Advertisement

ಗಾಳಿ -ಮಳೆಗೆ ಕೊಡಗು, ಮಲೆನಾಡು, ಕರಾವಳಿ ತತ್ತರ

06:15 AM Jul 16, 2018 | |

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯ ಅಬ್ಬರಕ್ಕೆ ಮಲೆನಾಡು,ಕರಾವಳಿ, ಕೊಡಗು ತತ್ತರಿಸಿ ಹೋಗಿವೆ. ಗಾಳಿಯ ರಭಸಕ್ಕೆ ನೂರಾರು ಮರಗಳು ಬಿದ್ದು, ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌, ಕಂಬಗಳು ಹಾಗೂ ಹಲವು ಮನೆಗಳು ಹಾನಿಗೊಳಗಾಗಿವೆ.

Advertisement

ಮಡಿಕೇರಿ ಸಮೀಪದ ಮಾದಾಪುರ ಬಳಿ ಶಾಸಕ ಅಪ್ಪಚ್ಚು ರಂಜನ್‌ರ ನಿವಾಸದ ಬಳಿ ಭಾರೀ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ- ಸೋಮವಾರಪೇಟೆ ಮಾರ್ಗವಾಗಿ ಬರುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್ಸು ಕೂದಲೆಳೆಯ ಅಂತರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿತು.

ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಪರಮೇಶ್ವರ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದಿದೆ. ತಾಲೂಕಿನ ಭಕ್ತರಹಳ್ಳಿ, ಆನೆಗುಂಡಿ ಭೂತಪ್ಪ ದೇವಾಲಯ ಬಳಿ 6ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿ ಬಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಮರೆಬೈಲ್‌ನಲ್ಲಿ ಮನೆ ಮೇಲೆ ಮರ ಬಿದ್ದು, ಮಹಿಳೆಯೊಬ್ಬಳು ಗಾಯಗೊಂಡಿದ್ದಾಳೆ.ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 1.20 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮ ಕ್ಷೇತ್ರವಾದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ದತ್ತಾತ್ರೇಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಜಲಾವೃತಗೊಂಡಿವೆ.

ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 1,28,000 ಕ್ಯೂಸೆಕ್‌ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಈ ಮಧ್ಯೆ, ವರದಾ ನದಿಯಲ್ಲಿ ಲಾರಿಯೊಂದಿಗೆ ನದಿಗೆ ಬಿದ್ದು ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಭಾನುವಾರ ಕುಣಿಮೆಹಳ್ಳಿ ಸೇತುವೆ ಬಳಿ ಪತ್ತೆಯಾಗಿದೆ. ಬಸವರಾಜ ಸೋಮಣ್ಣನವರ (29) ಮೃತ ವ್ಯಕ್ತಿ. ಇನ್ನೂ ಎರಡು ದಿನಗಳು ಕರಾವಳಿ ಮತ್ತು
ಒಳನಾಡಿನ ಆಯ್ದ ಭಾಗಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಜೋಗ ವೀಕ್ಷಣೆ: ಜೋಗ ಜಲಪಾತ ಮೈದುಂಬಿದ್ದು, ಭಾನುವಾರ ಒಂದೇ ದಿನ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬ್ರಿಟಿಷ್‌ ಬಂಗ್ಲೆಯ ಭಾಗದಿಂದ ಜಲಪಾತ ವೀಕ್ಷಿಸುವವರಿಗೆ ಮಳೆಗಾಲದ ಸೃಷ್ಟಿಯಾದ ಕೆಪ್ಪ ಜೋಗ ಬೋನಸ್‌ ಆಗಿ ಮನ ಸೆಳೆಯಿತು. ಭಾನುವಾರ ಒಂದೇ ದಿನ ಪ್ರವೇಶ ಶುಲ್ಕವೇ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ.
ರಂಗನತಿಟ್ಟು ಜಲಾವೃತ: ಕೆಆರ್‌ಎಸ್‌ನಿಂದ 65 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದ್ದು, ಕೆಆರ್‌ಎಸ್‌ನಿಂದ ಶಿಂಷಾವರೆಗಿನ ಅನೇಕ ಸ್ಥಳಗಳಲ್ಲಿ ಜಲಚರ ಪಕ್ಷಿಗಳ ಸಹಸ್ರಾರು ಗೂಡುಗಳು ಕೊಚ್ಚಿ ಹೋಗಿವೆ. ಕೆಆರ್‌ ಎಸ್‌ ಬೃಂದಾವನ ಗಾರ್ಡನ್‌ಗೆ ಪ್ರವೇಶ ನಿಷೇಧಿಸಲಾಗಿದೆ.

ರಂಗನ ತಿಟ್ಟು ಜಲಾವೃಗೊಂಡಿದ್ದು, ದೋಣಿ ವಿಹಾರ ನಿಷೇಧಿಸಲಾಗಿದೆ. ಶ್ರೀರಂಗ ಪಟ್ಟಣದ ಗೌತಮ ಕ್ಷೇತ್ರ ದ್ವೀಪ ದಂತಾಗಿದ್ದು, ಸ್ವಾಮೀಜಿಗಳು ಮಠದಿಂದ ಹೊರ ಬರಲು ಸಾಧ್ಯವಾಗದೇ ಅಲ್ಲೇ ಉಳಿದಿದ್ದಾರೆ.

ಹೊರಹರಿವು ಹೆಚ್ಚಾಗಿರುವುದರಿಂದ ನದಿ ಪಾತ್ರದ ಪ್ರತಿಯೊಂದು ಗ್ರಾಮದಲ್ಲಿ ಟಾಂ ಟಾಂ ಹೊಡೆಸುವುದರ ಮೂಲಕ ಮುನ್ನೆಚ್ಚರಿಕೆ ನೀಡುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕಾಲುಸಂಕ ದಾಟುವಾಗ ಬಿದ್ದು ಸಾವು: ಮರದ ಕಾಲುಸಂಕ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಸನಗರ ತಾಲೂಕಿನ ಮುಂಬಾರು ವಾಸಿ ಕೂಲಿ ಕಾರ್ಮಿಕ ವೆಂಟಕ ನಾಯ್ಕ (65) ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next