ಬರಗೂರು: ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಪೂಜಾರಮುದ್ದನ ಹಳ್ಳಿ, ಕಲ್ಲಹಳ್ಳಿ, ರಾಗಲಹಳ್ಳಿ, ಕರೇಕ್ಯಾತನ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ನೂರಾರು ಅಡಕೆ, ತೆಂಗು, ಮಾವು, ದಾಳಿಂಬೆ ಮರಗಳು ನೆಲ ಕಚ್ಚಿದ್ದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಸತ್ಯ ನಾರಾಯಣ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.
ಪೂಜಾರಮುದ್ದನಹಳ್ಳಿ ರೈತ ಬಿ. ಚಂದ್ರಪ್ಪ, ತಿಮ್ಮಣ್ಣ, ಹನುಮಂತರಾಯ ಪ್ಪರಿಗೆ ಸೇರಿದ ಸ.ನಂ 6ರಲ್ಲಿ ಬೆಳೆದಿದ್ದ ಸುಮಾರು 200 ಅಡಕೆ ಮರ, 20 ತೆಂಗಿನ ಮರ, 20 ನಿಂಬೆ ಗಿಡಗಳು ಸೇರಿದಂತೆ ಫಸಲಿಗೆ ಬಂದಿದ್ದ ವೀಳ್ಯದೆಲೆ ಬಿರುಗಾಳಿ ಮಳೆಗೆ ಸಿಲುಕಿ ನೆಲಕಚ್ಚಿದೆ. ಇದೇ ಗ್ರಾಮದ ಮುದ್ದಮ್ಮ ಕ್ಯಾತಪ್ಪಅವರ 300ಕ್ಕೂ ಹೆಚ್ಚು ದಾಳಿಂಬೆ ಗಿಡಗಳು ಮುರಿದು ಬಿದ್ದಿವೆ.
ಶ್ರೀ ಸಿದಾರೂಢ ಮಠದ ಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಭೋಜನಾ ಮಂದಿರದ ಶೀಟುಗಳು ಬಿರು ಗಾಳಿಗೆ ಹಾರಿ ಹೋಗಿದ್ದು, ಪಂಚವೃಕ್ಷ ಲಿಂಗದ ಜಂಬು ನೇರಳೆ, ಅರಳಿ, ಬೇವು, ಬಿಲ್ವಪತ್ರೆ ಮರಗಳ ಕೊಂಬೆಗಳು ಮುರಿದಿವೆ. ಕರೇಕ್ಯಾತನಹಳ್ಳಿಯ ಆರತಿ ವೀರಪ್ಪ ಬೆಳೆದಿದ್ದ ಪಪ್ಪಾಯಿ, ಮಾವು ಸೇರಿದಂತೆ ಹಲವು ಮರಗಳು ನೆಲಕಚ್ಚಿವೆ.
ಕಲ್ಲಹಳ್ಳಿಯ ಸಿದ್ದಪ್ಪ ಅವರಿಗೆ ಸೇರಿದ 100 ಅಡಕೆ ಮರಗಳು ಧರೆಗುರುಳಿವೆ. ಹಾನಿ ಸ್ಥಳಕ್ಕೆ ಶಾಸಕ ಬಿ.ಸತ್ಯ ನಾರಾಯಣ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಅನಿರೀಕ್ಷಿತವಾಗಿ ಬಂದಂತಹ ಬಿರುಗಾಳಿಯಿಂದ ಅಪಾರ ಹಾನಿ ಉಂಟಾಗಿರುವುದು ದುರದೃಷ್ಟಕರ ಸಂಗತಿ. ಕೊರೊನಾ ಸೋಕು ವಿಚಾರ ದಲ್ಲಿ ಈಗಾಗಲೇ ರೈತ ಕಂಗಾಲಾಗಿದ್ದು ಈ ಸಂದರ್ಭ ದಲ್ಲಿ ಇಷ್ಟೊಂದು ಹಾನಿಯಾಗಿ ರೈತರಿಗೆ ತೀವ್ರ ತಪಂದರೆ ಯಾಗಿರುವುದು ನನಗೆ ಅರಿವಾಗಿದೆ.
ಅಧಿಕಾರಿಗಳು ರೈತರ ತೋಟ, ಜಮೀನುಗಳಿಗೆ ಮತ್ತೂಮ್ಮೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಕೊಡಿಸುವ ಬಗ್ಗೆ ಕಾಳಜಿವಹಿಸಬೇಕು ಎಂದರು.