Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗಾಳಿ-ಮಳೆ; ಹಲವೆಡೆ ಹಾನಿ

12:53 AM Jul 16, 2022 | Team Udayavani |

ಮಂಗಳೂರು: ಮುಂಗಾರು ಮತ್ತೆ ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ.

Advertisement

ಮಂಗಳೂರು ನಗರದಲ್ಲಿ ಆಗಾಗ್ಗೆ ಮಳೆಯಾಗಿದೆ. ನಂತೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರವೊಂದು ಬಿದ್ದು ಸ್ವಲ್ಪ ಕಾಲ ಸಂಚಾರಕ್ಕೆ ತೊಂದರೆ ಯಾಗಿತ್ತು. ಬೋಳೂರು, ಅಳಪೆ, ಕಾಪಿಕಾಡ್‌ ಬಳಿಯೂ ಮರಗಳು ಧರಾಶಾಯಿ ಯಾಗಿವೆ. ಕಪಿತಾನಿಯೋ ಬೋರ್ಡ್‌ ಶಾಲಾ ಹಿಂಬದಿ ಮರವೊಂದು ಬಿದ್ದು, ವಿದ್ಯುತ್‌ ಕಂಬ ಮತ್ತು ಕೆಲ ವಾಹನಗಳಿಗೆ ಹಾನಿಯಾಗಿದೆ. ಕದ್ರಿ ಮಲ್ಲಿಕಟ್ಟೆಯಲ್ಲಿ ಹೋರ್ಡಿಂಗ್‌ವೊಂದು ಪಾರ್ಕ್‌ ಮಾಡಲಾಗಿದ್ದ ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿದೆ.

ಬಂಟ್ವಾಳದ ಕೊಡಾಜೆಯಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ಸುಮಾರು 7ಕ್ಕೂ ಅಧಿಕ ಮನೆಗಳಿಗೆ ಗುಡ್ಡ ಕುಸಿದು ಹಾನಿಯಾಗಿದೆ. ಮುಂಡಾಜೆ ಕಾಪು ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಸಹಿತ ವಿವಿಧೆಡೆ ಮರ ಬಿದ್ದ ಪರಿಣಾಮ 24 ವಿದ್ಯುತ್‌ ಕಂಬಗಳು ತುಂಡಾಗಿವೆ. ಕಳೆದ 60 ಗಂಟೆಯಿಂದ ವಿದ್ಯುತ್‌ ಇಲ್ಲದೆ ಇನ್ವರ್ಟರ್‌ಖಾಲಿ, ಇಂಟರ್ನೆಟ್‌ ಸ್ತಬ್ಧಗೊಂಡಿದೆ.

ಮಲವಂತಿಗೆಯಲ್ಲಿ ಸ್ಫೋಟದ ಸದ್ದು
ಮಲವಂತಿಗೆ ಗ್ರಾಮದ ಬಲ್ಲರಾಯನ ದುರ್ಗ ವ್ಯಾಪ್ತಿಯಲ್ಲಿ ಭೂಕುಸಿತದ ಸದ್ದು ಕೇಳಿಬಂದಿದ್ದು, ಅಲ್ಲಿನ 16 ಮನೆಗಳ ಜನರು ಭಯಭೀತರಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ವಿದ್ಯುತ್‌ ಕಂಬ ಗಳಿಗೆ ಹಾನಿ ಉಂಟಾಗಿದ್ದು, ಹಲವು ಕಡೆಗ ಳಲ್ಲಿ ವಿದ್ಯುತ್‌ ಇರಲಿಲ್ಲ.

ಮುಂದುವರಿದ ಕಡಲ್ಕೊರೆತ
ಉಚ್ಚಿಲದ ಬಟ್ಟಪ್ಪಾಡಿ ಮತ್ತು ಉಳ್ಳಾಲದ ಸೀ ಗ್ರೌಂಡ್‌ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರಿದಿದೆ.ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾಲೂÕರು, ಕಲ್ಮಕಾರು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬಂಟ್ವಾಳ, ಕನ್ಯಾನ, ಸುರತ್ಕಲ್‌, ಉಳ್ಳಾಲ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

Advertisement

ಉಪ್ಪಿನಂಗಡಿ: ತಗ್ಗಿದ ನೆರೆ ನೀರು
ನದಿಗಳ ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಯಲ್ಲಿ ನೆರೆ ನೀರಿನ ಪ್ರಮಾಣ ಇಳಿಮುಖಗೊಂಡು ತಟದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.

ಕರಾವಳಿಯಲ್ಲಿ 4 ದಿನ “ಎಲ್ಲೋ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಜು. 16ರಿಂದ 19ರ ವರೆಗೆ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗಲಿದ್ದು, ಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವ ಸಾಧ್ಯತೆ ಇದೆ.

ಡಿಸಿ ಗ್ರಾಮ ವಾಸ್ತವ್ಯ ರದ್ದು
ಮಂಗಳೂರು: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಬಿಡುವಿಲ್ಲದ ಚಟುವಟಿಕೆಗಳಿರುವುದರಿಂದ ದ.ಕ., ಉಡುಪಿ ಸೇರಿದಂತೆ ಮಳೆ ಬಾಧಿತ ಜಿಲ್ಲೆಗಳಲ್ಲಿ ಜುಲೈ ತಿಂಗಳ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸರಕಾರ ವಿನಾಯಿತಿ ನೀಡಿದೆ. ದ.ಕ.ದ ಮೂಲ್ಕಿಯ ಪಂಜದಲ್ಲಿ ಗ್ರಾಮ ವಾಸ್ತವ್ಯ ಆಯೋಜಿಸಲಾಗಿತ್ತು.

ಉಡುಪಿಯಲ್ಲಿ ಸಾಧಾರಣ ಮಳೆ
ಉಡುಪಿ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ, ಶುಕ್ರವಾರ ಸಾಧಾರಣ ಮಳೆಯಾಗಿದೆ. ಕಾಪು, ಪಡುಬಿದ್ರಿ, ಕುಂದಾಪುರ, ಕಾರ್ಕಳ, ಹೆಬ್ರಿ, ಅಜೆಕಾರು, ಸಿದ್ದಾಪುರ, ಬೈಂದೂರು, ಕುಂದಾಪುರ, ಉಡುಪಿ ಭಾಗದಲ್ಲಿ ಬಿಸಿಲ ವಾತಾವರಣದೊಂದಿಗೆ ಹಲವೆಡೆ ಬಿಟ್ಟುಬಿಟ್ಟು ಮಳೆಯಾಗಿದೆ.

ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕ್ಷೀಣಿಸಿದ್ದರೂ ಗಾಳಿ ಮಳೆಗೆ ಹಲವಡೆ ಹಾನಿ ಪ್ರಮಾಣ ಮುಂದುವರಿದಿದೆ. ಬ್ರಹ್ಮಾವರ ತಾಲೂಕಿನಲ್ಲಿ 4,ಕಾರ್ಕಳ 1, ಬೈಂದೂರಿನಲ್ಲಿ 3, ಕಾಪು, ಉಡುಪಿ ತಾಲೂಕಿನಲ್ಲಿ 3 ಮನೆಗಳಿಗೆ ಹಾನಿ ಸಂಭವಿಸಿದೆ.

ಕೊಚ್ಚಿ ಹೋದ ಕಾಲುಸಂಕ; ಮಹಿಳೆಯ ರಕ್ಷಣೆ
ಕೊಲ್ಲೂರು: ಕೊಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಳ್ಳಿಬೇರು – ಕುಮ್‌ಕೋಡು ನಡುವಿನ ಹೊಳೆಗೆ ನಿರ್ಮಿಸಿದ್ದ ಮರದ ಕಾಲುಸಂಕವು ಶುಕ್ರವಾರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಆ ಭಾಗದ ನಿವಾಸಿಗಳು ಜಲ ದಿಗ್ಬಂಧನಕ್ಕೊಳಗಾಗಿದ್ದಾರೆ.

ಈ ಘಟನೆಗೆ ಸ್ವಲ್ಪ ಮೊದಲು ಅದೇ ಸಂಕವನ್ನು ದಾಟುತ್ತಿದ್ದ ಮಹಿಳೆಯೊಬ್ಬರು ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸ್ಥಳೀಯರು ರಕ್ಷಿಸಿದರು.

ಈ ಪ್ರದೇಶದಲ್ಲಿ 50ಕ್ಕೂ ಅಧಿಕ ಜನರು ನೆಲೆಸಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಜೀವ ನೋಪಾಯಕ್ಕಾಗಿ ಹೊರಗೆಲ್ಲೂ ಹೋಗಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಗುಂಬೆ ಘಾಟಿಯಲ್ಲಿ ಸಂಚಾರ ವ್ಯತ್ಯಯ
ಶುಕ್ರವಾರ ಸಂಜೆ ವೇಳೆ ಆಗುಂಬೆ ಘಾಟಿ ಮೂರನೇ ತಿರುವಿನಲ್ಲಿ ಬೃಹತ್‌ ಮರ ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಬ್ಲಾಕ್‌ ಆಗಿತ್ತು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಸಂಚರಿಸಬೇಕಿದ್ದ ಆ್ಯಂಬುಲೆನ್ಸ್‌ಗಳು ಪರದಾಡುವಂತಾಯಿತು. ಅರಣ್ಯ ಇಲಾಖೆಯವರು ಮರದ ಗೆಲ್ಲುಗಳನ್ನು ಕತ್ತರಿಸಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಮರ ತೆರವುಗೊಳಿಸುವವರೆಗೆ ಸೋಮೇಶ್ವರ ಮತ್ತು ಆಗುಂಬೆ ಗೇಟ್‌ ಬಳಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು.

ಹಾಗೆಯೇ ರಾ.ಹೆ. 169ಎ ಕೆಳಪರ್ಕಳದ ಇಳಿಜಾರಿನಲ್ಲಿ ಬೃಹತ್‌ ಲಾರಿಯೊಂದು ಕೆಲಕಾಲ ನಿಂತ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಸಮಸ್ಯೆಗೀಡಾದರು.

ಕೊಡಗು: ನಿರಂತರ ಮಳೆ; 174 ಕುಟುಂಬ ಸ್ಥಳಾಂತರ
ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣ ಅಪಾಯದಂಚಿನಲ್ಲಿದ್ದ 174 ಕುಟುಂಬಗಳ 556 ಮಂದಿ ಸ್ಥಳಾಂತರ ಗೊಂಡಿದ್ದಾರೆ. ನಾಲ್ಕು ಕಾಳಜಿ ಕೇಂದ್ರಗಳಲ್ಲಿ 122 ಕುಟುಂಬಗಳ 353 ಮಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಮಾಹಿತಿ ನೀಡಿದ್ದಾರೆ.

ಕರ್ನಾಟಕ-ಕೇರಳ ಸಂಪರ್ಕಿಸುವ ವೀರಾಜಪೇಟೆ-ಮಾಕುಟ್ಟ ರಸ್ತೆಗೆ ಪಡರುಂಬಾಡಿಯಲ್ಲಿ ಬಿದ್ದ ಮರವನ್ನು ತೆರವುಗೊಳಿಸಿ, ಸಂಚಾರವನ್ನು ಸುಗಮ ಗೊಳಿಸಲಾಗಿದೆ. ಶನಿವಾರಸಂತೆ ಹೋಬಳಿಯಲ್ಲಿ ಹಸುವೊಂದು ಭಾರೀ ಗಾಳಿ ಮಳೆಯಿಂದಾಗಿ ಸಾವನ್ನಪ್ಪಿದ್ದು, ಮತ್ತೊಂದು ತೀವ್ರ ಅಸ್ವಸ್ಥವಾಗಿರುವ ಘ‌ಟನೆ ನಡೆದಿದೆ. ಇದುವರೆಗೆ 17 ಜಾನುವಾರುಗಳು ಮೃತಪಟ್ಟಿದ್ದು, ನಾಲ್ಕು ಪ್ರಕರಣ ಗಳಿಗೆ ಪರಿಹಾರ ವಿತರಿಸಲಾಗಿದೆ. 4 ಮನೆಗಳು ಸಂಪೂರ್ಣ 33 ಮನೆಗಳು ತೀವ್ರವಾಗಿ, 143 ಮನೆಗಳು ಭಾಗಶಃ ಹಾನಿಗೀಡಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next