Advertisement

ಕಪ್ಪತ್ತಗುಡ್ಡಕ್ಕೆ ವಿಂಡ್‌ ಫ್ಯಾನ್‌ಗಳೇ ಕಂಟಕ?

01:02 PM Feb 19, 2020 | Suhan S |

ಗದಗ: ಅಪರೂಪದ ಔಷಧೀಯ ಸಸ್ಯ ಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸರಕಾರ ಇತ್ತೀಚೆಗೆ ವನ್ಯಜೀವಿ ಧಾಮವೆಂದು ಘೋಷಿಸಿದ್ದು, ಇಲಾಖೆಯೂ ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಬೇಸಿಗೆಯಲ್ಲಿ ಕಪ್ಪತ್ತಗಿರಿಗೆ ಇಲ್ಲಿನ ವಿಂಡ್‌ ಫ್ಯಾನ್‌ಗಳೇ ಕಂಟಕವಾಗಿ ಪರಿಣಮಿಸುತ್ತಿವೆ. ಪವನ ವಿದ್ಯುತ್‌ ರೆಕ್ಕೆಗಳಿಂದ ಹೊಮ್ಮುವ ಕಿಡಿಗಳು ಹಾಗೂ ಜನರ ಮೂಢನಂಬಿಕೆಗಳು ಕಪ್ಪತ್ತಗಿರಿಯಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿವೆ.

Advertisement

ಸುಮಾರು 80 ಸಾವಿರ ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಮೈಯೊಡ್ಡಿರುವ ಕಪ್ಪತ್ತಗಿರಿಯಲ್ಲಿ ನೂರಾರು ಬಗೆಯ ಅಪರೂಪದ ಔಷಧೀಯ ಸಸ್ಯಗಳಿವೆ. ಅನೇಕ ಬಗೆಯ ವನ್ಯಜೀವಿಗಳು ಇಲ್ಲಿ ಆಶ್ರಯ ಪಡೆದಿವೆ. ಆದರೆ, ಬೇಸಿಗೆಯಲ್ಲಿ ಕಪ್ಪತ್ತಗಿರಿಯಲ್ಲಿ ನೆತ್ತಿ ಸುಟ್ಟರೆ ಉತ್ತಮ ಮಳೆಯಾಗುತ್ತದೆ. ಕಪ್ಪತ್ತಮಲ್ಲಯ್ಯ ದೇವರ ದರ್ಶನದ ಬಳಿಕ ಅರಣ್ಯದಲ್ಲಿ ಬೆಂಕಿ ಹಚ್ಚಿದರೆ ಸಂತಾನವಾಗುತ್ತದೆ ಎಂಬ ಮೂಢ ನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ ಎಂಬುದು ನೋವಿನ ಸಂಗತಿ.

ಕಪ್ಪತ್ತಗುಡ್ಡಕ್ಕೆ ಪವನ ವಿದ್ಯುತ್‌ ಕಂಟಕ?: ಕೆಲ ಕಿಡಿಗೇಡಿಗಳ ಕೃತ್ಯ ಹಾಗೂ ಅದಕ್ಕಿಂತ ಮಿಗಿಲಾಗಿ ಕಪ್ಪಗಿರಿ ಶಿಖರದಲ್ಲಿ ತಲೆ ಎತ್ತಿರುವ ಪವನ ವಿದ್ಯುತ್‌ ಫ್ಯಾನ್‌ಗಳ ರೆಕ್ಕೆಗಳಿಂದ ಹೊರಹೊಮ್ಮುವ ಕಿಡಿಗಳಿಂದಲೇ ಕಪ್ಪತ್ತಗುಡ್ಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತದೆ. ಕೆಪಿಸಿಎಲ್‌, ಎನರ್ಕಾನ್‌, ವಿಂಡ್‌ ವರ್ಲ್ಡ್, ಸುಜಲಾನ್‌ ಸೇರಿದಂತೆ ಇನ್ನಿತರೆ ಕಂಪನಿಗಳ ಸುಮಾರು 250ಕ್ಕೂ ಹೆಚ್ಚು ಪವನ ವಿದ್ಯುತ್‌ ಫ್ಯಾನ್‌ ಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿವೆ. ಆದರೆ, ಅವುಗಳ ರೆಕ್ಕೆಗಳು, ಅವುಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ ತಂತಿಗಳು, ಅಲ್ಲಿನ ವಿದ್ಯುತ್‌ ಪರಿವರ್ತಕಗಳಿಂದ ಆಗೊಮ್ಮೆ- ಈಗೊಮ್ಮೆ ಕಿಡಿಗಳು ಬೀಳುತ್ತಿದ್ದು, ಬಹುತೇಕ ಅಗ್ನಿ ಅವಘಡಗಳಿಗೆ ಪವನ ವಿದ್ಯುತ್‌ ಘಟಕಗಳೇ ಕಾರಣ. ಈ ಕುರಿತು ಹಲವು ಸಂಶೋಧನಾ ವರದಿಗಳಲ್ಲಿ ಉಲ್ಲೇಖೀಸಲಾಗಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಪ್ರತೀ ವರ್ಷಕ್ಕಿಂತ ಈ ಬಾರಿ ಕಪ್ಪತ್ತಗುಡ್ಡದಲ್ಲಿ ಔಷಧೀಯ ಸಸ್ಯಗಳೊಂದಿಗೆ ಹುಲ್ಲು ಹುಲುಸಾಗಿ ಬೆಳೆದಿದೆ. ಅದರಲ್ಲೂ ಕಳೆದ ಆಗಸ್ಟ್‌ ನಂತರ ಹೆಚ್ಚು ಮಳೆಯಾಗಿದ್ದರಿಂದ ಇನ್ನೂ ಕಪ್ಪತ್ತಗುಡ್ಡದ ಹಲವೆಡೆ ಭಾದೆ ಹುಲ್ಲು ಹಸಿರಾಗಿದೆ. ಕೆಲವೆಡೆ ಭಾದೆ ಹುಲ್ಲು ಒಣಗಿ ನಿಂತಿದೆ. ಆ ಪೈಕಿ ಮೊನ್ನೆ ಉಂಟಾದ ಅಗ್ನಿ ಅನಾಹುತವು ವಿಂಡ್‌ ಫ್ಯಾನ್‌ನಿಂದ ಸಂಭವಿಸಿದ್ದು ಎನ್ನಲಾಗಿದ್ದು, ಅರಣ್ಯ ಇಲಾಖೆಗೆ ಎಚ್ಚರಿಕೆ ಗಂಟೆಯಾಗಿದೆ.

ಅರಣ್ಯ ಸಿಬ್ಬಂದಿಗೆ ಫೈಯರ್‌ ಕಿಟ್‌: ಇಂಥ ಅವಘಡಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಈಗಾಗಲೇ ಅಗತ್ಯ ಸಿದ್ಧತೆ ನಡೆಸಿದೆ. ಫೈಯರ್‌ ಸೀಜನ್‌ಗೆ ಅನುಗುಣವಾಗಿ ತಾತ್ಕಾಲಿಕ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಅರಣ್ಯ ಪ್ರದೇಶದ ವಿವಿಧೆಡೆ ಬೆಂಕಿ ರಕ್ಷಣಾ ಶಿಬಿರದ ಕಾವಲುಗಾರರು ಹಾಗೂ ಸಿಬ್ಬಂದಿಗಳಿಗಾಗಿ ಕ್ಯಾಂಪ್‌ಗ್ಳನ್ನು ಹಾಕಲಾಗಿದೆ. ಮುಂಡರಗಿ ಭಾಗದ ಡೋಣಿ, ಹಿರೇವಡ್ಡಟ್ಟಿ, ಮುಂಡರಗಿ ಹಾಗೂ ಬಾಗೇವಾಡಿ ಎಂಬ ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಸ್ಕ್ವಾಡ್‌ ಇರಲಿದ್ದು, ಪ್ರತಿ ಜೀಪ್‌ನಲ್ಲಿ 7- 8 ಸಿಬ್ಬಂದಿಗಳಿರಲಿದ್ದಾರೆ. ಪ್ರತಿ ಜೀಪ್‌ ನಲ್ಲಿ 25 ಲೀಟರ್‌ ನೀರಿನ ಎರಡು ಟ್ಯಾಂಕ್‌ಗಳನ್ನಿರಿಸಿ, ಯಂತ್ರ ಚಾಲಿತ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ.

Advertisement

ಇದರಿಂದ ಧಗಧಗಿಸುವ ಬೆಂಕಿಯನ್ನೂ ನಂದಿಸಬಹುದು. ಸುರಕ್ಷತಾ ಕ್ರಮವಾಗಿ ಅರಣ್ಯ ಸಿಬ್ಬಂದಿಗೆ ಹೆಲ್ಮೆಟ್‌, ಬೆಂಕಿ ನಿರೋಧಕ ಬೂಟುಗಳನ್ನೂ ಕಲ್ಪಿಸಲಾಗಿದೆ. ಸಾಧಾರಣ ಪ್ರಮಾಣದ ಬೆಂಕಿಯನ್ನು ಸಾಂಪ್ರದಾಯಿಕ ಪದ್ಧತಿಯಂತೆ ಮರದ ಎಲೆಗಳಿಂದ ಹಾರಿಸಲಾಗುತ್ತದೆ. ಅರಣ್ಯ ಪ್ರದೇಶದ ಡೆಡ್‌ ಝೋನ್‌ ಹಾಗೂ ಅಗತ್ಯ ಪ್ರದೇಶದಲ್ಲಿ ಫೈರ್‌ ಲೈನ್‌ಗಳನ್ನು ನಿರ್ಮಿಸಲಾಗುತ್ತಿದೆ. ಸಾಮಾನ್ಯವಾಗಿ 500ರಿಂದ 1 ಕಿ.ಮೀ. ವ್ಯಾಪ್ತಿಗೊಂದರಂತೆ 10ಮೀಟರ್‌  ಅಗಲ ಫೈರ್‌ ಲೈನ್‌ ನಿರ್ಮಿಸಲಾಗುತ್ತಿದೆ. ಯಾವುದ ಸಂದರ್ಭದಲ್ಲೂ ಬೆಂಕಿ ಹೊತ್ತಿಕೊಂಡರೂ ಅದು ಹೆಚ್ಚು ವಿಸ್ತಾರಗೊಳ್ಳದಂತೆ ತಡೆಯಲು ಪರಿಣಾಮಕಾರಿ ಕ್ರಮ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಇತ್ತೀಚಿನ ವರ್ಷಗಳಲ್ಲಿ ಜನರಿಂದ ಎನ್ನುವುದಕ್ಕಿಂತ ಪವನ ವಿದ್ಯುತ್‌ ಯಂತ್ರಗಳಿಂದ ಬೆಂಕಿ ಹೊತ್ತಿಕೊಳ್ಳುತ್ತಿವೆ. 20 ವರ್ಷಗಳ ಲೀಜ್‌ ಅವಧಿಯಲ್ಲಿ ಇವುಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಆ ನಂತರ ಅವುಗಳ ಲೀಜ್‌ ಮುಂದುವರಿಸಬೇಕೋ, ಬೇಡವೋ ಎಂಬುದನ್ನು ಸರಕಾರವೇ ನಿರ್ಧರಿಸಬೇಕು. ಶಿವರಾತ್ರೇಶ್ವರಸ್ವಾಮಿ, ಮುಂಡರಗಿ ವಲಯ ಅರಣ್ಯ ಅಧಿಕಾರಿ

ಬೇಸಿಗೆಯಲ್ಲಿ ಕಪ್ಪತ್ತಗುದಲ್ಲಿ ಬೆಂಕಿ ಕಾಣಿಸಿಕೊಳ್ಳಲು ವಿಂಡ್‌ ಫ್ಯಾನ್‌ಗಳೇ ಪ್ರಮುಖ ಕಾರಣ. ಮೊನ್ನೆ ಘಟನೆ ಕುರಿತು ಸುಜಲಾನ್‌ ಕಂಪನಿ ವಿರುದ್ಧ ಎಫ್‌ಐಆರ್‌ ಕೂಡಾ ಆಗಿದೆ. ಕಾರ್ಪೋರೇಟ್‌ ವ್ಯವಸ್ಥೆಯಲ್ಲಿ ಅವುಗಳನ್ನು ಸಂಪೂರ್ಣ ಬಂದ್‌ ಮಾಡುವುದು ಕಷ್ಟಕರ. ಕನಿಷ್ಠ ಪಕ್ಷ ಬೇಸಿಗೆಯ 6 ತಿಂಗಳು ಅವುಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ನಿಂಗಪ್ಪ ಟಿ. ಪೂಜಾರ, ಕಪ್ಪತ್ತಗುಡ್ಡ ಹೋರಾಟಗಾರ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next