ಜಾರ್ಜ್‌ಟೌನ್: ಸುದೀರ್ಘ ಐಪಿಎಲ್ ಲೀಗ್‌ನಲ್ಲಿ ಕೆಲವೊಮ್ಮೆ ವಿದೇಶಿ ಕ್ರಿಕೆಟಿಗರನ್ನು ಹೆಚ್ಚು ಅವಲಂಬಿಸುವುದು ಎಡವಟ್ಟಿಗೆ ಕಾರಣವಾಗುತ್ತದೆ.
ಕಾರಣ, ದೇಶಿ ಅಥವಾ ಅಂತಾರಾಷ್ಟ್ರೀಯ ಸರಣಿ ಮೊದಲ್ಗೊಂಡ ಕೂಡಲೇ ಇವರೆಲ್ಲ ಐಪಿಎಲ್‌ನಿಂದ ನಿಧಾನವಾಗಿ ಜಾಗ ಖಾಲಿ ಮಾಡುತ್ತಾರೆ. ಇವರಲ್ಲಿ ಆಸ್ಟ್ರೇಲಿಯನ್ನರು ಸದಾ ಮುಂದೆ!
ಇದೀಗ ವೆಸ್ಟ್ ಇಂಡೀಸ್ ಕಡೆಯಿಂದ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. 2022ರ ಐಪಿಎಲ್‌ನಲ್ಲಿ ಆಡಲಿರುವ ಕೆರಿಬಿಯನ್ ನಾಡಿನ ಅಷ್ಟೂ ಕ್ರಿಕೆಟಿಗರು ಪೂರ್ತಿ ಅವಧಿಗೆ ಲಭ್ಯರಿರುತ್ತಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಗ್ಯಾರಂಟಿ ನೀಡಿದೆ.
“ಐಪಿಎಲ್‌ಗಾಗಿಯೇ ವೆಸ್ಟ್ ಇಂಡೀಸ್ ಅವಕಾಶವೊಂದನ್ನು ನಿರ್ಮಿಸಿದೆ. ಸಾಮಾನ್ಯವಾಗಿ ಈ ವೇಳೆ ಯಾವುದೇ ಅಂತಾರಾಷ್ಟ್ರೀಯ ಸರಣಿಗಳನ್ನು ಇರಿಸಿಕೊಳ್ಳುವುದಿಲ್ಲ. ಈ ಸಲವೂ ಅಷ್ಟೇ. ಹೀಗಾಗಿ ನಮ್ಮ ಆಟಗಾರರು ಪೂರ್ತಿ ಐಪಿಎಲ್ ಅವಧಿಯನ್ನು ಪೂರೈಸಬಹುದಾಗಿದೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕ್ಕಿ ಸ್ಕೆರಿಟ್ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ. ಜತೆಗೆ ಐಪಿಎಲ್‌ನಲ್ಲಿ ಆಡಲಿರುವ ಎಲ್ಲ ವಿಂಡೀಸ್ ಕ್ರಿಕೆಟಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಪೀಟರ್‌ಸನ್, ಹೀತರ್ ನೈಟ್ ಐಸಿಸಿ ತಿಂಗಳ ಕ್ರಿಕೆಟಿಗರು
ನಿಕೋಲಸ್ ಪೂರಣ್, ಜೇಸನ್ ಹೋಲ್ಡರ್, ಕೈರನ್ ಪೊಲಾರ್ಡ್, ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್ ಸೇರಿದಂತೆ ವೆಸ್ಟ್ ಇಂಡೀಸ್‌ನ 14 ಆಟಗಾರರು 2022ರ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.