Advertisement

ವಿಂಡೀಸ್‌ ಪ್ರವಾಸ: ರೋಹಿತ್‌ಗೆ ರೆಸ್ಟ್‌?

10:55 PM Jun 16, 2023 | Team Udayavani |

ಹೊಸದಿಲ್ಲಿ: ಮುಂಬರುವ ವೆಸ್ಟ್‌ ಇಂಡೀಸ್‌ ಸರಣಿ ವೇಳೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೊಂದು ದಟ್ಟವಾಗಿದೆ. 2 ಪಂದ್ಯಗಳ ಟೆಸ್ಟ್‌ ಸರಣಿ ಅಥವಾ 8 ಪಂದ್ಯಗಳ ಸೀಮಿತ ಓವರ್‌ಗಳ ಸರಣಿಯಿಂದ ಅವರನ್ನು ಹೊರಗುಳಿಸುವ ಬಗ್ಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಚಿಂತಿಸುತ್ತಿವೆ ಎಂದು ಮಂಡ ಳಿಯ ಮೂಲಗಳು ಪಿಟಿಐಗೆ ತಿಳಿಸಿವೆ.

Advertisement

ಭಾರತ ತಂಡ ಓವಲ್‌ನಲ್ಲಿ ನಡೆದ ಕಳೆದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಹೀನಾಯವಾಗಿ ಸೋತ ಬಳಿಕ ರೋಹಿತ್‌ ಶರ್ಮ ನಾಯಕತ್ವ ಮತ್ತು ತಂಡದ ಆಡಳಿತ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿದೆ. ಮೊದಲೇ ಐಸಿಸಿ ಟ್ರೋಫಿ ಬರಗಾಲದಲ್ಲಿರುವ ಟೀಮ್‌ ಇಂಡಿಯಾ, ಕಾಂಗರೂ ಪಡೆ ವಿರುದ್ಧ ಸ್ವಲ್ಪವೂ ಹೋರಾಟ ನೀಡದೆ ಶರಣಾಗಿತ್ತು. ಇದರಿಂದ ಸತತ ಎರಡೂ ಟೆಸ್ಟ್‌ ಫೈನಲ್‌ಗ‌ಳಲ್ಲಿ ಎಡವಿದ ಅವಮಾನಕ್ಕೆ ಗುರಿಯಾಗಬೇಕಾಯಿತು. ಅಲ್ಲದೇ ನಂ.1 ಟೆಸ್ಟ್‌ ಬೌಲರ್‌ ಆರ್‌. ಅಶ್ವಿ‌ನ್‌ ಅವರನ್ನು ಆಡುವ ಬಳಗದಿಂದ ಹೊರಗಿರಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು.

ನಾಯಕತ್ವದ ಹೊರೆ
ಸೋಲಿಗೆ ರೋಹಿತ್‌ ಶರ್ಮ ನಾಯಕತ್ವ ವೈಫ‌ಲ್ಯವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅವರ ಫಾರ್ಮ್, ಅವರ ಮೇಲಿನ ಒತ್ತಡವೂ ಭಾರತ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಆಗಾಗ ಹಾರ್ದಿಕ್‌ ಪಾಂಡ್ಯ ಟಿ20 ನಾಯಕತ್ವ ವಹಿಸಿ ದ್ದನ್ನು ಹೊರತುಪಡಿಸಿದರೆ ಎಲ್ಲ ಮಾದರಿಗಳಲ್ಲೂ ರೋಹಿತ್‌ ಅವರೇ ಟೀಮ್‌ ಇಂಡಿಯಾ ಚುಕ್ಕಾಣಿ ಹಿಡಿ ದಿದ್ದಾರೆ. ಜತೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕರೂ ಆಗಿದ್ದಾರೆ. ಇಲ್ಲಿಯೂ ರೋಹಿತ್‌ ಯಶಸ್ಸು ಕಂಡಿಲ್ಲ.
ಟೆಸ್ಟ್‌ ಫೈನಲ್‌ನಲ್ಲಿ ರೋಹಿತ್‌ ಗಳಿಸಿದ್ದು 15 ಹಾಗೂ 43 ರನ್‌ ಮಾತ್ರ. 16 ಐಪಿಎಲ್‌ ಪಂದ್ಯಗಳಲ್ಲಿ ಇವರ ಗಳಿಕೆ ಬರೀ 332 ರನ್‌. ಸರಾಸರಿ 20.75.

“ಐಪಿಎಲ್‌ ಮತ್ತು ಟೆಸ್ಟ್‌ ಫೈನಲ್‌ ವೇಳೆ ರೋಹಿತ್‌ ಶರ್ಮ ಜಡ್ಡುಗಟ್ಟಿದಂತೆ, ನಿರಂತರ ಕ್ರಿಕೆಟ್‌ನಿಂದ ಬಳಲಿದಂತೆ ಕಂಡುಬಂದಿದ್ದಾರೆ. ಹೀಗಾಗಿ ಅವರಿಗೆ ವೆಸ್ಟ್‌ ಇಂಡೀಸ್‌ ಪ್ರವಾಸದ ಒಂದು ಹಂತದಲ್ಲಿ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಯೋಚಿಸುತ್ತಿದೆ. ಒಂದೋ ಟೆಸ್ಟ್‌ ಸರಣಿ ಅಥವಾ ಸೀಮಿತ ಓವರ್‌ಗಳ ಸರಣಿಯಿಂದ ಅವರನ್ನು ಹೊರ ಗುಳಿಸಲಾಗುವುದು. ಆಯ್ಕೆ ಸಮಿತಿ ಸ್ವತಃ ರೋಹಿತ್‌ ಶರ್ಮ ಅವ ರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದು ಕೊಳ್ಳಲಿದೆ’ ಎಂಬುದಾಗಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಹಾನೆಗೆ ನಾಯಕತ್ವ?
ಒಂದು ವೇಳೆ ರೋಹಿತ್‌ ಶರ್ಮ ಅವರನ್ನು ವಿಂಡೀಸ್‌ ಟೆಸ್ಟ್‌ ಸರಣಿ ಯಿಂದ ಹೊರಗಿರಿಸಿದರೆ ನಾಯಕತ್ವ ಯಾರಿಗೆ ಎಂಬ ಪ್ರಶ್ನೆಯೇನೂ ಉದ್ಭವಿಸದು. ಅಜಿಂಕ್ಯ ರಹಾನೆ ಟೆಸ್ಟ್‌ ಪಂದ್ಯಕ್ಕೆ ಮರಳಿರುವುದರಿಂದ ಹಾಗೂ ಆಸ್ಟ್ರೇಲಿಯ ಎದುರಿನ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರಿಂದ ಇವರಿಗೆ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚು. ಹಿಂದೆ ಆಸ್ಟ್ರೇಲಿಯ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ತಂದಿತ್ತ ಖ್ಯಾತಿ ಇವರದ್ದಾಗಿದೆ. ರೋಹಿತ್‌ ಜತೆಗೆ ಸೀನಿಯರ್‌ಗಳಾದ ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಶಮಿ ಅವರಿಗೂ ವಿಂಡೀಸ್‌ ಪ್ರವಾಸದ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

Advertisement

ಒಂದು ವೇಳೆ ಸೀಮಿತ ಓವರ್‌ಗಳ ಸರಣಿ ವೇಳೆ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಿದರೆ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ವೆಸ್ಟ್‌ ಇಂಡೀಸ್‌ ಪ್ರವಾಸ ದೊಂದಿಗೆ ಭಾರತದ 3ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತಿ ಆರಂಭವಾಗಲಿದೆ. ಈ ಆವೃತ್ತಿಯುದ್ದಕ್ಕೂ ಉತ್ತಮ ಪ್ರದರ್ಶ ನವನ್ನು ಕಾಯ್ದುಕೊಂಡು ಬರುವ ನೂತನ ಟೆಸ್ಟ್‌ ತಂಡವನ್ನು ಕಟ್ಟುವ ಬಗ್ಗೆಯೂ ಯೋಚಿಸಲಾಗುತ್ತಿದೆ. ವರ್ಷಾಂತ್ಯ ಭಾರತದ ಆತಿಥ್ಯದಲ್ಲೇ ಏಕದಿನ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಇಲ್ಲಿನ ಯಶಸ್ಸಿಗೂ ಸಮರ್ಥ ನಾಯಕತ್ವದ ಅಗತ್ಯವಿದೆ. ಆಯ್ಕೆ ಸಮಿತಿ ಕೂಡ ಒತ್ತಡದಲ್ಲಿ ಮುಳುಗಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next