಗ ತೂಫಾನ್‌ ಏಳದೇ ಮೀನುಗಾರರು ಕಡಲಿಗಿಳಿದರೂ ಹೇರಳವಾಗಿ ಮೀನುಗಳು ಸಿಗುವುದಿಲ್ಲ.

ಈ ಬಾರಿ ಆರಂಭದಿಂದಲೂ ಸಮುದ್ರ ಬಿರುಸಾಗಿದ್ದು ನೀರಿನ ಒತ್ತಡದಿಂದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಪ್ರತೀದಿನ ಮೀನಿಲ್ಲದೆ ದೋಣಿಗಳು ವಾಪಸಾಗುತ್ತಿರುವುದರಿಂದ ಮೀನುಗಾರರು ನಷ್ಟಕ್ಕೀಡಾಗುತ್ತಿದ್ದಾರೆ. ಮಂದಿನ ದಿನಗಳಲ್ಲಿ ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
– ಸುಂದರ ಪಿ. ಸಾಲ್ಯಾನ್‌, ಅಧ್ಯಕ್ಷರು, ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

ಈ ಬಾರಿ ಮುಂಗಾರು ಕಡಿಮೆ. ಜತೆಗೆ ತೂಫಾನ್‌ ಇಲ್ಲದೆ ನಾಡದೋಣಿಗಳಿಗೆ ಯಾವುದೇ ಪ್ರಯೋಜನ ಆಗಿಲ್ಲ. ಮುಂದೆ ಉತ್ತಮ ಗಾಳಿ ಮಳೆಯಾಗಿ ತೂಫಾನ್‌ ಉಂಟಾದರೆ ಮಾತ್ರ ನಮಗೆ ಲಾಭವಾದೀತು.
– ವಾಸುದೇವ ಬಿ. ಕರ್ಕೇರ, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ನವಮಂಗಳೂರು ವಲಯ ಅಧ್ಯಕ್ಷ

ಜು. 5: ಬೊಬ್ಬರ್ಯ ದರ್ಶನ
ಮಲ್ಪೆಯ ಸಾಂಪ್ರದಾಯಿಕ ನಾಡದೋಣಿ, ನಾಡ ಟ್ರಾಲ್‌ದೋಣಿ, ನಾಡ ಕಂತುಬಲೆ ದೋಣಿ ಸಂಘಗಳ ಅಶ್ರಯದಲ್ಲಿ ಮತ್ಸéಸಂಪತ್ತಿಗಾಗಿ ಮೀನುಗಾರರ ಆರಾಧ್ಯ ದೈವ ಬೊಬ್ಬರ್ಯನನ್ನು ಜು. 5ರಂದು ಬೆಳಗ್ಗೆ ದರ್ಶನ ಸೇವೆ ನಡೆಸಿ ಪ್ರಾರ್ಥಿಸಲಾಗುವುದು. ಅಂದು ಮೀನುಗಾರಿಕೆಗೆ ಕಡ್ಡಾಯ
ರಜೆ ಸಾರಲಾಗಿದ್ದು ಬೊಬ್ಬರ್ಯ ದೈವದ ಅಭಯದ ನುಡಿಗಾಗಿ ಮೀನುಗಾರರು ಕಾತರದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next